ಮೋದಿ–ಬಾಲೆನ್ ಶಾ ಮಹತ್ವದ ಭೇಟಿ! ಭಾರತಕ್ಕೆ ಬಂದ ನೇಪಾಳ ಪ್ರಧಾನಿ ಮುಂದಿಟ್ಟಿರುವ ಬೇಡಿಕೆಗಳೇನು? ಎರಡು ದೇಶಗಳ ನಡುವೆ ಹೊಸ ಅಧ್ಯಾಯ ಶುರುವಾಗುತ್ತಾ?

ಮೋದಿ–ಬಾಲೆನ್ ಶಾ ಮಹತ್ವದ ಭೇಟಿ! ಭಾರತಕ್ಕೆ ಬಂದ ನೇಪಾಳ ಪ್ರಧಾನಿ ಮುಂದಿಟ್ಟಿರುವ ಬೇಡಿಕೆಗಳೇನು? ಎರಡು ದೇಶಗಳ ನಡುವೆ ಹೊಸ ಅಧ್ಯಾಯ ಶುರುವಾಗುತ್ತಾ?

ಪ್ರಧಾನಿಯಾದ ಬಳಿಕ ಮೊದಲ ಅಧಿಕೃತ ದ್ವಿಪಕ್ಷೀಯ ವಿದೇಶಿ ಭೇಟಿಗೆ ಭಾರತವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ನೇಪಾಳ ಪ್ರಧಾನಿ ಬಾಲೇಂದ್ರ ಶಾ! ಪ್ರಧಾನಿ ನರೇಂದ್ರ ಮೋದಿ ಜೊತೆ ಮಹತ್ವದ ಮಾತುಕತೆ ನಡೆಸಲು ದೆಹಲಿಗೆ ಬಂದಿರುವ ಬಾಲೆನ್ ಶಾ ಭೇಟಿಯ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ. ವಿಶೇಷ ಅಂದ್ರೆ ಈ ಭೇಟಿಯಲ್ಲಿ ಕೇವಲ ಸ್ನೇಹ ಸಂಬಂಧದ ಮಾತುಕತೆ ಮಾತ್ರವಲ್ಲ, ನೇಪಾಳದ ಬಹುದಿನಗಳ ಬೇಡಿಕೆಗಳ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ. ಅಷ್ಟಕ್ಕೂ ಮೋದಿ ಮುಂದೆ ಬಾಲೆನ್ ಶಾ ಇಡಲಿರುವ ಬೇಡಿಕೆಗಳೇನು? ಎರಡು ದೇಶಗಳ ನಡುವೆ ಯಾವ ಹೊಸ ಒಪ್ಪಂದಗಳು ನಡೆಯಬಹುದು?

ಭಾರತಕ್ಕೆ ಬಂದ ನೇಪಾಳ ಪ್ರಧಾನಿ.. ದೆಹಲಿಯಲ್ಲಿ ಅದ್ಧೂರಿ ಸ್ವಾಗತ!

ಎರಡು ದಿನಗಳ ಅಧಿಕೃತ ಭಾರತ ಭೇಟಿಯಲ್ಲಿರುವ ನೇಪಾಳ ಪ್ರಧಾನಿ ಬಾಲೇಂದ್ರ ‘ಬಾಲೆನ್’ ಶಾ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಗಿದೆ.

ಈ ಭೇಟಿಯ ಭಾಗವಾಗಿ ಬಾಲೆನ್ ಶಾ ಅವರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಭೇಟಿಯಾಗಲಿದ್ದಾರೆ.

ಇದಾದ ಬಳಿಕ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸುಮಾರು 30 ನಿಮಿಷಗಳ ಮುಖಾಮುಖಿ ಸಭೆ ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ.

ಇಬ್ಬರು ಪ್ರಧಾನಿಗಳ ನಡುವಿನ ಈ ಮಾತುಕತೆ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ.

ಮೋದಿ–ಬಾಲೆನ್ ಶಾ ಒಂದೇ ವೇದಿಕೆ.. ಹೊಸ ರೈಲಿಗೆ ಗ್ರೀನ್ ಸಿಗ್ನಲ್!

ಈ ಭೇಟಿಯ ಮತ್ತೊಂದು ವಿಶೇಷ ಅಂದ್ರೆ ಭಾರತ ಮತ್ತು ನೇಪಾಳದ ನಡುವಿನ ಹೊಸ ರೈಲು ಸಂಪರ್ಕ!

ಉತ್ತರ ಪ್ರದೇಶದ ಅಯೋಧ್ಯೆ ಮತ್ತು ನೇಪಾಳದ ಜನಕಪುರ ಧಾಮ್ ನಡುವೆ ಸಂಪರ್ಕ ಕಲ್ಪಿಸುವ ಸರಯು–ಕಮಲ ಎಕ್ಸ್‌ಪ್ರೆಸ್ ಸಾಪ್ತಾಹಿಕ ರೈಲು ಸೇವೆಗೆ ಇಬ್ಬರೂ ಪ್ರಧಾನಿಗಳು ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ ಎಂದು ತಿಳಿಸಲಾಗಿದೆ.

ನವದೆಹಲಿಯಿಂದ ಆರಂಭವಾಗಲಿರುವ ಈ ರೈಲು ಸೇವೆ ಎರಡು ದೇಶಗಳ ನಡುವಿನ ಪ್ರಯಾಣ ಹಾಗೂ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ.

