ನವದೆಹಲಿ: ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಮಹಿಳೆಯರಿಗೆ ಅವರ ನ್ಯಾಯಸಮ್ಮತ ಹಕ್ಕು ದೊರಕಿಸಿಕೊಡಲು ಮಹಿಳಾ ಮೀಸಲಾತಿ ಜಾರಿಗೆ ಎದುರಾಗುವ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ಕಿರು ವಿಡಿಯೋ ಸಂದೇಶ ಹಂಚಿಕೊಂಡಿರುವ ಅವರು, ಮಹಿಳಾ ಮೀಸಲಾತಿಗಾಗಿ ದೇಶದಲ್ಲಿ ಹಲವು ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ತಾವೂ ಹಲವು ವರ್ಷಗಳಿಂದ ಭಾಗಿಯಾಗಿರುವುದಾಗಿ ತಿಳಿಸಿದ್ದಾರೆ.

ಮಹಿಳೆಯರು ಪತ್ರಗಳ ಮೂಲಕ ತಮ್ಮ ಬೇಡಿಕೆಗಳನ್ನು ನಿರಂತರವಾಗಿ ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ. ದೇಶದ ನಾರಿಶಕ್ತಿಯ ಸಂಪೂರ್ಣ ಆಶೀರ್ವಾದ ಸರ್ಕಾರದೊಂದಿಗಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಮಹಿಳಾ ಮೀಸಲಾತಿಯ ಹಾದಿಯಲ್ಲಿರುವ ಪ್ರತಿಯೊಂದು ಅಡೆತಡೆಯನ್ನೂ ನಿವಾರಿಸುವ ಸಂಕಲ್ಪ ನಮ್ಮದಾಗಿದೆ. ನಮ್ಮ ಧೈರ್ಯ, ಮನೋಬಲ ಮತ್ತು ಸಂಕಲ್ಪ ಅಚಲವಾಗಿದೆ ಎಂದು ಮೋದಿ ಹೇಳಿದ್ದಾರೆ.
ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಪಕ್ಷಗಳಿಂದ ನಾರಿಶಕ್ತಿಯ ಹಕ್ಕನ್ನು ತಡೆಯಲು ಸಾಧ್ಯವಿಲ್ಲ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ ಪಾಲು ಹೆಚ್ಚಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಮಹಿಳಾ ಮೀಸಲಾತಿ ಜಾರಿಗೆ ಕಾಲ ಕೂಡಿಬರುವುದಷ್ಟೇ ಬಾಕಿ ಇದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
We had made a promise to our Nari Shakti and we remain committed to fulfilling it… https://t.co/ZT3TK71Psh
— Narendra Modi (@narendramodi) November 28, 2026
