ಟೋಲ್ ಕಟ್ಟದೆ ಎಸ್ಕೇಪ್ ಆಗುವ ವಾಹನಗಳಿಗೆ ಬ್ರೇಕ್! ಟೋಲ್ ಪ್ಲಾಜಾಗಳಲ್ಲಿ ಪೊಲೀಸರ ನಿಯೋಜನೆಗೆ NHAI ಪ್ಲಾನ್!

ಟೋಲ್ ಕಟ್ಟದೆ ಎಸ್ಕೇಪ್ ಆಗುವ ವಾಹನಗಳಿಗೆ ಬ್ರೇಕ್! ಟೋಲ್ ಪ್ಲಾಜಾಗಳಲ್ಲಿ ಪೊಲೀಸರ ನಿಯೋಜನೆಗೆ NHAI ಪ್ಲಾನ್!

ನಂಬರ್ ಪ್ಲೇಟ್ ಮುಚ್ಚಿ, FASTag ಮರೆಮಾಚಿ ಟೋಲ್ ವಂಚನೆ! ಇನ್ಮುಂದೆ ಪೊಲೀಸರ ಕಣ್ಗಾವಲಿನಲ್ಲಿ ಬ್ಯಾರಿಯರ್‌ಲೆಸ್ ಟೋಲ್ ಗೇಟ್‌ಗಳು!

ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿ ವ್ಯವಸ್ಥೆಯೇ ಬದಲಾಗುತ್ತಿದೆ. ವಾಹನಗಳು ಟೋಲ್ ಗೇಟ್‌ಗಳಲ್ಲಿ ನಿಲ್ಲುವ ಅಗತ್ಯವಿಲ್ಲ, ಬ್ಯಾರಿಯರ್ ತೆರೆಯುವವರೆಗೂ ಕಾಯಬೇಕಿಲ್ಲ. FASTag ಮೂಲಕ ಸ್ವಯಂಚಾಲಿತವಾಗಿ ಟೋಲ್ ಹಣ ಕಡಿತವಾಗುವ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ, ಇದೇ ವ್ಯವಸ್ಥೆಯನ್ನೇ ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಟೋಲ್ ಕಟ್ಟದೆ ಸಾವಿರಾರು ವಾಹನಗಳು ಆರಾಮವಾಗಿ ಸಂಚರಿಸುತ್ತಿರುವುದು ಈಗ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹೌದು, ಈ ಸಮಸ್ಯೆಗೆ ಕಡಿವಾಣ ಹಾಕಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಇದೀಗ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಬ್ಯಾರಿಯರ್‌ಲೆಸ್ ಟೋಲ್ ಪ್ಲಾಜಾಗಳಲ್ಲಿ ಪೊಲೀಸ್ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸುವಂತೆ ಮನವಿ ಮಾಡಿದೆ.

ಅಷ್ಟಕ್ಕೂ ಟೋಲ್ ವಂಚನೆ ಹೇಗೆ ನಡೆಯುತ್ತಿದೆ?
ಸಾಮಾನ್ಯವಾಗಿ ವಾಹನದ FASTag ಮತ್ತು ಅದರ ನಂಬರ್ ಪ್ಲೇಟ್ ಅನ್ನು ಗುರುತಿಸಿ ಟೋಲ್ ಹಣ ಕಡಿತ ಮಾಡುವ ವ್ಯವಸ್ಥೆ ಇದಾಗಿದೆ. ಆದರೆ ಕೆಲವು ವಾಹನ ಸವಾರರು ಟೋಲ್ ಪಾವತಿಯಿಂದ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್‌ಗಳನ್ನು ಮುಚ್ಚುವುದು, ಬದಲಾಯಿಸುವುದು, ನಕಲಿ ನಂಬರ್ ಪ್ಲೇಟ್ ಬಳಸುವುದು ಹಾಗೂ FASTag ಗುರುತಿಸಲಾಗದಂತೆ ಮಾಡುತ್ತಿರುವ ಆರೋಪಗಳಿವೆ.
ಇಂತಹ ವಾಹನಗಳನ್ನು ‘Unidentified Vehicles’ ಎಂದು ಗುರುತಿಸಲಾಗುತ್ತಿದೆ. ವಾಹನದ ಗುರುತು ಪತ್ತೆಯಾಗದ ಕಾರಣ ಟೋಲ್ ಹಣ ವಸೂಲಿ ಮಾಡುವುದು ಕೂಡ ಕಷ್ಟವಾಗುತ್ತಿದೆ.

