NVIDIA ಮಾಜಿ ಟಾಪ್ ಅಧಿಕಾರಿಯ ಪತ್ನಿಗೆ ಚೀನಾ ಚಿಪ್ ಕಳ್ಳಸಾಗಣೆ ನಂಟು? $2.5 ಬಿಲಿಯನ್ ಹಗರಣದಲ್ಲಿ ಹೊಸ ಟ್ವಿಸ್ಟ್!
NVIDIA ಮಾಜಿ ನಂ.3 ಅಧಿಕಾರಿ ಜಯ್ ಪುರಿ ಪತ್ನಿ ವಿರುದ್ಧ ಗಂಭೀರ ಆರೋಪ! ಚೀನಾಗೆ ಅಕ್ರಮವಾಗಿ ಚಿಪ್ ಸಾಗಿಸಿದ ಪ್ರಕರಣದಲ್ಲಿ ಹೆಸರು ಪ್ರಸ್ತಾಪ!
ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿರುವ NVIDIA ಇದೀಗ ಹೊಸ ವಿವಾದಕ್ಕೆ ಸಿಲುಕಿದೆ. ಅದರಲ್ಲೂ ಕಂಪನಿಯ ಮಾಜಿ ಮೂರನೇ ಅತ್ಯಂತ ಪ್ರಭಾವಿ ಅಧಿಕಾರಿ ಜಯ್ ಪುರಿ ಅವರ ಪತ್ನಿಯ ಹೆಸರು ಬರೋಬ್ಬರಿ 2.5 ಬಿಲಿಯನ್ ಡಾಲರ್ ಮೌಲ್ಯದ ಚಿಪ್ ಅಕ್ರಮ ಸಾಗಣೆ ಪ್ರಕರಣದೊಂದಿಗೆ ಕೇಳಿಬಂದಿದೆ. ಈ ಬೆಳವಣಿಗೆ ಟೆಕ್ ಜಗತ್ತಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಅಷ್ಟಕ್ಕೂ ಈ ಪ್ರಕರಣ ಏನು? ಜಯ್ ಪುರಿ ಅವರ ಪತ್ನಿಗೂ ಚಿಪ್ ಕಳ್ಳಸಾಗಣೆ ಪ್ರಕರಣಕ್ಕೂ ಇರುವ ಸಂಬಂಧವೇನು?
ಅಮೆರಿಕದ ಶಾರ್ಟ್ ಸೆಲ್ಲಿಂಗ್ ಸಂಸ್ಥೆ ಮಡ್ಡಿ ವಾಟರ್ಸ್ ರಿಸರ್ಚ್ (Muddy Waters Research) ನವೆಂಬರ್ 17ರಂದು ‘NVIDIA: More China’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ NVIDIA ಮಾಜಿ ಹಿರಿಯ ಅಧಿಕಾರಿ ಅಜಯ್ ಕುಮಾರ್ ‘ಜಯ್’ ಪುರಿ ಮತ್ತು ಸೆನ್ಲಿ ಚೆನ್ ಎಂಬ ಮಹಿಳೆಯ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ.
ವರದಿಯ ಪ್ರಕಾರ, ಜಯ್ ಪುರಿ ಅವರೊಂದಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಮಹಿಳೆಯನ್ನು ಕೆಲವು ಫೋಟೋಗಳಲ್ಲಿ ‘ಸೆನ್ಲಿ ಚೆನ್’ ಹಾಗೂ ಇನ್ನು ಕೆಲವು ಕಡೆ ‘ಸೆನ್ಲಿ ಪುರಿ’ ಎಂದು ಗುರುತಿಸಲಾಗಿದೆ. ಈ ಮಹಿಳೆ ಈ ಹಿಂದೆ ಸೂಪರ್ ಮೈಕ್ರೋ ಕಂಪನಿಯಲ್ಲಿ ಮುಖ್ಯ ಬೆಳವಣಿಗೆ ಅಧಿಕಾರಿ (Chief Growth Officer) ಆಗಿ ಕೆಲಸ ಮಾಡಿದ್ದ ಸೆನ್ಲಿ ಚೆನ್ ಅವರೇ ಎಂಬ ಅನುಮಾನವನ್ನು ಮಡ್ಡಿ ವಾಟರ್ಸ್ ವ್ಯಕ್ತಪಡಿಸಿದೆ.
ಇದಕ್ಕೆ ಕಾರಣ ಅಕ್ಟೋಬರ್ನಲ್ಲಿ ದಾಖಲಾಗಿರುವ ಸೂಪರ್ ಮೈಕ್ರೋ ಕಂಪನಿಗೆ ಸಂಬಂಧಿಸಿದ ಷೇರುದಾರರ ಮೊಕದ್ದಮೆ. ಈ ದೂರಿನಲ್ಲಿ ಸೆನ್ಲಿ ಚೆನ್ ಅವರು NVIDIAಯಿಂದ GPU ಚಿಪ್ಗಳನ್ನು ಖರೀದಿಸುವ ಪ್ರಕ್ರಿಯೆ ಹಾಗೂ ಗ್ರಾಹಕರಿಗೆ ಅವುಗಳನ್ನು ಹಂಚಿಕೆ ಮಾಡುವ ಜವಾಬ್ದಾರಿ ಹೊಂದಿದ್ದರು ಎಂದು ಆರೋಪಿಸಲಾಗಿದೆ.
ಅಷ್ಟೇ ಅಲ್ಲ, ಸೂಪರ್ ಮೈಕ್ರೋ ಸರ್ವರ್ಗಳಲ್ಲಿ ಅಳವಡಿಸಿದ್ದ NVIDIA ಚಿಪ್ಗಳನ್ನು ಆಗ್ನೇಯ ಏಷ್ಯಾದ ಮಧ್ಯವರ್ತಿ ಕಂಪನಿಯ ಮೂಲಕ ಚೀನಾಕ್ಕೆ ಅಕ್ರಮವಾಗಿ ಸಾಗಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ವ್ಯವಹಾರದ ಮೌಲ್ಯ ಬರೋಬ್ಬರಿ 2.5 ಬಿಲಿಯನ್ ಡಾಲರ್ ಎಂದು ಅಮೆರಿಕದ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಇಲ್ಲಿ ಪ್ರಮುಖ ವಿಚಾರವೊಂದಿದೆ. ಸೆನ್ಲಿ ಚೆನ್ ವಿರುದ್ಧ ಯಾವುದೇ ಸರ್ಕಾರ ಕ್ರಿಮಿನಲ್ ಆರೋಪ ಹೊರಿಸಿಲ್ಲ. ಅವರ ವಿರುದ್ಧದ ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಅಲ್ಲದೆ, ಸೂಪರ್ ಮೈಕ್ರೋ ಕಂಪನಿಯು ಚೆನ್ ಅವರು NVIDIA ಜೊತೆಗಿನ ಸಂಬಂಧ ಅಥವಾ GPU ಹಂಚಿಕೆ ನಿರ್ಧಾರಗಳನ್ನು ನಿರ್ವಹಿಸುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.
NVIDIA ಮಾಜಿ ಟಾಪ್ ಅಧಿಕಾರಿಯ ಪತ್ನಿಗೆ ಚೀನಾ ಚಿಪ್ ಕಳ್ಳಸಾಗಣೆ ನಂಟು? $2.5 ಬಿಲಿಯನ್ ಹಗರಣದಲ್ಲಿ ಹೊಸ ಟ್ವಿಸ್ಟ್!
