ಮೂಡಿಗೆರೆ ಭಾಗದಲ್ಲಿ 38 ಕಾಡಾನೆಗಳಿವೆ, ಜನರಿಗೆ ಅರಣ್ಯ ಇಲಾಖೆ ಎಚ್ಚರಿಕೆ ಸಂದೇಶ!!

ಮೂಡಿಗೆರೆ ಭಾಗದಲ್ಲಿ 38 ಕಾಡಾನೆಗಳಿವೆ, ಜನರಿಗೆ ಅರಣ್ಯ ಇಲಾಖೆ ಎಚ್ಚರಿಕೆ ಸಂದೇಶ!!

ಭದ್ರಾ ಅಭಯಾರಣ್ಯಕ್ಕೆ ಕಾಡಾನೆ ಓಡಿಸುವ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಚಿಕ್ಕಮಗಳೂರು ಡಿಎಫ್​ಒ ಬೋರಯ್ಯ ತಿಳಿಸಿದ್ದಾರೆ. ಮೂಡಿಗೆರೆ ವ್ಯಾಪ್ತಿಯ ಬಾರದಹಳ್ಳಿ ಮತ್ತು ಮಾಕೋನಹಳ್ಳಿ ಭಾಗದಲ್ಲಿ 38 ಕಾಡಾನೆಗಳ ಎರಡು ಗುಂಪುಗಳನ್ನು ಗುರುತಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಮತ್ತು ತೋಟದ ಕೆಲಸಗಾರರು ಎಚ್ಚರದಿಂದಿರುವಂತೆ ಅರಣ್ಯ ಇಲಾಖೆ ಸೂಚಿಸಿದೆ.

ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಭಾನುವಾರ ಮಧ್ಯರಾತ್ರಿಯೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಚಿಕ್ಕಮಗಳೂರು ವಿಭಾಗದ ಡಿಎಫ್‌ಒ ಬೋರಯ್ಯ ತಿಳಿಸಿದ್ದಾರೆ. ಮುಂದಿನ ಸ್ಪಷ್ಟ ಸೂಚನೆ ಬರುವವರೆಗೂ ಕಾಡಾನೆಗಳನ್ನು ಓಡಿಸುವ ಯಾವುದೇ ಪ್ರಯತ್ನ ನಡೆಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ದ್ಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 38 ಕಾಡಾನೆಗಳು ಇರುವುದನ್ನು ಅರಣ್ಯ ಇಲಾಖೆ ಖಚಿತಪಡಿಸಿದೆ. ಈ ಆನೆಗಳು ಎರಡು ಗುಂಪುಗಳಾಗಿ ವಿಭಜನೆಯಾಗಿವೆ. ಒಂದು ಗುಂಪು ಬಾರದಹಳ್ಳಿ ಪ್ರದೇಶದಲ್ಲಿದ್ದರೆ, ಮತ್ತೊಂದು ಗುಂಪು ಮಾಕೋನಹಳ್ಳಿ ಬಳಿ ಇದೆ. ಇವೆರಡರ ನಡುವೆ ಸುಮಾರು ಎರಡು-ಮೂರು ಕಿಲೋಮೀಟರ್ ಅಂತರವಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ನಿರಂತರವಾಗಿ ಚಲಿಸುತ್ತಿದ್ದ ಆನೆಗಳು ಸದ್ಯ ವಿಶ್ರಾಂತಿ ಪಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

60-70 ಅರಣ್ಯ ಸಿಬ್ಬಂದಿಯಿಂದ ನಿರಂತರ ನಿಗಾ
ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ಸ್ಥಗಿತಗೊಂಡಿದ್ದರೂ, ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಿದೆ. ಆನೆಗಳ ಚಲನವಲನದ ಮೇಲೆ ನಿಗಾ ಇರಿಸಲು ಅವುಗಳಿರುವ ಪ್ರದೇಶಗಳ ಸುತ್ತಮುತ್ತ ಸುಮಾರು 60ರಿಂದ 70 ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಡ್ರೋನ್‌ಗಳ ಮೂಲಕ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದೆ. ಸದ್ಯ ಆನೆಗಳು ಅಶಾಂತ ಸ್ಥಿತಿಯಲ್ಲಿಲ್ಲ ಎಂದು ಡಿಎಫ್‌ಒ ಬೋರಯ್ಯ ತಿಳಿಸಿದ್ದಾರೆ.

