ವೈದ್ಯರ ಮನೆಯಲ್ಲಿ 800 ಗ್ರಾಂ ಚಿನ್ನ ಲೂಟಿ, ಡಬಲ್ ಮರ್ಡರ್‌ಗೆ ಸ್ಕೆಚ್ ಹಾಕಿದ್ದಾಕೆ ಅರೆಸ್ಟ್

ವೈದ್ಯರ ಮನೆಯಲ್ಲಿ 800 ಗ್ರಾಂ ಚಿನ್ನ ಲೂಟಿ, ಡಬಲ್ ಮರ್ಡರ್‌ಗೆ ಸ್ಕೆಚ್ ಹಾಕಿದ್ದಾಕೆ ಅರೆಸ್ಟ್

ತುಮಕೂರಿನಲ್ಲಿ ಮನೆ ಕೆಲಸಕ್ಕೆಂದು ಬಂದು ವೈದ್ಯರ ಕುಟುಂಬದ ವಿಶ್ವಾಸ ಗಳಿಸಿದ್ದ ಸ್ನೇಹಾ, 800 ಗ್ರಾಂಗೂ ಅಧಿಕ ಚಿನ್ನಾಭರಣ ಕದ್ದಿರುವ ಆರೋಪ ಕೇಳಿಬಂದಿದೆ. ಕದ್ದ ಆಭರಣ ಮಾರಾಟ ಮಾಡಿ ಕಾರು, ಬೈಕ್, ಆಟೋ ಖರೀದಿಸಿದ್ದಲ್ಲದೆ, ಕಳ್ಳತನ ಬಯಲಾಗುವ ಭೀತಿಯಲ್ಲಿ ವೈದ್ಯರ ಕುಟುಂಬದ ಇಬ್ಬರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು ಎಂದು ಆರೋಪಿಸಲಾಗಿದೆ.
ಮನೆ ಕೆಲಸಕ್ಕೆಂದು ಬಂದು ವೈದ್ಯರ ಕುಟುಂಬದ ವಿಶ್ವಾಸ ಗಳಿಸಿ, ಮನೆಯಲ್ಲಿದ್ದ ಬರೋಬ್ಬರಿ 800 ಗ್ರಾಂಗೂ ಅಧಿಕ ಚಿನ್ನಾಭರಣ ಹಾಗೂ ವಜ್ರದ ಆಭರಣಗಳನ್ನು ಕದ್ದಿದ್ದ ಮಹಿಳೆಯ ಕೃತ್ಯ ತುಮಕೂರಿನಲ್ಲಿ ಬಯಲಾಗಿದೆ. ಕದ್ದ ಚಿನ್ನಾಭರಣ ಮಾರಾಟ ಮಾಡಿ ಕಾರು, ಬೈಕ್, ಆಟೋ ಸೇರಿದಂತೆ ಹಲವು ವಸ್ತುಗಳನ್ನು ಖರೀದಿಸಿದ್ದ ಆರೋಪಿತೆ, ಕಳ್ಳತನ ಬಯಲಾಗುವ ಭೀತಿಯಿಂದ ವೈದ್ಯರ ಕುಟುಂಬದ ಇಬ್ಬರನ್ನು ಕೊಲೆ ಮಾಡಿ, ಅದನ್ನು ಕಳ್ಳರ ಕೃತ್ಯ ಎಂದು ಬಿಂಬಿಸಲು ಸಂಚು ರೂಪಿಸಿದ್ದಳು ಎಂಬ ಆಘಾತಕಾರಿ ವಿಚಾರವೂ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಾ (24) ಮತ್ತು ಸೌಮ್ಯ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸಮಸ್ಯೆ ಹೇಳಿಕೊಂಡು ಬಂದಿದ್ದವಳಿಗೆ ಆಶ್ರಯ ನೀಡಿದ್ದೇ ಮುಳುವಾಯ್ತು!
ತುಮಕೂರು ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜಯನಗರ ನಿವಾಸಿಗಳಾದ ವೈದ್ಯ ದಂಪತಿ ಯಶವಂತ್ ಮತ್ತು ನಳಿನಿ ಅವರ ಮನೆಯಲ್ಲಿ ಸ್ನೇಹಾ ಎಂಬಾಕೆ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ವೈಯಕ್ತಿಕ ಸಮಸ್ಯೆಯಿದೆ ಎಂದು ಬಂದಿದ್ದ ಸ್ನೇಹಾಗೆ ವೈದ್ಯ ದಂಪತಿ ಆಶ್ರಯ ನೀಡಿದ್ದರು. ಆಗ ಗರ್ಭಿಣಿಯಾಗಿದ್ದ ಆಕೆಗೆ ಹೆರಿಗೆ ಮಾಡಿಸಿ, ಮಗುವಿನೊಂದಿಗೆ ತಮ್ಮ ಮನೆಯಲ್ಲೇ ಉಳಿಯಲು ಅವಕಾಶ ಕಲ್ಪಿಸಿದ್ದರು.

ಸ್ನೇಹಾಳೊಂದಿಗೆ ಬಂದಿದ್ದ ಆಕೆಯ ಅತ್ತೆ, ದೊಡ್ಡಮ್ಮ ಮತ್ತು ಪತಿ ರಾಕೇಶ್‌ಗೂ ವೈದ್ಯ ದಂಪತಿ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು. ಸ್ನೇಹಾಳಿಗೆ ಮನೆಯ ಕೆಲಸ ಹಾಗೂ ದೊಡ್ಡಮ್ಮನಿಗೆ ಆಸ್ಪತ್ರೆಯಲ್ಲಿ ಕೆಲಸ ನೀಡಿದ್ದರು. ಇಬ್ಬರಿಗೂ ಸಂಬಳದ ಜೊತೆಗೆ ಊಟ ಮತ್ತು ಮನೆಯಲ್ಲಿದ್ದ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದರು. ಹೀಗೆ ವೈದ್ಯ ಕುಟುಂಬದ ವಿಶ್ವಾಸ ಗಳಿಸಿದ್ದ ಸ್ನೇಹಾ, ಬಳಿಕ ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣಿಟ್ಟಿದ್ದಳು.

ಲಾಕರ್‌ಗಳ ಕೀಗಳನ್ನು ಕದ್ದು ಕೃತ್ಯ ಎಸಗುತ್ತಿದ್ದ ಸ್ನೇಹಾ
ವೈದ್ಯ ದಂಪತಿಯ ಮನೆಯ ವಿವಿಧ ಕೊಠಡಿಗಳಲ್ಲಿದ್ದ ಲಾಕರ್‌ಗಳ ಕೀಗಳನ್ನು ಕದ್ದು, ಅವುಗಳಲ್ಲಿದ್ದ ಚಿನ್ನಾಭರಣಗಳನ್ನು ಒಂದೊಂದಾಗಿ ಕಳವು ಮಾಡುತ್ತಿದ್ದಳು. ಕಳೆದ ಆರೇಳು ತಿಂಗಳ ಅವಧಿಯಲ್ಲಿ ಬರೋಬ್ಬರಿ 800 ಗ್ರಾಂಗೂ ಅಧಿಕ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕದ್ದಿದ್ದಾಳೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಬೆಳ್ಳಿ ಆಭರಣಗಳನ್ನೂ ಬಿಡದೆ ಕದ್ದಿದ್ದಳು. ಪೂರ್ವಜರಿಂದ ಬಂದಿದ್ದ ಆಭರಣಗಳು, ಮದುವೆ ಸಂದರ್ಭದಲ್ಲಿ ಖರೀದಿಸಿದ್ದ ಚಿನ್ನ ಹಾಗೂ ಪತಿ ಉಡುಗೊರೆಯಾಗಿ ನೀಡಿದ್ದ ಆಭರಣಗಳೂ ಕಳ್ಳತನವಾಗಿದ್ದವು.

Leave a Reply

Your email address will not be published. Required fields are marked *