ಅವಾಮಿ ಲೀಗ್ ಮಾಜಿ ನಾಯಕನ ಹತ್ಯೆ: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ರಾಜಕೀಯ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದಲ್ಲಿ ರಾಜಕೀಯ ಹಿಂಸಾಚಾರ ತೀವ್ರಗೊಂಡಿದ್ದು, ಖುಲ್ನಾ ಜಿಲ್ಲೆಯಲ್ಲಿ ಅವಾಮಿ ಲೀಗ್‌ನ ಮಾಜಿ ನಾಯಕ ಅಬ್ದುಲ್ ಹಲೀಮ್ ಶೇಖ್ (40) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಖುಲ್ನಾದ ದೌಲತ್‌ಪುರದ ಕಲ್ಪತರು ಮಾರುಕಟ್ಟೆ ಬಳಿ ಮಂಗಳವಾರ ರಾತ್ರಿ ಮೋಟಾರ್‌ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಆಸ್ಪತ್ರೆಗೆ ಕರೆದೊಯ್ದಾಗ ಹಲೀಮ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಅವರು ವಾರ್ಡ್ 4ರ ಅವಾಮಿ ಲೀಗ್ ಘಟಕದ ಮಾಜಿ ಸಂಘಟನಾ ಕಾರ್ಯದರ್ಶಿಯಾಗಿದ್ದರು.

ಇನ್ನೊಂದೆಡೆ, ನರೈಲ್ ಜಿಲ್ಲೆಯ ಬೆಂದಾರ್ ಚಾರ್ ಗ್ರಾಮದಲ್ಲಿ ನವೆಂಬರ್ 20ರಂದು ಅವಾಮಿ ಲೀಗ್ ನಾಯಕರ ಮನೆಗಳು ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, 50ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿವೆ. ನವೆಂಬರ್ 18ರಂದು ಬಿಎನ್‌ಪಿ ಮೆರವಣಿಗೆ ಮೇಲಿನ ದಾಳಿಯಲ್ಲಿ ಇಬ್ಬರು ನಾಯಕರು ಮೃತಪಟ್ಟಿದ್ದಕ್ಕೆ ಪ್ರತೀಕಾರವಾಗಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಎನ್‌ಪಿ ನಾಯಕರು ಆರೋಪ ನಿರಾಕರಿಸಿದ್ದಾರೆ.

ನವೆಂಬರ್ 24ರ ವೇಳೆಗೆ ಖುಲ್ನಾ ನಗರ ಮತ್ತು ಸುತ್ತಮುತ್ತ 81 ಕೊಲೆ ಪ್ರಕರಣಗಳು ವರದಿಯಾಗಿದ್ದು, ಗುಂಡಿನ ದಾಳಿಗಳಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳ ಬಳಿಕ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆದಿದ್ದರು. ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡಿತ್ತು. 2025ರ ಮೇನಲ್ಲಿ ಅವಾಮಿ ಲೀಗ್‌ನ ರಾಜಕೀಯ ಚಟುವಟಿಕೆಗಳನ್ನು ನಿಷೇಧಿಸಲಾಗಿತ್ತು. ಹಿಂಸಾಚಾರದ ಹಿನ್ನೆಲೆಯಲ್ಲಿ ಪೊಲೀಸರು ಅಕ್ರಮ ಶಸ್ತ್ರಾಸ್ತ್ರಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.