ನೇಪಾಳದ ಬಹುದಿನಗಳ ಬೇಡಿಕೆಗೆ ಭಾರತ ಒಪ್ಪಿಗೆ ಕೊಡುತ್ತಾ?

ಇಬ್ಬರು ಪ್ರಧಾನಿಗಳ ಮಾತುಕತೆಯಲ್ಲಿ ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆಯಿರುವ ವಿಚಾರವೇ ವಾಯು ಸಂಪರ್ಕ.

ನೇಪಾಳವು ತನ್ನ ಭೈರಹವಾ ಮತ್ತು ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ವಿಮಾನಗಳ ಸಂಚಾರ ಸುಗಮಗೊಳಿಸಲು ಭಾರತೀಯ ವಾಯುಪ್ರದೇಶದ ಮೂಲಕ ಹೆಚ್ಚುವರಿ ಪ್ರವೇಶ ಮಾರ್ಗಗಳನ್ನು ಬಹಳ ದಿನಗಳಿಂದ ಕೇಳುತ್ತಿದೆ.

ಈ ಬೇಡಿಕೆ ಕುರಿತು ಮೋದಿ ಮತ್ತು ಬಾಲೆನ್ ಶಾ ನಡುವೆ ಮಹತ್ವದ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಇದರ ಜೊತೆಗೆ ವಿಪತ್ತು ನಂತರದ ಪುನರ್‌ನಿರ್ಮಾಣಕ್ಕೆ ನೆರವು, ಅಭಿವೃದ್ಧಿ ಯೋಜನೆಗಳು ಹಾಗೂ ದ್ವಿಪಕ್ಷೀಯ ಸಹಕಾರದ ಹಲವು ವಿಷಯಗಳೂ ಮಾತುಕತೆಯ ಕಾರ್ಯಸೂಚಿಯಲ್ಲಿವೆ.

ಮೊದಲ ವಿದೇಶಿ ದ್ವಿಪಕ್ಷೀಯ ಭೇಟಿಗೆ ಭಾರತವನ್ನೇ ಆಯ್ಕೆ ಮಾಡಿದ್ದೇಕೆ?

ಮಾರ್ಚ್ 27ರಂದು ನೇಪಾಳ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಾಲೆನ್ ಶಾ, ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ತೆರಳಿದ್ದರು.

ಆದ್ರೆ ಅಧಿಕೃತ ದ್ವಿಪಕ್ಷೀಯ ವಿದೇಶಿ ಭೇಟಿಗೆ ಭಾರತವನ್ನೇ ಮೊದಲ ತಾಣವನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹ.

ನೇಪಾಳದ ಹೊಸ ಪ್ರಧಾನಿಗಳು ತಮ್ಮ ಮೊದಲ ಅಧಿಕೃತ ದ್ವಿಪಕ್ಷೀಯ ವಿದೇಶಿ ಭೇಟಿಗೆ ಭಾರತವನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ.

ಆದ್ರೆ 2024ರಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮೊದಲು ಚೀನಾಕ್ಕೆ ಭೇಟಿ ನೀಡುವ ಮೂಲಕ ಈ ಪದ್ಧತಿಯಿಂದ ಭಿನ್ನವಾದ ನಿರ್ಧಾರ ಕೈಗೊಂಡಿದ್ದರು.

ಭಾರತ–ನೇಪಾಳ ಸಂಬಂಧದಲ್ಲಿ ಹೊಸ ಅಧ್ಯಾಯ ಶುರುವಾಗುತ್ತಾ?

ಮೋದಿ ಮತ್ತು ಬಾಲೆನ್ ಶಾ ನಡುವಿನ ಮಾತುಕತೆಯ ಬಳಿಕ ಹಲವು ತಿಳುವಳಿಕೆ ಪತ್ರಗಳು ಹಾಗೂ ಜಂಟಿ ಹೇಳಿಕೆಗಳ ವಿನಿಮಯ ನಡೆಯುವ ನಿರೀಕ್ಷೆಯಿದೆ.

ಹೊಸ ರೈಲು ಸಂಪರ್ಕ, ವಿಮಾನಯಾನ ಮಾರ್ಗಗಳು ಮತ್ತು ಅಭಿವೃದ್ಧಿ ಸಹಕಾರದ ವಿಚಾರಗಳಲ್ಲಿ ಯಾವ ನಿರ್ಧಾರಗಳು ಹೊರಬೀಳಲಿವೆ ಎಂಬುದು ಕುತೂಹಲ ಮೂಡಿಸಿದೆ.

ಒಟ್ಟಿನಲ್ಲಿ ನೇಪಾಳ ಪ್ರಧಾನಿಯ ಈ ಭಾರತ ಭೇಟಿ ಎರಡು ನೆರೆಯ ರಾಷ್ಟ್ರಗಳ ಸಂಬಂಧಕ್ಕೆ ಹೊಸ ವೇಗ ನೀಡುತ್ತಾ? ನೇಪಾಳದ ಬಹುದಿನಗಳ ಬೇಡಿಕೆಗಳಿಗೆ ಭಾರತದಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಾ? ಎಂಬುದಕ್ಕೆ ಮಾತುಕತೆಯ ಫಲಿತಾಂಶವೇ ಉತ್ತರ ನೀಡಬೇಕಿದೆ.

Leave a Reply

Your email address will not be published. Required fields are marked *