ದಾವೂದ್ ಇಬ್ರಾಹಿಂ ವಾಸವಿದ್ದ ಮನೆಗೆ ಬುಲ್ಡೋಜರ್ ಎಂಟ್ರಿ! 80 ವರ್ಷಗಳ ಇತಿಹಾಸದ ಕಟ್ಟಡ ನೆಲಸಮಕ್ಕೆ ಸಿದ್ಧತೆ.. ಏನಿದು ಹೊಸ ವಿವಾದ?

ದಾವೂದ್ ಇಬ್ರಾಹಿಂ ವಾಸವಿದ್ದ ಮನೆಗೆ ಬುಲ್ಡೋಜರ್ ಎಂಟ್ರಿ! 80 ವರ್ಷಗಳ ಇತಿಹಾಸದ ಕಟ್ಟಡ ನೆಲಸಮಕ್ಕೆ ಸಿದ್ಧತೆ.. ಏನಿದು ಹೊಸ ವಿವಾದ?

ಮುಂಬೈನ ಭೆಂಡಿ ಬಜಾರ್‌ನಲ್ಲಿರುವ ದಾವೂದ್ ಇಬ್ರಾಹಿಂನ ಹಳೆಯ ಮನೆ ಇನ್ನು ನೆನಪಷ್ಟೇ! ಕಟ್ಟಡ ಕೆಡವಲು BMC ನಿರ್ಧಾರ.. ಆದರೆ ಸ್ಥಳೀಯರ ವಿರೋಧಕ್ಕೆ ಕಾರಣವೇನು?

ಮುಂಬೈ ಭೂಗತ ಲೋಕದ ಕುಖ್ಯಾತ ಹೆಸರು ದಾವೂದ್ ಇಬ್ರಾಹಿಂ! ಒಂದು ಕಾಲದಲ್ಲಿ ಆತನ ಹೆಸರೇ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇದೀಗ ದಾವೂದ್ ಇಬ್ರಾಹಿಂನ ಹಿಂದಿನ ಬದುಕಿನ ನೆನಪುಗಳನ್ನು ಹೊತ್ತಿರುವ ಮುಂಬೈನ ಹಳೆಯ ಕಟ್ಟಡವೊಂದು ನೆಲಸಮವಾಗಲು ಸಿದ್ಧವಾಗಿದೆ. ಬರೋಬ್ಬರಿ 80 ವರ್ಷಗಳ ಇತಿಹಾಸ ಹೊಂದಿರುವ ಈ ಕಟ್ಟಡವನ್ನು ಕೆಡವಲು ಬೃಹನ್‌ಮುಂಬೈ ಮಹಾನಗರ ಪಾಲಿಕೆ (BMC) ಮುಂದಾಗಿದೆ. ಆದರೆ ಈ ನಿರ್ಧಾರ ಇದೀಗ ಮತ್ತೊಂದು ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ.

ಅಷ್ಟಕ್ಕೂ ಯಾವುದು ಈ ಕಟ್ಟಡ?
ಮುಂಬೈನ ಭೆಂಡಿ ಬಜಾರ್‌ನ ಪಕ್ಮೋಡಿಯಾ ಲೇನ್‌ನಲ್ಲಿರುವ ‘ಹಾಜಿ ಇಸ್ಮಾಯಿಲ್ ಹಬೀಬ್ ಮುಸಾಫಿರ್ಖಾನಾ’ ಕಟ್ಟಡವೇ ಈಗ ಸುದ್ದಿಯ ಕೇಂದ್ರಬಿಂದು. 1939ರಲ್ಲಿ ನಿರ್ಮಾಣವಾಗಿದ್ದ ಈ ಕಟ್ಟಡದಲ್ಲಿ ದಾವೂದ್ ಇಬ್ರಾಹಿಂ ಮತ್ತು ಆತನ ಕುಟುಂಬ ಒಂದು ಕಾಲದಲ್ಲಿ ವಾಸವಿತ್ತು. ಭಾರತ ತೊರೆಯುವ ಮೊದಲು ದಾವೂದ್‌ನ ಕುಟುಂಬಕ್ಕೆ ಈ ಕಟ್ಟಡವೇ ನೆಲೆಯಾಗಿತ್ತು ಎನ್ನಲಾಗಿದೆ. ಹೀಗಾಗಿ ಈ ಕಟ್ಟಡಕ್ಕೆ ಭೂಗತ ಲೋಕದ ಇತಿಹಾಸದೊಂದಿಗೂ ನಂಟಿದೆ.

ಕಟ್ಟಡ ಕೆಡವಲು ಮುಂದಾಗಿದ್ದೇಕೆ?
ಸುಮಾರು ಎಂಟು ದಶಕಗಳಷ್ಟು ಹಳೆಯದಾದ ಈ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ನಿವಾಸಿಗಳ ಸುರಕ್ಷತೆಯ ದೃಷ್ಟಿಯಿಂದ ಅದನ್ನು ಕೆಡವುವ ನಿರ್ಧಾರ ಕೈಗೊಳ್ಳಲಾಗಿದೆ. BMC ಈ ಕಟ್ಟಡವನ್ನು ಅತ್ಯಂತ ಅಪಾಯಕಾರಿ ಕಟ್ಟಡಗಳ ಪಟ್ಟಿಗೆ ಸೇರಿಸಿದ್ದು, ನವೆಂಬರ್ 18 ಮತ್ತು 19ರಂದು ತೆರವು ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಬಾಂಬೆ ಹೈಕೋರ್ಟ್‌ನ ಹಿಂದಿನ ಆದೇಶವೂ ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಅಸಲಿ ವಿವಾದ ಶುರುವಾಗಿದ್ದೇ ಆಸ್ತಿ ಹಕ್ಕಿನ ವಿಚಾರದಲ್ಲಿ!
ಈ ಕಟ್ಟಡವನ್ನು ಸೈಫಿ ಬುರ್ಹಾನಿ ಅಪ್ಲಿಫ್ಟ್‌ಮೆಂಟ್ ಟ್ರಸ್ಟ್ (SBUT) ಖರೀದಿಸಿ ಪುನರ್‌ಅಭಿವೃದ್ಧಿ ಮಾಡಲು ಮುಂದಾಗಿತ್ತು. ಆದರೆ ಈ ಆಸ್ತಿ ವಕ್ಫ್ ಮಂಡಳಿಗೆ ಸೇರಿದ್ದು, ಅದನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂಬ ಆಕ್ಷೇಪ ಕೇಳಿಬಂದಿತ್ತು. ಕಟ್ಟಡದಲ್ಲಿರುವ ಪ್ರಾರ್ಥನಾ ಸ್ಥಳ ಮಸೀದಿಯೇ ಅಥವಾ ಪ್ರಾರ್ಥನಾ ಸಭಾಂಗಣವೇ ಎಂಬ ವಿಚಾರವೂ ವಿವಾದಕ್ಕೆ ಕಾರಣವಾಗಿತ್ತು.

ಈ ಸಂಬಂಧ 2019ರಲ್ಲಿ ಬಾಂಬೆ ಹೈಕೋರ್ಟ್ ಕಟ್ಟಡ ಮಾರಾಟಕ್ಕೆ ನೀಡಿದ್ದ ಅನುಮತಿಯನ್ನು ಎತ್ತಿಹಿಡಿದಿತ್ತು. ಆದರೆ 2020ರಲ್ಲಿ ಸುಪ್ರೀಂ ಕೋರ್ಟ್ ಪುನರ್‌ಅಭಿವೃದ್ಧಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ್ದರಿಂದ ವಿವಾದ ಮತ್ತಷ್ಟು ತೀವ್ರಗೊಂಡಿತ್ತು.
ಇತ್ತೀಚಿನ ಬೆಳವಣಿಗೆಯಲ್ಲಿ ವಕ್ಫ್ ಟ್ರಿಬ್ಯುನಲ್ ಆಸ್ತಿಯ ಕುರಿತಂತೆ ನೀಡಿರುವ ಆದೇಶವನ್ನು ಮುಂದಿಟ್ಟುಕೊಂಡು ಸ್ಥಳೀಯರು ಕಟ್ಟಡ ಕೆಡವುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. BMC ಕೇವಲ 24 ಗಂಟೆಗಳ ನೋಟಿಸ್ ನೀಡಿದೆ ಎಂಬ ಆರೋಪವನ್ನೂ ಕೆಲವರು ಮಾಡಿದ್ದಾರೆ.

ಒಂದೆಡೆ ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಿ ಸುರಕ್ಷತೆ ಕಾಪಾಡಬೇಕೆಂಬ ಮಹಾನಗರ ಪಾಲಿಕೆಯ ನಿಲುವು, ಮತ್ತೊಂದೆಡೆ ಆಸ್ತಿಯ ಮಾಲೀಕತ್ವ ಮತ್ತು ಕಾನೂನು ಪ್ರಕ್ರಿಯೆಗಳ ಬಗ್ಗೆ ಸ್ಥಳೀಯರ ಆಕ್ಷೇಪ. ಈ ಎರಡು ವಿಚಾರಗಳ ನಡುವೆ ದಾವೂದ್ ಇಬ್ರಾಹಿಂನ ಹಳೆಯ ಮನೆಯ ಭವಿಷ್ಯ ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *