ಜಪಾನ್ ವಿದೇಶಾಂಗ ರಾಜ್ಯ ಸಚಿವರೊಂದಿಗೆ ಸಿಎಂ ಡಿಕೆ ಶಿವಕುಮಾರ್ ಮಾತುಕತೆ
ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಟೋಕಿಯೊದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಅವರನ್ನು ಭೇಟಿಯಾಗಿ ಕರ್ನಾಟಕ-ಜಪಾನ್ ಸಹಕಾರ ವಿಸ್ತರಣೆ ಕುರಿತು ಚರ್ಚಿಸಿದ್ದಾರೆ. 2027ರ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಜಪಾನ್ ನಿಯೋಗವನ್ನು ಆಹ್ವಾನಿಸಿ, ವಿಶೇಷ ಜಪಾನ್ ಪೆವಿಲಿಯನ್ ಸ್ಥಾಪಿಸುವ ಪ್ರಸ್ತಾವ ಮುಂದಿಟ್ಟಿದ್ದಾರೆ.
ಜಪಾನ್ ಪ್ರವಾಸದಲ್ಲಿರುವ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಟೋಕಿಯೊದಲ್ಲಿ ಜಪಾನ್ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕರ್ನಾಟಕ ಮತ್ತು ಜಪಾನ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.
ಕರ್ನಾಟಕ ಮತ್ತು ಜಪಾನ್ ನಡುವಿನ ಆರ್ಥಿಕ ಸಹಕಾರ ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಹತ್ವವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒತ್ತಿಹೇಳಿದ್ದಾರೆ. ರಾಜ್ಯದಲ್ಲಿ ಜಪಾನ್ ಹೂಡಿಕೆಗಳನ್ನು ಹೆಚ್ಚಿಸುವಂತೆ ಆಹ್ವಾನಿಸಿದ ಅವರು, 2027ರಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲು ಜಪಾನ್ ಸರ್ಕಾರದ ಉನ್ನತ ಮಟ್ಟದ ನಿಯೋಗಕ್ಕೆ ಆಹ್ವಾನ ನೀಡಿದ್ದಾರೆ. ಜೊತೆಗೆ, ಸಮಾವೇಶದಲ್ಲಿ ಜಪಾನ್ಗಾಗಿ ವಿಶೇಷ ‘ಕಂಟ್ರಿ ಪೆವಿಲಿಯನ್’ ಸ್ಥಾಪಿಸುವ ಪ್ರಸ್ತಾವವನ್ನೂ ಮುಂದಿಟ್ಟಿದ್ದಾರೆ.
ಬೆಂಗಳೂರು ಮೂಲಸೌಕರ್ಯಕ್ಕೆ ಜಪಾನ್ ಬೆಂಬಲಕ್ಕೆ ಸಿಎಂ ಕೃತಜ್ಞತೆ
ಬೆಂಗಳೂರು ಮೆಟ್ರೋ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಜಪಾನ್ ನೀಡುತ್ತಿರುವ ನಿರಂತರ ಬೆಂಬಲಕ್ಕೆ ಸಿಎಂ ಕೃತಜ್ಞತೆ ಸಲ್ಲಿಸಿದ್ದಾರೆ. ಕರ್ನಾಟಕದ ಅಭಿವೃದ್ಧಿ ಆದ್ಯತೆಗಳಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಕಾರ ನೀಡುವಂತೆ ಜಪಾನ್ ಸಚಿವರನ್ನು ಕೋರಿದ್ದಾರೆ.
ಮುಖ್ಯಮಂತ್ರಿ ನೇತೃತ್ವದ ನಿಯೋಗವನ್ನು ಆತ್ಮೀಯವಾಗಿ ಸ್ವಾಗತಿಸಿದ ಜಪಾನ್ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಯಸುತಾಕಾ ನಕಾಸೋನೆ, ಭಾರತ ಮತ್ತು ಜಪಾನ್ ನಡುವಿನ ಬಲವಾದ ಹಾಗೂ ದೀರ್ಘಕಾಲದ ಸ್ನೇಹ ಸಂಬಂಧವನ್ನು ಶ್ಲಾಘಿಸಿದ್ದಾರೆ. ಜಪಾನ್ ಹೂಡಿಕೆಗಳಿಗೆ ಕರ್ನಾಟಕ ಪ್ರಮುಖ ತಾಣವಾಗಿರುವುದನ್ನು ಅವರು ಒತ್ತಿಹೇಳಿದ್ದು, ರಾಜ್ಯದೊಂದಿಗೆ ನಿರಂತರ ಸಹಕಾರ ಮತ್ತು ಸಂಪರ್ಕವನ್ನು ಸ್ವಾಗತಿಸಿದ್ದಾರೆ.
ಈ ಭೇಟಿಯು ಜಪಾನ್ನೊಂದಿಗೆ ಕರ್ನಾಟಕದ ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ಹಾಗೂ ರಾಜ್ಯಕ್ಕೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವ ಪ್ರಯತ್ನದ ಭಾಗವಾಗಿದೆ ಎಂದು ಸಿಎಂ ಕಚೇರಿ ತಿಳಿಸಿದೆ.
2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನ
2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಜಪಾನ್ನ ಉನ್ನತ ಮಟ್ಟದ ನಿಯೋಗವನ್ನು ಸಿಎಂ ಡಿಕೆ ಶಿವಕುಮಾರ್ ಆಹ್ವಾನಿಸಿದ್ದಾರೆ.
ಈ ಸಮಾವೇಶದಲ್ಲಿ ಜಪಾನ್ ದೇಶಕ್ಕಾಗಿಯೇ ವಿಶೇಷ ಪ್ರದರ್ಶನ ಮಳಿಗೆ (Japan Country Pavilion) ಸ್ಥಾಪಿಸುವ ಪ್ರಸ್ತಾಪವನ್ನೂ ಮುಂದಿಟ್ಟಿದ್ದಾರೆ.
ನಮ್ಮ ಮೆಟ್ರೋ, ಜಲಮಂಡಳಿ ಯೋಜನೆಗಳಿಗೆ ಜಪಾನ್ ಸಹಕಾರ
ಬೆಂಗಳೂರಿನ ಪ್ರಮುಖ ಮೂಲಸೌಕರ್ಯ ಯೋಜನೆಗಳಾದ ನಮ್ಮ ಮೆಟ್ರೋ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯೋಜನೆಗಳಿಗೆ ಜಪಾನ್ ನೀಡುತ್ತಿರುವ ಸಹಕಾರವನ್ನು ಮುಖ್ಯಮಂತ್ರಿ ಶ್ಲಾಘಿಸಿದರು.
ಭವಿಷ್ಯದಲ್ಲಿಯೂ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಜಪಾನ್ನ ಸಹಕಾರ ಮುಂದುವರಿಯಬೇಕು ಎಂದು ಮನವಿ ಮಾಡಿದರು
ಭಾರತ-ಜಪಾನ್ ಸಂಬಂಧಕ್ಕೆ 75 ವರ್ಷ
2027ಕ್ಕೆ ಭಾರತ ಮತ್ತು ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧ ಸ್ಥಾಪನೆಯಾಗಿ 75 ವರ್ಷಗಳು ಪೂರ್ಣಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ನಡುವಿನ ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಇಂಗಿತವನ್ನು ಜಪಾನ್ ಸಚಿವ ನಕಾಸೋನೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಈಗಾಗಲೇ ಹಲವು ಜಪಾನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದೊಂದಿಗಿನ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಜಪಾನ್ ಆಸಕ್ತಿ ತೋರಿದೆ
