ಅಪಘಾತದಲ್ಲಿ ತಂದೆ-ತಾಯಿ ಸಾವು.. ₹10 ಲಕ್ಷ ವಿಮೆಗಾಗಿ ಮಕ್ಕಳ ಅಲೆದಾಟ! ಕೊನೆಗೂ SBIಗೆ ಬಿಗ್ ಶಾಕ್!

ಅಪಘಾತದಲ್ಲಿ ತಂದೆ-ತಾಯಿ ಸಾವು.. ₹10 ಲಕ್ಷ ವಿಮೆಗಾಗಿ ಮಕ್ಕಳ ಅಲೆದಾಟ! ಕೊನೆಗೂ SBIಗೆ ಬಿಗ್ ಶಾಕ್!

ನಾಮಿನಿಯಾಗಿದ್ದ ತಂದೆಯೂ ಅಪಘಾತದಲ್ಲಿ ಸಾವು.. ವಿಮೆ ಹಣ ನೀಡಲು ವಿಳಂಬ ಮಾಡಿದ SBI ಬ್ಯಾಂಕ್‌ಗೆ ಗ್ರಾಹಕ ಆಯೋಗದಿಂದ ಚಾಟಿ!

ಒಂದೇ ರಸ್ತೆ ಅಪಘಾತದಲ್ಲಿ ತಂದೆ-ತಾಯಿ ಇಬ್ಬರೂ ದುರಂತ ಅಂತ್ಯ ಕಂಡರು. ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಆಸರೆಯಾಗಬೇಕಿದ್ದ ವಿಮೆ ಹಣವೇ ಮತ್ತೊಂದು ಸಂಕಷ್ಟಕ್ಕೆ ಕಾರಣವಾಯಿತು. ನಾಮಿನಿಯಾಗಿದ್ದ ತಂದೆಯೂ ಮೃತಪಟ್ಟಿದ್ದರಿಂದ ವಿಮೆ ಹಣ ಪಡೆಯಲು ಮಕ್ಕಳು ಪರದಾಡುವಂತಾಯಿತು. ಕೊನೆಗೆ ಈ ಪ್ರಕರಣ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದು, ಇದೀಗ ಕುಟುಂಬಕ್ಕೆ ₹10.20 ಲಕ್ಷ ಪರಿಹಾರ ಸಿಗುವಂತೆ ಆದೇಶ ಹೊರಬಿದ್ದಿದೆ.

ಅಸಲಿಗೆ ನಡೆದಿದ್ದೇನು?
ತೆಲಂಗಾಣದ ಮಹಿಳೆಯೊಬ್ಬರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಇದೇ ಖಾತೆಯ ಮೂಲಕ ಅವರು ₹10 ಲಕ್ಷ ವಿಮಾ ರಕ್ಷಣೆ ಹೊಂದಿದ್ದ ಪಾಲಿಸಿಯನ್ನು ಪಡೆದಿದ್ದರು. ಪಾಲಿಸಿಯ ನಾಮಿನಿಯಾಗಿ ತಮ್ಮ ಪತಿಯ ಹೆಸರನ್ನು ನಮೂದಿಸಿದ್ದರು.

2024ರ ನವೆಂಬರ್‌ನಲ್ಲಿ ವಿಮೆ ನವೀಕರಣಕ್ಕಾಗಿ ಅವರ ಖಾತೆಯಿಂದ ₹500 ಪ್ರೀಮಿಯಂ ಕೂಡ ಕಡಿತವಾಗಿತ್ತು. ಆದರೆ 2025ರ ಜನವರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಮತ್ತು ಅವರ ಪತಿ ಇಬ್ಬರೂ ಮೃತಪಟ್ಟಿದ್ದರು.
ಇದಾದ ಬಳಿಕ ಪೋಷಕರ ವಿಮೆ ಹಣಕ್ಕಾಗಿ ಮಕ್ಕಳು ಬ್ಯಾಂಕ್ ಮತ್ತು ವಿಮಾ ಕಂಪನಿಯನ್ನು ಸಂಪರ್ಕಿಸಿದ್ದರು. ಆದರೆ ನಾಮಿನಿಯಾಗಿದ್ದ ತಂದೆಯೂ ಮೃತಪಟ್ಟಿದ್ದರಿಂದ ಕ್ಲೇಮ್ ಪ್ರಕ್ರಿಯೆ ಮುಂದುವರಿಯಲಿಲ್ಲ. ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬುದು ಬ್ಯಾಂಕ್‌ನ ವಾದವಾಗಿತ್ತು.

SBI ಬ್ಯಾಂಕ್‌ಗೆ ಗ್ರಾಹಕ ಆಯೋಗದ ಚಾಟಿ!
ಈ ಪ್ರಕರಣವನ್ನು ವಿಚಾರಣೆ ನಡೆಸಿದ ತೆಲಂಗಾಣದ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಬ್ಯಾಂಕ್ ಮತ್ತು SBI ಜನರಲ್ ಇನ್ಶೂರೆನ್ಸ್ ಕಂಪನಿಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿತು.
ಮಕ್ಕಳ ಗುರುತು ಮತ್ತು ಮೃತ ಮಹಿಳೆಯೊಂದಿಗಿನ ಸಂಬಂಧವನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳ ಬಗ್ಗೆ ಸರಿಯಾದ ಮಾಹಿತಿ ನೀಡುವ ಮೂಲಕ ವಿಮೆ ಹಣ ಪಾವತಿಸಲು ಕ್ರಮ ಕೈಗೊಳ್ಳಬಹುದಿತ್ತು. ಆದರೆ ಬ್ಯಾಂಕ್ ಮತ್ತು ವಿಮಾ ಕಂಪನಿ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿವೆ ಎಂದು ಆಯೋಗ ಅಭಿಪ್ರಾಯಪಟ್ಟಿತು.

ಅಂತಿಮವಾಗಿ ₹10 ಲಕ್ಷ ವಿಮಾ ಮೊತ್ತವನ್ನು ಅರ್ಹ ಕುಟುಂಬ ಸದಸ್ಯರಿಗೆ ಸಮಾನವಾಗಿ ಹಂಚಿಕೆ ಮಾಡುವಂತೆ ಆಯೋಗ ಆದೇಶಿಸಿದೆ. ಜೊತೆಗೆ ಮಾನಸಿಕ ಹಿಂಸೆ ಮತ್ತು ಆರ್ಥಿಕ ನಷ್ಟಕ್ಕೆ ₹10 ಸಾವಿರ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ ₹10 ಸಾವಿರ ಪಾವತಿಸುವಂತೆಯೂ ಸೂಚಿಸಿದೆ.

ಒಟ್ಟಿನಲ್ಲಿ, ಪೋಷಕರನ್ನು ಕಳೆದುಕೊಂಡ ನೋವಿನಲ್ಲಿದ್ದ ಕುಟುಂಬಕ್ಕೆ ವಿಮೆ ಹಣಕ್ಕಾಗಿ ಮತ್ತೊಂದು ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ಗ್ರಾಹಕ ಆಯೋಗದ ಆದೇಶದಿಂದ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ.

Leave a Reply

Your email address will not be published. Required fields are marked *