ಒಂದು ಲಕ್ಷಕ್ಕೂ ಹೆಚ್ಚು ವಾಹನಗಳು ನಾಪತ್ತೆ!
NHAI ನೀಡಿರುವ ಮಾಹಿತಿಯ ಪ್ರಕಾರ, ರಾಜಸ್ಥಾನದ NH-48 ಹೆದ್ದಾರಿಯ ಮನೋಹರ್‌ಪುರ ಟೋಲ್ ಪ್ಲಾಜಾದಲ್ಲಿ ಅಕ್ಟೋಬರ್ 21ರವರೆಗೆ 31.74 ಲಕ್ಷ ವಾಹನಗಳು ಸಂಚರಿಸಿವೆ. ಈ ಪೈಕಿ 99,500ಕ್ಕೂ ಹೆಚ್ಚು ವಾಹನಗಳನ್ನು ಗುರುತಿಸಲು ಸಾಧ್ಯವಾಗಿಲ್ಲ.
ಇನ್ನು ರಾಜಸ್ಥಾನದ ಶಹಜಹಾನ್‌ಪುರ ಟೋಲ್ ಪ್ಲಾಜಾದಲ್ಲಿ ಪ್ರತಿ 10 ವಾಹನಗಳಲ್ಲಿ ಕನಿಷ್ಠ ಒಂದು ವಾಹನ ಗುರುತಿಸಲಾಗದಿರುವುದು ಆತಂಕಕ್ಕೆ ಕಾರಣವಾಗಿದೆ.

ಇನ್ಮುಂದೆ ಪೊಲೀಸರ ಹದ್ದಿನ ಕಣ್ಣು!
ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಮನೋಹರ್‌ಪುರ ಟೋಲ್ ಪ್ಲಾಜಾ ಬಳಿ ತಾತ್ಕಾಲಿಕ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ನಂಬರ್ ಪ್ಲೇಟ್ ಮುಚ್ಚಿಕೊಂಡು ಅಥವಾ ತಿರುಚಿಕೊಂಡು ಸಂಚರಿಸುವ ವಾಹನಗಳನ್ನು ತಡೆದು ಪರಿಶೀಲಿಸುವಂತೆ NHAI ಸೂಚಿಸಿದೆ. ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಂದ ವಿಶೇಷ ಕಾರ್ಯಾಚರಣೆ ನಡೆಸುವಂತೆ ಮನವಿ ಮಾಡಿದೆ.
ಈಗಾಗಲೇ ಹರಿಯಾಣದ ಘರೌಂಡಾ ಟೋಲ್ ಪ್ಲಾಜಾ ಬಳಿಯೂ ಇಂತಹ ವಾಹನಗಳನ್ನು ಪತ್ತೆಹಚ್ಚಲು ಪೊಲೀಸರು ಚೆಕ್‌ಪೋಸ್ಟ್ ಸ್ಥಾಪಿಸಿದ್ದಾರೆ.
ಸಿಕ್ಕಿಬಿದ್ದ ವಾಹನ ಸವಾರರಿಗೆ ಪೊಲೀಸರು ಸಂಚಾರ ನಿಯಮ ಉಲ್ಲಂಘನೆಯ ದಂಡ ವಿಧಿಸುವುದರ ಜೊತೆಗೆ, ಬಾಕಿ ಇರುವ ಟೋಲ್ ಹಣಕ್ಕಾಗಿ NHAI ಕೂಡ ಇ-ನೋಟಿಸ್ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *