ಮಂಗಳೂರು: ನವದುರ್ಗ ಫಿಲ್ಮ್ಸ್ ಲಾಂಛನದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ನಿರ್ಮಾಣದ, ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ “ಪದ್ಮನಾಭ ಆ್ಯಂಡ್ ಫ್ಯಾಮಿಲಿ” ಚಲನಚಿತ್ರದ ಟೀಸರ್ ಮಂಗಳೂರಿನ ಭಾರತ್ ಮಾಲ್ನ ಭಾರತ್ ಸಿನಿಮಾಸ್ನಲ್ಲಿ ಬಿಡುಗಡೆಯಾಯಿತು. ಜನವರಿ 15ರಂದು ಚಿತ್ರ ರಾಜ್ಯಾದ್ಯಂತ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ತೆರೆಕಾಣಲಿದೆ.
ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಚಿತ್ರದ ಟೀಸರ್ ಹಾಗೂ ಹಾಡಿನ ಪ್ರದರ್ಶನ ನಡೆಯಿತು.
ನಿರ್ಮಾಣ ಮೇಲ್ವಿಚಾರಕಿ ಹಾಗೂ ಅಭಿಮತ ಟಿವಿ ಮುಖ್ಯಸ್ಥೆ ಡಾ. ಮಮತಾ ಪಿ. ಶೆಟ್ಟಿ ಮಾತನಾಡಿ, ನಿರ್ಮಾಪಕರು ಕಲಾವಿದರಿಗೆ ಅನ್ನದಾತರು. 54 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ನಿರ್ಮಾಪಕರು ಚಿತ್ರತಂಡಕ್ಕೆ ಯಾವುದೇ ಕೊರತೆಯಾಗದಂತೆ ಸಹಕಾರ ನೀಡಿದ್ದಾರೆ. ಸಮಾಜಸೇವೆಯ ಜೊತೆಗೆ ಕಲಾವಿದರ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಡಾ. ಕನ್ಯಾನ ಸದಾಶಿವ ಶೆಟ್ಟಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದರು.

ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಮಾತನಾಡಿ, ಇದು ತಮ್ಮ ನಾಲ್ಕನೇ ಸಿನಿಮಾ. ನಿರ್ಮಾಪಕರಿಗೆ ಕಥೆ ಇಷ್ಟವಾದ ಹಿನ್ನೆಲೆಯಲ್ಲಿ ಸಿನಿಮಾ ನಿರ್ಮಾಣ ಸಾಧ್ಯವಾಯಿತು. ಕುಟುಂಬ ಸಮೇತ ವೀಕ್ಷಿಸಬಹುದಾದ ಹಾಸ್ಯಮಯ ಚಿತ್ರ ಇದಾಗಿದ್ದು, ಜನವರಿ 15ರಂದು ಬಿಡುಗಡೆಯಾಗಲಿದೆ ಎಂದರು.
ಪ್ರಕಾಶ್ ಪಾಂಡೇಶ್ವರ್, ಪಣಂಬೂರು ಠಾಣೆಯ ಇನ್ಸ್ಪೆಕ್ಟರ್ ಸಲೀಮ್ ಅಬ್ಬಾಸ್ ವಲಾಲ್ ಹಾಗೂ ನ್ಯಾಯವಾದಿ ಅರುಣ್ ಬಂಗೇರ ಟೀಸರ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಒಂದು ಹಾಡಿನ ಚಿತ್ರೀಕರಣಕ್ಕೆ ₹1 ಕೋಟಿ ವೆಚ್ಚ ಮಾಡಲಾಗಿದೆ. ಹೊಸ ಕಲಾವಿದರಿಗೂ ಅವಕಾಶ ನೀಡಲಾಗಿದೆ. ರಿಕ್ಷಾ ಚಾಲಕರು ಅಸಹಾಯಕರು ಅಲ್ಲ, ಸ್ವಾಭಿಮಾನಿಗಳು ಎಂಬ ಕಥಾಹಂದರ ಚಿತ್ರದಲ್ಲಿದೆ. ದೀಪಕ್ ರೈ ಪಾಣಾಜೆ, ಸಂಗೀತ ಶೃಂಗೇರಿ, ಹೃದನ್ ಶೆಟ್ಟಿ, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಸೇರಿದಂತೆ ಕರಾವಳಿಯ ಹಲವು ಕಲಾವಿದರು ನಟಿಸಿದ್ದಾರೆ. ಮಣಿಕಾಂತ್ ಕದ್ರಿ ಮತ್ತು ಸಮೀರ್ ಮುಡಿಪು ಸಂಗೀತ ನೀಡಿದ್ದಾರೆ.
ಈ ಚಿತ್ರವನ್ನು ಅಖಿಲ ಕರ್ನಾಟಕ ಆಟೋ ರಿಕ್ಷಾ ಚಾಲಕರಿಗೆ ಅರ್ಪಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಸಮಾರಂಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಷಷ್ಠೀಶ್ ಪಿ. ಶೆಟ್ಟಿ ಸ್ವಾಗತಿಸಿದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
