ಸಿನಿಮಾ ಹಿಟ್ ಆಗುತ್ತಿದ್ದಂತೆ ಸಹನಟನಿಗೆ ಭರ್ಜರಿ ಗಿಫ್ಟ್ ಸೂರ್ಯ ಕೊಟ್ಟ ವಾಚ್ ಬೆಲೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ!

ಸಿನಿಮಾ ಹಿಟ್ ಆಗುತ್ತಿದ್ದಂತೆ ಸಹನಟನಿಗೆ ಭರ್ಜರಿ ಗಿಫ್ಟ್ ಸೂರ್ಯ ಕೊಟ್ಟ ವಾಚ್ ಬೆಲೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ!

ಒಂದರ ಹಿಂದೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ನಟ ಸೂರ್ಯ ಇದೀಗ ತಮ್ಮ ಇತ್ತೀಚಿನ ಸೀನ್ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ.

ಕಾಲಿವುಡ್ ಸ್ಟಾರ್ ನಟ ಸೂರ್ಯಗೆ 2026ನೇ ವರ್ಷ ತುಂಬಾನೇ ಲಕ್ಕಿ ಅಂತಾನೇ ಹೇಳಬಹುದು. ಒಂದರ ಹಿಂದೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ನಟ ಸೂರ್ಯ ಇದೀಗ ತಮ್ಮ ಇತ್ತೀಚಿನ ಸೀನ್ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಈ ಸಿನಿಮಾ ತಂಡದ ಪ್ರತಿಯೊಬ್ಬರಿಗೂ ಸಂತಸ ತಂದಿದೆ. ಇದರ ನಡುವೆ ಸೂರ್ಯ ತಮ್ಮ ಸಹನಟನಿಗೆ ನೀಡಿರುವ ದುಬಾರಿ ಉಡುಗೊರೆ ಇದೀಗ ಚಿತ್ರರಂಗದಲ್ಲಿ ಸುದ್ದಿಯಾಗಿದೆ.
ಸಹನಟನಿಗೆ ಸೂರ್ಯನಿಂದ ದುಬಾರಿ ಉಡುಗೊರೆ

ಸೂರ್ಯ ಅಭಿನಯದ ಸೀನ್ ಸಿನಿಮಾದಲ್ಲಿ ಮಲಯಾಳಂ ಯುವ ನಟ ನಸ್ಲೆನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ನಟನ ಅಭಿನಯವನ್ನು ಮೆಚ್ಚಿಕೊಂಡಿರುವ ಸೂರ್ಯ, ಪ್ರೀತಿಯ ಸಂಕೇತವಾಗಿ ದುಬಾರಿ ಕಾರ್ಟಿಯರ್ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಾಚ್‌ನ ಬೆಲೆ ಬರೋಬ್ಬರಿ 9 ಲಕ್ಷದಿಂದ 12 ಲಕ್ಷ ರೂಪಾಯಿ ಎಂದು ವರದಿಯಾಗಿದೆ. ಇತ್ತೀಚೆಗೆ ತಮ್ಮ ಹೊಸ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಸ್ಲೆನ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಸೂರ್ಯ ನೀಡಿದ ದುಬಾರಿ ವಾಚ್ ಬಗ್ಗೆ ಮಾತನಾಡಿರುವ ನಸ್ಲೆನ್, ತಮ್ಮ ಸಹನಟ ಕುಂಚಾಕೋ ಬೋಬನ್ ಅವರ ಪ್ರತಿಕ್ರಿಯೆಯನ್ನೂ ಹಂಚಿಕೊಂಡಿದ್ದಾರೆ. ನಸ್ಲೆನ್ ಕೈಯಲ್ಲಿದ್ದ ಕಾರ್ಟಿಯರ್ ವಾಚ್ ಅನ್ನು ಗಮನಿಸಿದ ಕುಂಚಾಕೋ ಬೋಬನ್ ಅಚ್ಚರಿಗೊಂಡಿದ್ದರಂತೆ. ಅಲ್ಲದೆ, ನನಗೂ ಸೂರ್ಯ ಅವರ ಕಾಂಟ್ಯಾಕ್ಟ್ ನಂಬರ್ ಕೊಡು ಎಂದು ತಮಾಷೆ ಮಾಡಿದ್ದರಂತೆ. ಈ ಘಟನೆಯನ್ನು ನೆನಪಿಸಿಕೊಂಡ ನಸ್ಲೆನ್ ನಗುತ್ತಲೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಮಗನಂತೆ ನೋಡಿಕೊಂಡಿದ್ದರಂತೆ ಸೂರ್ಯ
ಸೀನ್ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳಿದ್ದು, ಅವುಗಳ ಚಿತ್ರೀಕರಣದ ಸಮಯದಲ್ಲಿ ಸೂರ್ಯ ತೋರಿದ ಕಾಳಜಿಯ ಬಗ್ಗೆಯೂ ನಸ್ಲೆನ್ ಮಾತನಾಡಿದ್ದಾರೆ. ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣದ ವೇಳೆ ಸೂರ್ಯ ತಮ್ಮನ್ನು ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಪ್ರತಿ ಶಾಟ್ ಆರಂಭಿಸುವುದಕ್ಕೂ ಮೊದಲು ಸುರಕ್ಷತಾ ಕವಚಗಳನ್ನು ಸರಿಯಾಗಿ ಧರಿಸಿದ್ದಾರೆಯೇ ಎಂಬುದನ್ನು ಸೂರ್ಯ ಖಚಿತಪಡಿಸಿಕೊಳ್ಳುತ್ತಿದ್ದರಂತೆ.

ನಸ್ಲೆನ್ ಮಲಯಾಳಂ ಚಿತ್ರರಂಗದ ಪ್ರತಿಭಾವಂತ ಯುವ ನಟರಲ್ಲಿ ಒಬ್ಬರು. 2019ರಲ್ಲಿ ಬಿಡುಗಡೆಯಾದ ತಣ್ಣೀರ್ ಮಥನ್ ದಿನಂಗಳ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, 2024ರಲ್ಲಿ ಬಿಡುಗಡೆಯಾದ ಪ್ರೇಮಲು ಸಿನಿಮಾ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಈ ಚಿತ್ರದ ಮೂಲಕ ನಸ್ಲೆನ್ ದಕ್ಷಿಣ ಭಾರತದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದರು.

ಇದಾದ ಬಳಿಕ 2025ರಲ್ಲಿ ಕಲ್ಯಾಣಿ ಪ್ರಿಯದರ್ಶನ್ ಜೊತೆ ನಟಿಸಿದ ಲೋಕಾ ಚಾಪ್ಟರ್ 1: ಚಂದ್ರ ಸಿನಿಮಾ ಕೂಡ ಭರ್ಜರಿ ಯಶಸ್ಸು ಕಂಡಿತು. ಈ ಚಿತ್ರ ವಿಶ್ವಾದ್ಯಂತ ಸುಮಾರು 301 ಕೋಟಿ ರೂಪಾಯಿ ಗಳಿಸುವ ಮೂಲಕ ಗಮನ ಸೆಳೆದಿತ್ತು. ಇದೀಗ ಸೂರ್ಯ ಜೊತೆಗಿನ ಸೀನ್ ಸಿನಿಮಾ ಮೂಲಕ ನಸ್ಲೆನ್ ತಮಿಳು ಚಿತ್ರರಂಗದಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ.

250 ಕೋಟಿ ದಾಟಿದ ಸೀನ್ ಸಿನಿಮಾ ಗಳಿಕೆ
ಜಿತು ಮಾಧವನ್ ನಿರ್ದೇಶನದ ಸೀನ್ ಸಿನಿಮಾದಲ್ಲಿ ಸೂರ್ಯ ಡಿಎಸ್‌ಪಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಜ್ರಿಯಾ ನಜೀಮ್, ಆನಂದರಾಜ್, ಲಾಲ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಬಿಡುಗಡೆಯಾದ 13 ದಿನಗಳಲ್ಲಿ ಭಾರತದಲ್ಲಿ ಸುಮಾರು 145 ಕೋಟಿ ರೂಪಾಯಿ ಗಳಿಸಿದ್ದ ಸಿನಿಮಾ, ವಿಶ್ವಾದ್ಯಂತ 256.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ವರದಿಗಳಿವೆ. ಈ ಮೂಲಕ ಸೂರ್ಯ ಅವರ ಹಿಂದಿನ ಸಿನಿಮಾ ವಿಶ್ವನಾಥ್ ಆ್ಯಂಡ್ ಸನ್ಸ್ ದಾಖಲೆಯನ್ನೂ ಮೀರಿಸಿದೆ.

ಖ್ಯಾತ ನಿರ್ದೇಶಕ ಅಟ್ಲೀ ಕೂಡ ಸೀನ್ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ನಸ್ಲೆನ್ ಭವಿಷ್ಯದ ಸೂಪರ್‌ಸ್ಟಾರ್ ಎಂದು ಬಣ್ಣಿಸಿದ್ದಾರೆ. ಒಟ್ಟಿನಲ್ಲಿ, ಸಿನಿಮಾ ಯಶಸ್ಸಿನ ಜೊತೆಗೆ ಸಹನಟನ ಪ್ರತಿಭೆಯನ್ನು ಗುರುತಿಸಿ ದುಬಾರಿ ಉಡುಗೊರೆ ನೀಡಿರುವ ಸೂರ್ಯ ನಡೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Leave a Reply

Your email address will not be published. Required fields are marked *