**ಷೇರುಪೇಟೆಯಲ್ಲಿ L&T ಫೈನಾನ್ಸ್ ಭರ್ಜರಿ ಜಿಗಿತ!ಒಂದೇ ದಿನದಲ್ಲಿ ಶೇ.6ಕ್ಕೂ ಹೆಚ್ಚು ಏರಿಕೆ; ₹310 ತಲುಪುತ್ತಾ ಷೇರು ಬೆಲೆ?

**ಷೇರುಪೇಟೆಯಲ್ಲಿ L&T ಫೈನಾನ್ಸ್ ಭರ್ಜರಿ ಜಿಗಿತ!ಒಂದೇ ದಿನದಲ್ಲಿ ಶೇ.6ಕ್ಕೂ ಹೆಚ್ಚು ಏರಿಕೆ; ₹310 ತಲುಪುತ್ತಾ ಷೇರು ಬೆಲೆ?

**ಎಲ್‌ ಆ್ಯಂಡ್ ಟಿ ಫೈನಾನ್ಸ್ ಷೇರುಗಳು ಹೂಡಿಕೆದಾರರ ಗಮನ ಸೆಳೆದಿವೆ. ಭರ್ಜರಿ ಖರೀದಿ ಭರಾಟೆಯ ನಡುವೆ ಷೇರು ಬೆಲೆ ಶೇ.6.71ರಷ್ಟು ಏರಿಕೆಯಾಗಿದೆ. ಅಷ್ಟಕ್ಕೂ ಈ ದಿಢೀರ್ ಏರಿಕೆಗೆ ಕಾರಣವೇನು? ಮುಂದಿನ ದಿನಗಳಲ್ಲಿ ಷೇರು ಬೆಲೆ ಮತ್ತಷ್ಟು ಏರಿಕೆಯಾಗಲಿದೆಯಾ?**

**ನವದೆಹಲಿ, ನವೆಂಬರ್ 25:** ಬುಧವಾರದ ಷೇರುಪೇಟೆ ವಹಿವಾಟಿನಲ್ಲಿ ಎಲ್‌ ಆ್ಯಂಡ್ ಟಿ ಫೈನಾನ್ಸ್ (L&T Finance) ಷೇರುಗಳು ಭರ್ಜರಿ ಏರಿಕೆ ಕಂಡಿವೆ. ಬೆಳಗ್ಗಿನ ವಹಿವಾಟಿನಲ್ಲಿ ಶೇ.6.71ರಷ್ಟು ಏರಿಕೆ ದಾಖಲಿಸಿದ ಷೇರು ಬೆಲೆ ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ (BSE) ₹292.40 ತಲುಪಿದೆ.

**83 ಲಕ್ಷ ಷೇರುಗಳ ವಹಿವಾಟು!**

ಎಲ್‌ ಆ್ಯಂಡ್ ಟಿ ಫೈನಾನ್ಸ್ ಷೇರುಗಳ ಖರೀದಿ ಮತ್ತು ಮಾರಾಟದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ನವೆಂಬರ್ 25ರ ಬೆಳಗ್ಗಿನ ವಹಿವಾಟಿನಲ್ಲೇ ಸುಮಾರು 83 ಲಕ್ಷ ಷೇರುಗಳು ಕೈಬದಲಾಗಿವೆ.

ಕಳೆದ ಒಂದು ವಾರದ ಸರಾಸರಿ ವಹಿವಾಟು 37 ಲಕ್ಷ ಷೇರುಗಳಷ್ಟಿದ್ದರೆ, ಒಂದು ತಿಂಗಳ ಸರಾಸರಿ ವಹಿವಾಟು 43 ಲಕ್ಷ ಷೇರುಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ ಇಂದಿನ ವಹಿವಾಟಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

 **ಷೇರು ಬೆಲೆ ಏರಿಕೆಗೆ ಅಸಲಿ ಕಾರಣವೇನು?**

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ವಿಮಾ ವಿತರಣಾ ಸುಧಾರಣೆಗಳ ಕುರಿತು ಪರಿಶೀಲನೆ ನಡೆಸಲು ಆರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದೆ.

ವಿಮಾ ವಿತರಣಾ ಕಮಿಷನ್ ಮಿತಿ, ನಿರ್ವಹಣಾ ವೆಚ್ಚ, ವಿಮಾ ಏಜೆಂಟರ ಆದಾಯ ಹಾಗೂ ಉದ್ಯೋಗದ ಮೇಲೆ ಪ್ರಸ್ತಾವಿತ ನಿಯಮಗಳು ಬೀರುವ ಪರಿಣಾಮಗಳ ಕುರಿತು ಈ ಸಮಿತಿ ಪರಿಶೀಲನೆ ನಡೆಸಲಿದೆ.

ಈ ಬೆಳವಣಿಗೆಯಿಂದ ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (NBFC) ಅನುಕೂಲವಾಗಬಹುದು ಎಂಬ ನಿರೀಕ್ಷೆ ಮೂಡಿದೆ. ಇದರ ಬೆನ್ನಲ್ಲೇ ಹಣಕಾಸು ವಲಯದ ಹಲವು ಕಂಪನಿಗಳ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ.

 **ಯಾವ ಕಂಪನಿಗಳಿಗೆ ಲಾಭವಾಗಬಹುದು?**

ಸಿಟಿ ಬ್ರೋಕರೇಜ್ ಸಂಸ್ಥೆಯ ವಿಶ್ಲೇಷಣೆ ಪ್ರಕಾರ, ಎಲ್‌ ಆ್ಯಂಡ್ ಟಿ ಫೈನಾನ್ಸ್, ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಆ್ಯಂಡ್ ಫೈನಾನ್ಸ್, ಯೆಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಹಾಗೂ ಇಂಡಿಯಾ ಶೆಲ್ಟರ್ ಫೈನಾನ್ಸ್ ಕಂಪನಿಗಳಿಗೆ ಈ ಬೆಳವಣಿಗೆ ಅನುಕೂಲಕರವಾಗಬಹುದು.

2027ರ ಏಪ್ರಿಲ್‌ನಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಪ್ರಸ್ತಾವಿತ ನಿಯಮಗಳ ಅನುಷ್ಠಾನವೂ ವಿಳಂಬವಾಗುವ ಸಾಧ್ಯತೆಯಿದೆ ಎಂದು ಸಂಸ್ಥೆ ಅಂದಾಜಿಸಿದೆ.

 **₹310 ತಲುಪುತ್ತಾ L&T ಫೈನಾನ್ಸ್ ಷೇರು?**

ತಾಂತ್ರಿಕ ವಿಶ್ಲೇಷಣೆಯ ಪ್ರಕಾರ, ಎಲ್‌ ಆ್ಯಂಡ್ ಟಿ ಫೈನಾನ್ಸ್ ಷೇರು ತನ್ನ 200 ದಿನಗಳ ಎಕ್ಸ್‌ಪೊನೆನ್ಷಿಯಲ್ ಮೂವಿಂಗ್ ಆ್ಯವರೇಜ್ ಮಟ್ಟವನ್ನು ದಾಟಿದೆ.

ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್‌ನ ತಜ್ಞ ರುಚಿತ್ ಜೈನ್ ಅವರ ಪ್ರಕಾರ, ₹271ರ ಆಸುಪಾಸಿನಲ್ಲಿ ಷೇರಿಗೆ ತಾಂತ್ರಿಕ ಬೆಂಬಲವಿದ್ದು, ಏರಿಕೆಯ ವೇಗ ಮುಂದುವರಿದರೆ ಅಲ್ಪಾವಧಿಯಲ್ಲಿ ₹310 ತಲುಪುವ ಸಾಧ್ಯತೆಯಿದೆ.

ಬೆಳಗ್ಗೆ 10.35ರ ವೇಳೆಗೆ ಎಲ್‌ ಆ್ಯಂಡ್ ಟಿ ಫೈನಾನ್ಸ್ ಷೇರು ಶೇ.4.89ರಷ್ಟು ಏರಿಕೆಯೊಂದಿಗೆ ₹287.40ಕ್ಕೆ ವಹಿವಾಟು ನಡೆಸುತ್ತಿತ್ತು.

Leave a Reply

Your email address will not be published. Required fields are marked *