ಪಟಾಕಿ ಸಿಡಿಸದಂತೆ ಸಾರ್ವಜನಿಕರಿಗೆ ಮನವಿ
ಆನೆಗಳಿರುವ ಪ್ರದೇಶಗಳ ಸುತ್ತಮುತ್ತ ಸಾರ್ವಜನಿಕರು ಪಟಾಕಿ ಸಿಡಿಸಬಾರದು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ಕಾಫಿ ಬೆಳೆಗಾರರು ಸೇರಿದಂತೆ ತೋಟದ ಮಾಲೀಕರು ಮುಂದಿನ ಒಂದೆರಡು ದಿನಗಳ ಕಾಲ ಕೂಲಿ ಕಾರ್ಮಿಕರನ್ನು ತೋಟದ ಕೆಲಸಕ್ಕೆ ನಿಯೋಜಿಸದಂತೆ ಸೂಚಿಸಲಾಗಿದೆ.

ಶಾಲೆಗಳಿಗೆ ರಜೆ ಘೋಷಣೆ
ಆನೆಗಳ ಸಂಚಾರವಿರುವ ಗ್ರಾಮಗಳ ಶಾಲೆಗಳಿಗೆ ತಾಲೂಕು ಆಡಳಿತ ಈಗಾಗಲೇ ರಜೆ ಘೋಷಿಸಿದೆ. ಇನ್ನು ಸಾರ್ವಜನಿಕರು, ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಉದ್ದೇಶದಿಂದ ಆನೆಗಳಿರುವ ಪ್ರದೇಶಗಳಿಗೆ ತೆರಳಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಕುತೂಹಲಕ್ಕಾಗಿ ಆನೆಗಳ ಸಮೀಪಕ್ಕೆ ಹೋಗುವುದು ಮಾನವರು ಹಾಗೂ ಆನೆಗಳ ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಮುಸ್ಸಂಜೆ ಮತ್ತು ಮುಂಜಾವಿನ ಸಮಯದಲ್ಲಿ ಆನೆಗಳ ಚಲನವಲನ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಈ ಅವಧಿಯಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು. ಮಾನವರು, ಕಾಡಾನೆಗಳು ಹಾಗೂ ಅರಣ್ಯ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಡಿಎಫ್‌ಒ ಮನವಿ ಮಾಡಿದ್ದಾರೆ.

ಮಲೆನಾಡು ಭಾಗದಲ್ಲಿ ಕಾಫಿ ಕೊಯ್ಲು ಆರಂಭವಾಗಿರುವುದರಿಂದ ತೋಟಗಳಲ್ಲಿ ಕಾಡಾನೆಗಳಿರುವುದು ರೈತರು ಮತ್ತು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಆನೆಗಳಿಂದ ಬೆಳೆ ನಷ್ಟವಾಗುವ ಜೊತೆಗೆ ಕೊಯ್ಲು ಕಾರ್ಯಕ್ಕೂ ಅಡ್ಡಿಯಾಗಬಹುದು ಎಂಬ ಚಿಂತೆ ಎದುರಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಫ್‌ಒ ಬೋರಯ್ಯ, ಸದ್ಯಕ್ಕೆ ಕಾಡಾನೆಗಳನ್ನು ಓಡಿಸುವ ಯಾವುದೇ ನಿರ್ದೇಶನ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆನೆಗಳ ನೈಸರ್ಗಿಕ ಚಲನವಲನವನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರೈತರು ಮತ್ತು ಪ್ಲಾಂಟರ್‌ಗಳೊಂದಿಗೆ ಮಾತುಕತೆ ನಡೆಸಿ, ಮುನ್ನೆಚ್ಚರಿಕೆ ದೃಷ್ಟಿಯಿಂದ ಒಂದೆರಡು ದಿನಗಳ ಕಾಲ ಕೆಲಸಗಾರರನ್ನು ತೋಟಗಳಿಗೆ ನಿಯೋಜಿಸದಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *