ಕುವೈತ್ ಡ್ರೋನ್ ದಾಳಿ ಖಂಡಿಸಿದ ವಿಶ್ವಸಂಸ್ಥೆ; ಇರಾನ್‌ ನಡೆಗೆ ಆಕ್ಷೇಪ

ಕುವೈತ್: ಕುವೈತ್‌ನಲ್ಲಿ ನಡೆದ ಡ್ರೋನ್ ದಾಳಿಯನ್ನು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಖಂಡಿಸಿದ್ದಾರೆ. ದಾಳಿಯಲ್ಲಿ ಇಬ್ಬರು ಇಟಲಿ ಪ್ರಜೆಗಳು ಮೃತಪಟ್ಟಿದ್ದು, ಕುವೈತ್ ಮತ್ತು ಪಾಕಿಸ್ತಾನದ ತಲಾ ಒಬ್ಬರು ಗಾಯಗೊಂಡಿದ್ದಾರೆ.

ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಗುಟೆರಸ್, ಸಂಯಮ ಕಾಯ್ದುಕೊಂಡು ಮಾತುಕತೆ ಮೂಲಕ ಶಾಂತಿ ಸ್ಥಾಪಿಸುವಂತೆ ಕರೆ ನೀಡಿದ್ದಾರೆ.

ದಾಳಿಗೆ ಇರಾನ್ ಹೊಣೆ ಎಂದು ಆರೋಪಿಸಿರುವ ಕುವೈತ್, ಇರಾನ್ ರಾಯಭಾರಿ ಮೊಹಮ್ಮದ್ ತೊಟೊಂಚಿ ಅವರನ್ನು ಕರೆಸಿ ಅಧಿಕೃತ ಪ್ರತಿಭಟನಾ ಪತ್ರ ಸಲ್ಲಿಸಿದೆ. ಕುವೈತ್ ಸಾರ್ವಭೌಮತ್ವ ಉಲ್ಲಂಘನೆಯಾಗಿದ್ದು, ದೇಶದ ಭದ್ರತೆಗಾಗಿ ಸ್ವಯಂ ರಕ್ಷಣೆಯ ಹಕ್ಕು ಕಾಯ್ದಿರಿಸಿರುವುದಾಗಿ ಎಚ್ಚರಿಸಿದೆ.

ಆದರೆ, ದಾಳಿಯಲ್ಲಿ ಇರಾನ್ ಪಾತ್ರವಿಲ್ಲ ಎಂದು ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಸ್ಪಷ್ಟಪಡಿಸಿದ್ದಾರೆ. ದಾಳಿಯ ಮೂಲ ಪತ್ತೆಹಚ್ಚಲು ಜಂಟಿ ತನಿಖೆ ನಡೆಸಲು ಸಿದ್ಧವಿರುವುದಾಗಿಯೂ ತಿಳಿಸಿದ್ದಾರೆ.