ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಬೆಂಗಳೂರು ಕೇಂದ್ರ ಸೈಬರ್ ಪೊಲೀಸರ ತನಿಖೆ ವೇಳೆ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣಕ್ಕೆ ನೆರೆ ರಾಜ್ಯದ ನಂಟು ಕಂಡುಬಂದಿದ್ದು, ಕೇರಳ ಮೂಲದ ವ್ಯಕ್ತಿಗೆ ನೋಟಿಸ್ ಕೊಡಲಾಗಿದೆ. 2 ಬಾರಿ ನೋಟಿಸ್ ನೀಡಿದ್ರೂ ಆತ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದ್ದು, ಈತ ಕೃಪಾ ಆಳ್ವಾ ಸಂಪರ್ಕದಲ್ಲಿದ್ದ ಎಂಬುದು ಗೊತ್ತಾಗಿದೆ. ಇದೇ ವ್ಯಕ್ತಿಯ ಮೂಲಕ ಸ್ಟಿಂಗ್ ಆಪರೇಷನ್ನಲ್ಲಿದ್ದ ಮಹಿಳೆ ಕೃಪಾ ಆಳ್ವಾರನ್ನು ಸಂಪರ್ಕಿಸಿದ್ದಳು. ಕೃಪಾ ಆಳ್ವಾ ಮಕ್ಕಳ
ಆಯೋಗದಲ್ಲಿದ್ದ ಸಂದರ್ಭದಲ್ಲಿ ಕೇರಳದ ಈತ ಕಚೇರಿಯಲ್ಲಿ ಭಾಷಾಂತರನಾಗಿ ಕೆಲಸ ಮಾಡ್ತಿದ್ದ ಮಾಹಿತಿ ಸಿಕ್ಕಿದೆ. ಆದ್ರೆ ಈ ವ್ಯಕ್ತಿಗೂ ಸ್ಟಿಂಗ್ನಲ್ಲಿದ್ದ ಮಹಿಳೆ ಸಂಪರ್ಕ ಇರೋದು ನಿಜಾನಾ? ಕೃಪಾ ಆಳ್ವಾ ಬಳಿ ಮಹಿಳೆಯನ್ನ ಕರೆತಂದಿದ್ದು ಇದೇ ವ್ಯಕ್ತಿನಾ? ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರು, ನವೆಂಬರ್ 28: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ವಿಡಿಯೋ ಪ್ರಕರಣದ ತನಿಖೆ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಬೆಂಗಳೂರು ಸೈಬರ್ ಕ್ರೈಂ ಪೊಲೀಸರ ತನಿಖೆಯಲ್ಲಿ ಕರ್ನಾಟಕ, ದೆಹಲಿ ಬಳಿಕ ಇದೀಗ ಕೇರಳದ ಸಂಪರ್ಕದ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಿದೆ.
ಮಾಜಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರ ಪರಿಚಿತರಾಗಿದ್ದ ಕೇರಳ ಮೂಲದ ವ್ಯಕ್ತಿಗೆ ಪೊಲೀಸರು ಎರಡು ಬಾರಿ ನೋಟಿಸ್ ನೀಡಿದ್ದಾರೆ. ಆದರೂ ವಿಚಾರಣೆಗೆ ಹಾಜರಾಗಿಲ್ಲ ಎಂದು ವರದಿಯಾಗಿದೆ.
ಎರಡು ಬಾರಿ ನೋಟಿಸ್ ಪಡೆದ ವ್ಯಕ್ತಿ ಯಾರು?ಕೇರಳದ ಕಣ್ಣೂರು ಜಿಲ್ಲೆಯ ಕೂತುಪರಂಬ ಮೂಲದ ಸಿ.ಕೆ. ಬಾಲರಾಜ್ ಎಂಬ ವ್ಯಕ್ತಿಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಪೂರ್ವ ಬೆಂಗಳೂರಿನಲ್ಲಿ ವಾಸವಿರುವ ಇವರು ವಕೀಲರಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಕೃಪಾ ಆಳ್ವಾ ಅವರು ಮಕ್ಕಳ ಆಯೋಗದಲ್ಲಿದ್ದ ಸಂದರ್ಭದಲ್ಲಿ ಬಾಲರಾಜ್ ಭಾಷಾಂತರಕಾರರಾಗಿ ಕೆಲಸ ಮಾಡಿದ್ದರು ಎನ್ನಲಾಗಿದೆ. ಸ್ಟಿಂಗ್ ಆಪರೇಷನ್ ವಿಡಿಯೋದಲ್ಲಿದ್ದ ಕೇರಳದ ಮಹಿಳೆ ಹಾಗೂ ಕೃಪಾ ಆಳ್ವಾ ನಡುವೆ ಸಂಪರ್ಕ ಕಲ್ಪಿಸಿದ್ದು ಇದೇ ವ್ಯಕ್ತಿ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
2023ರಲ್ಲೇ ಸ್ಟಿಂಗ್ ಆಪರೇಷನ್ ವಿಡಿಯೋ ಚಿತ್ರೀಕರಣ!ಈ ಪ್ರಕರಣದಲ್ಲಿ ಗಮನಿಸಬೇಕಾದ ಪ್ರಮುಖ ಸಂಗತಿ ಎಂದರೆ, ವಿಡಿಯೋ ಚಿತ್ರೀಕರಣವಾಗಿದ್ದು 2023ರ ಫೆಬ್ರವರಿಯಲ್ಲಿ. ಆದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು 2026ರ ಸೆಪ್ಟೆಂಬರ್ನಲ್ಲಿ.
ವರದಿಗಳ ಪ್ರಕಾರ, ಕೃಪಾ ಆಳ್ವಾ ಅವರು ಪವರ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಹಾಗೂ ಕ್ಯಾಮೆರಾಮನ್ ಪ್ರಶಾಂತ್ ಕುಮಾರ್ ಅವರಿಗೆ ಮಹಿಳೆಯನ್ನು ಪರಿಚಯಿಸಿದ್ದರು. ಬಳಿಕ ಗುಪ್ತ ಕ್ಯಾಮೆರಾ ಬಳಸಿ ಮಾತುಕತೆಯನ್ನು ಚಿತ್ರೀಕರಿಸಲಾಗಿತ್ತು ಎನ್ನಲಾಗಿದೆ.
2023ರ ವಿಧಾನಸಭಾ ಚುನಾವಣೆಗೂ ಮುನ್ನ ಚಿತ್ರೀಕರಿಸಿದ್ದ ವಿಡಿಯೋ ಅಂದು ಪ್ರಸಾರವಾಗಿರಲಿಲ್ಲ. ಮೂರು ವರ್ಷಗಳ ಬಳಿಕ ಅದು ಸಾಮಾಜಿಕ ಜಾಲತಾಣಕ್ಕೆ ಬಂದಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ
ಸಿದ್ದರಾಮಯ್ಯ ಅವರನ್ನು ಭೇಟಿಯೇ ಮಾಡಿಲ್ಲ ಎಂದ ಮಹಿಳೆ!ಪ್ರಕರಣದ ತನಿಖೆಯಲ್ಲಿ ಅತ್ಯಂತ ಮಹತ್ವದ ಬೆಳವಣಿಗೆ ಎಂದರೆ ವಿಡಿಯೋದಲ್ಲಿರುವ ಮಹಿಳೆಯ ಹೇಳಿಕೆ.
ಪೊಲೀಸರ ವಿಚಾರಣೆ ಸಂದರ್ಭದಲ್ಲಿ ತಾನು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಯೇ ಇಲ್ಲ ಎಂದು ಮಹಿಳೆ ಹೇಳಿರುವುದಾಗಿ ವರದಿಯಾಗಿದೆ. ಇತರರ ಸೂಚನೆಯ ಮೇರೆಗೆ ಅಂತಹ ಹೇಳಿಕೆ ನೀಡಿದ್ದಾಗಿ ಮಹಿಳೆ ವಿಚಾರಣೆ ವೇಳೆ ತಿಳಿಸಿದ್ದಾಳೆ ಎನ್ನಲಾಗಿದೆ.
ಅಕ್ಟೋಬರ್ 29ರಂದು ಬೆಂಗಳೂರು ಪೊಲೀಸರು ನೀಡಿದ್ದ ಅಧಿಕೃತ ಹೇಳಿಕೆಯಲ್ಲಿಯೂ ವಿಡಿಯೋದಲ್ಲಿ ಮಾಡಲಾಗಿದ್ದ ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳು ಈವರೆಗಿನ ತನಿಖೆಯಲ್ಲಿ ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ದೆಹಲಿಗೂ ಸ್ಟಿಂಗ್ ಆಪರೇಷನ್ ಪ್ರಕರಣದ ನಂಟು!
ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಲು ಬಳಸಲಾಗಿತ್ತು ಎನ್ನಲಾದ ಮೊಬೈಲ್ ಫೋನ್ ದೆಹಲಿಯಲ್ಲಿ ಖರೀದಿಸಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಈ ಪ್ರಕರಣದಲ್ಲಿ ರಿತೇಶ್ ಪಾಂಡೆ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಬಳಿಕ ಅವರಿಗೆ ಜಾಮೀನು ದೊರೆತಿದೆ.
ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದೊಂದಿಗೆ ಸಂಪರ್ಕ ಹೊಂದಿದ್ದ ಕೆಲವು ವ್ಯಕ್ತಿಗಳ ಪಾತ್ರದ ಕುರಿತೂ ತನಿಖೆ ನಡೆಯುತ್ತಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿ ಮೊಬೈಲ್ ಹಸ್ತಾಂತರಿಸಲಾಗಿತ್ತು ಎಂಬ ಹೇಳಿಕೆಯೂ ವಿಚಾರಣೆ ವೇಳೆ ಕೇಳಿಬಂದಿದೆ.
ಆದರೆ ಈ ಮಾಹಿತಿ ವಿಚಾರಣೆ ವೇಳೆ ದೊರೆತ ಹೇಳಿಕೆಯನ್ನು ಆಧರಿಸಿದ್ದು, ಅದರ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ
ಕಾಂಗ್ರೆಸ್ನಿಂದ ಕೃಪಾ ಆಳ್ವಾ ಉಚ್ಚಾಟನೆ!ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅಕ್ಟೋಬರ್ 27ರಂದು ಕೃಪಾ ಆಳ್ವಾ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ವಿದೇಶ ಪ್ರವಾಸ ಮುಗಿಸಿ ನವೆಂಬರ್ 7ರಂದು ಬೆಂಗಳೂರಿಗೆ ಮರಳಿದ್ದ ಕೃಪಾ ಆಳ್ವಾ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
ಇನ್ನು ಈ ಪ್ರಕರಣದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.