**ಬಿಸ್ಲೆರಿ ನೀರು ಕುಡಿಯುವ ಮುನ್ನ ಈ ಸುದ್ದಿ ಓದಿ! ಗುಣಮಟ್ಟ ವಿವಾದಕ್ಕೆ ಕಂಪನಿ ಕೊಟ್ಟ ಸ್ಪಷ್ಟನೆ ಏನು?**

**ಬಿಸ್ಲೆರಿ ನೀರು ಕುಡಿಯುವ ಮುನ್ನ ಈ ಸುದ್ದಿ ಓದಿ! ಗುಣಮಟ್ಟ ವಿವಾದಕ್ಕೆ ಕಂಪನಿ ಕೊಟ್ಟ ಸ್ಪಷ್ಟನೆ ಏನು?**

**ಬಿಸ್ಲೆರಿ ನೀರಿನಲ್ಲಿ ಹಾನಿಕಾರಕ ರಾಸಾಯನಿಕ ಪತ್ತೆ ವಿಚಾರ ಗ್ರಾಹಕರಲ್ಲಿ ಆತಂಕ ಮೂಡಿಸಿತ್ತು. ಹಾಗಾದರೆ ಬಿಸ್ಲೆರಿ ನೀರು ಕುಡಿಯುವುದು ಸುರಕ್ಷಿತವೇ? ದೇಶಾದ್ಯಂತ ಬಿಸ್ಲೆರಿ ಉತ್ಪಾದನೆ ಸ್ಥಗಿತವಾಗಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಇದೀಗ ಕಂಪನಿ ಸ್ಪಷ್ಟನೆ ನೀಡಿದೆ.**

**ನವದೆಹಲಿ, ನವೆಂಬರ್ 25:** ಪ್ರಯಾಣ ಮಾಡುವಾಗ, ಹೋಟೆಲ್‌ಗೆ ಹೋದಾಗ ಅಥವಾ ಬಾಯಾರಿಕೆಯಾದಾಗ ಬಹುತೇಕರು ಬಿಸ್ಲೆರಿ ನೀರಿನ ಬಾಟಲಿ ಖರೀದಿಸುತ್ತಾರೆ. ಆದರೆ ಇತ್ತೀಚೆಗೆ ಬಿಸ್ಲೆರಿ ನೀರಿನ ಗುಣಮಟ್ಟದ ಬಗ್ಗೆ ಎದ್ದಿರುವ ವಿವಾದ ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಇದೀಗ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ಬಿಸ್ಲೆರಿ ಕಂಪನಿ ಈ ಕುರಿತು ಸ್ಪಷ್ಟನೆ ನೀಡಿವೆ.

**50 ಸಾವಿರ ಬ್ಯಾಚ್‌ಗಳಲ್ಲಿ ಒಂದೇ ಬ್ಯಾಚ್‌ಗೆ ಸಮಸ್ಯೆ!**

ಬಿಸ್ಲೆರಿ ಕಂಪನಿ ಪ್ರತಿವರ್ಷ ಸುಮಾರು 50 ಸಾವಿರಕ್ಕೂ ಹೆಚ್ಚು ಬ್ಯಾಚ್‌ಗಳ ನೀರಿನ ಬಾಟಲಿಗಳನ್ನು ಉತ್ಪಾದಿಸುತ್ತದೆ. ಆದರೆ ಗೋವಾದ ಉತ್ಪಾದನಾ ಘಟಕದಲ್ಲಿ ತಯಾರಾದ GO 270 ಎಂಬ ಒಂದೇ ಬ್ಯಾಚ್‌ನ ಮಾದರಿ ಗುಣಮಟ್ಟದ ಪರೀಕ್ಷೆಯಲ್ಲಿ ಪ್ರಶ್ನೆಗೆ ಒಳಗಾಗಿದೆ.
ಆ ಬ್ಯಾಚ್‌ನ ನೀರಿನ ಬಾಟಲಿಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎಂದು ಕಂಪನಿ ತಿಳಿಸಿದೆ.

 **ನೀರಿನಲ್ಲಿ ಪತ್ತೆಯಾದ ರಾಸಾಯನಿಕ ಯಾವುದು?**

ಈ ವಿವಾದಕ್ಕೆ ಪ್ರಮುಖವಾಗಿ ಎರಡು ರಾಸಾಯನಿಕ ಅಂಶಗಳು ಕಾರಣವಾಗಿವೆ.

– **ಬ್ರೋಮೇಟ್ (Bromate):** ನೀರನ್ನು ಶುದ್ಧೀಕರಿಸಲು ಓಝೋನ್ ಬಳಸುವ ಸಂದರ್ಭದಲ್ಲಿ ಕೆಲವು ಪರಿಸ್ಥಿತಿಗಳಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ಅಂಶ.
– **ಪಿಎಎಚ್ (PAHs):** ಇಂಧನ ಹಾಗೂ ಸಾವಯವ ವಸ್ತುಗಳ ದಹನದಿಂದ ಉಂಟಾಗಬಹುದಾದ ರಾಸಾಯನಿಕ ಸಂಯುಕ್ತಗಳು. ಇವುಗಳಲ್ಲಿ ಕೆಲವು ಆರೋಗ್ಯಕ್ಕೆ ಹಾನಿಕಾರಕವಾಗಿರಬಹುದು.

ಮೊದಲ ಪ್ರಯೋಗಾಲಯದ ಪರೀಕ್ಷೆಯಲ್ಲಿ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಿರುವುದು ವರದಿಯಾಗಿತ್ತು. ಆದರೆ ಮತ್ತೊಂದು ಪ್ರಯೋಗಾಲಯದಲ್ಲಿ ನಡೆಸಿದ ಮರುಪರೀಕ್ಷೆಯಲ್ಲಿ ಅದರ ಪ್ರಮಾಣ ನಿಗದಿತ ಮಿತಿಗಿಂತ ಕಡಿಮೆ ಇರುವುದು ಕಂಡುಬಂದಿದೆ ಎಂದು ವರದಿಯಾಗಿದೆ.

 **ಆರು ಮಾದರಿಗಳಲ್ಲಿ ಒಂದೇ ಮಾದರಿ ಪ್ರಶ್ನಾರ್ಹ!**

ಒಂದೇ ನೀರಿನ ಮೂಲದಿಂದ ಸಂಗ್ರಹಿಸಿದ ಆರು ಮಾದರಿಗಳು ಮೊದಲ ಪರೀಕ್ಷೆಯಲ್ಲಿ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದ್ದವು ಎಂದು ಕಂಪನಿ ಹೇಳಿದೆ. ಆದರೆ ಮರುಪರೀಕ್ಷೆಯಲ್ಲಿ ಒಂದು ಮಾದರಿಯಲ್ಲಿ ಪ್ರತಿ ಲೀಟರ್‌ಗೆ 0.144 ಮೈಕ್ರೋಗ್ರಾಂ ಪಿಎಎಚ್ ಅಂಶ ಪತ್ತೆಯಾಗಿತ್ತು.

ಅಚ್ಚರಿಯ ಸಂಗತಿಯೆಂದರೆ, ಅದೇ ಬ್ಯಾಚ್‌ನ ಮತ್ತೊಂದು ಮಾದರಿ ಎಲ್ಲ ಪರೀಕ್ಷೆಗಳಲ್ಲೂ ಉತ್ತೀರ್ಣವಾಗಿದೆ ಎಂದು ಕಂಪನಿ ತಿಳಿಸಿದೆ. ಪರೀಕ್ಷಾ ಫಲಿತಾಂಶಗಳಲ್ಲಿನ ಈ ವ್ಯತ್ಯಾಸದ ಹಿನ್ನೆಲೆಯಲ್ಲಿ ಮರುಪರೀಕ್ಷೆಗೆ ಕಂಪನಿ ಮನವಿ ಮಾಡಿದೆ.

**ಬಿಸ್ಲೆರಿ ಉತ್ಪಾದನೆ ಸ್ಥಗಿತವಾಗಿದೆಯಾ?**

ದೇಶಾದ್ಯಂತ ಇರುವ ತನ್ನ 143 ಉತ್ಪಾದನಾ ಘಟಕಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಬಿಸ್ಲೆರಿ ತಿಳಿಸಿದೆ. ಗೋವಾ ಘಟಕವನ್ನು ಮುಚ್ಚುವಂತೆ ಯಾವುದೇ ಆದೇಶ ನೀಡಿಲ್ಲ. ಅಲ್ಲದೆ, ಆ ಘಟಕದಲ್ಲಿ ನಂತರ ಉತ್ಪಾದಿಸಲಾದ ನೀರಿನ ಮಾದರಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಿವೆ ಎಂದು ಕಂಪನಿ ಹೇಳಿದೆ.

 **ನಿಷೇಧದ ಗೊಂದಲಕ್ಕೆ ತೆರೆ, ಆದರೆ ಮುಗಿದಿಲ್ಲ ಕಾನೂನು ಪ್ರಕ್ರಿಯೆ!**

ಎಫ್‌ಎಸ್‌ಎಸ್‌ಎಐ ಕ್ರಮ ಕೇವಲ GO 270 ಎಂಬ ನಿರ್ದಿಷ್ಟ ಬ್ಯಾಚ್‌ಗೆ ಸೀಮಿತವಾಗಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಇನ್ನೂ ಮುಕ್ತಾಯಗೊಂಡಿಲ್ಲ. ಸಮಸ್ಯೆಯ ಮೂಲ ಕಾರಣವನ್ನು ಪತ್ತೆಹಚ್ಚುವಂತೆಯೂ ಕಂಪನಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಉಳಿದ ಬಿಸ್ಲೆರಿ ಉತ್ಪನ್ನಗಳು ಸುರಕ್ಷಿತವಾಗಿದ್ದು, ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ಕಂಪನಿ ಭರವಸೆ ನೀಡಿದೆ. ಆದರೆ ಪರೀಕ್ಷಾ ಫಲಿತಾಂಶಗಳಲ್ಲಿನ ವ್ಯತ್ಯಾಸಕ್ಕೆ ಕಾರಣವೇನು? ನಿಯಂತ್ರಣ ಪ್ರಾಧಿಕಾರದ ಮುಂದಿನ ಕ್ರಮ ಏನಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *