No Ads

ಸುದ್ದಗುಂಟೆಪಾಳ್ಯ ಲೈಂಗಿಕ ಕಿರುಕುಳ; ಆರೋಪಿಗೆ ೂರುಬಿಡಲು ಐಡಿಯಾ ಕೊಟ್ಟ ಪ್ರೇಯಸಿಗೂ ಸಂಕಷ್ಟ!

ಜಿಲ್ಲೆ 2025-04-15 13:17:12 258
post

ಬೆಂಗಳೂರು: ಸುದ್ದಗುಂಟೆಪಾಳ್ಯ ಬಳಿಯ ಭಾರತಿ ಲೇಔಟ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಸಂತೋಷ್‌ ಕುಮಾರ್‌ಗೆ ಕೇರಳಕ್ಕೆ ಪರಾರಿಯಾಗಲು ಪ್ರೇಯಸಿ ನೆರವಾಗಿದ್ದ ಸಂಗತಿ ತನಿಖೆಯಲ್ಲಿ ಬಯಲಾಗಿದ್ದು, ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ.

ಸಂತೋಷ್‌ ಕುಮಾರ್‌ನ ಪ್ರೇಯಸಿಯು ಮೂಲತಃ ಹೊಸಕೋಟೆಯವಳಾಗಿದ್ದು, ಗೃಹರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆಯನ್ನು ಬಿಬಿಎಂಪಿಯ ಬೈರಸಂದ್ರ ಕೆರೆಯ ಕಾವಲಿಗೆ ನಿಯೋಜಿಸಲಾಗಿತ್ತು. ಬೈರಸಂದ್ರ ಬಳಿಯ ಸಿದ್ದಾಪುರದ ಗುಲ್ಬರ್ಗ ಕಾಲೊನಿಯಲ್ಲಿ ವಾಸವಾಗಿದ್ದ ಸಂತೋಷ್‌ ಕುಮಾರ್‌, ಮೂರ್ನಾಲ್ಕು ವರ್ಷಗಳ ಹಿಂದೆ ಆಕೆಯನ್ನು ಪರಿಚಯ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾಹಿತೆಯಾದ ಆ ಮಹಿಳೆಗೆ ಒಂದು ಮಗುವಿದೆ. ಕೌಟುಂಬಿಕ ಕಲಹದ ಕಾರಣಕ್ಕೆ ಪತಿಯಿಂದ ದೂರವಾಗಿದ್ದ ಆ ಮಹಿಳೆ ಮತ್ತು ಆರೋಪಿ ಸಂತೋಷ್‌ ಕುಮಾರ್‌ ಪರಸ್ಪರ ಪ್ರೀತಿಸುತ್ತಿದ್ದರು. ಆರೋಪಿಯು ಏಪ್ರಿಲ್‌ 3ರಂದು ರಾತ್ರಿ ಮದ್ಯದ ನಶೆಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ. ಬಳಿಕ ಪ್ರೇಯಸಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದ.

ಮರು ದಿನವೇ ಪ್ರೇಯಸಿಯು ಸಂತೋಷ್‌ ಕುಮಾರ್‌ನನ್ನು ಭೇಟಿಯಾಗಿ, ಬೆಂಗಳೂರಿನಲ್ಲೇ ಇದ್ದರೆ ಪೊಲೀಸರು ಖಂಡಿತ ಬಂಧಿಸುತ್ತಾರೆ. ಸ್ವಲ್ಪ ದಿನಗಳ ಕಾಲ ಬೆಂಗಳೂರು ಬಿಟ್ಟು ಹೋಗು ಎಂದು ಆತನಿಗೆ ಸಲಹೆ ಕೊಟ್ಟಿದ್ದಳು. ಅಲ್ಲದೆ, ಖರ್ಚಿಗಾಗಿ ಆತನಿಗೆ 6 ಸಾವಿರ ರೂ. ಹಣ ಕೂಡ ಕೊಟ್ಟಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರೇಯಸಿಯ ಸಲಹೆಯಂತೆ ಸಂತೋಷ್‌ ಕುಮಾರ್‌ ಬೆಂಗಳೂರಿನಿಂದ ತಮಿಳುನಾಡಿಗೆ ಕಾಲ್ಕಿತ್ತಿದ್ದ. ಬಳಿಕ ಅಲ್ಲಿಂದ ಕೇರಳಕ್ಕೆ ಪರಾರಿಯಾಗಿದ್ದ. ಆರೋಪಿಗೆ ಹಣ ಕೊಟ್ಟು ನೆರವಾಗಿದ್ದ ಆ ಮಹಿಳೆಯನ್ನು ಪತ್ತೆ ಮಾಡಿ, ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಮಹಿಳೆಯ ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಪರಾಧ ಹಿನ್ನೆಲೆಯುಳ್ಳ ಸಂತೋಷ್‌ ಕುಮಾರ್‌ ಈ ಹಿಂದೆ 2023ರಲ್ಲಿ ಜಯನಗರ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಕದ್ದು ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದ. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಏಳನೇ ತರಗತಿ ಓದಿರುವ ಆತನ ವಿರುದ್ಧ ತಮಿಳುನಾಡಿನಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ಕೇರಳದಿಂದ ಕರೆತಂದು ನ್ಯಾಯಾಧೀಶರ ಎದುರು ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಆರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

 

 

 

No Ads
No Reviews
No Ads

Popular News

No Post Categories
Sidebar Banner
Sidebar Banner