ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶಿತ 132ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಬೆಂಬಲ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಮಸೂದೆಗೆ ಅನುಮೋದನೆ ನೀಡಿದೆ. ಚುನಾಯಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸುವ ದೀರ್ಘಕಾಲದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅಮಿತ್ ಶಾ ಬಣ್ಣಿಸಿದರು.
‘ನಾರಿ ಶಕ್ತಿ ವಂದನ ಕಾಯಿದೆ’ಯಡಿ ಪ್ರಸ್ತಾಪಿಸಿರುವ ಮೀಸಲಾತಿಯಿಂದ ನೀತಿ ನಿರೂಪಣೆ, ಶಾಸನ ರಚನೆ ಹಾಗೂ ರಾಷ್ಟ್ರೀಯ ಆದ್ಯತೆಗಳ ನಿರ್ಧಾರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಲಿದೆ ಎಂದು ಹೇಳಿದರು.

ಇದೇ ವೇಳೆ, ಸಂವಿಧಾನದ 170(1)ನೇ ವಿಧಿಗೆ ತಿದ್ದುಪಡಿ ತಂದು ರಾಜ್ಯ ವಿಧಾನಸಭೆಗಳ ಗರಿಷ್ಠ ಸದಸ್ಯ ಬಲವನ್ನು 500ರಿಂದ ಸುಮಾರು 650ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನೂ ಅವರು ಪ್ರಸ್ತಾಪಿಸಿದರು. ಇದರಿಂದ ಉತ್ತರ ಪ್ರದೇಶ ರಾಜ್ಯ ವಿಭಜನೆಯಿಲ್ಲದೆ ವಿಧಾನಸಭಾ ಪ್ರಾತಿನಿಧ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಸದಸ್ಯರ ಸಂಖ್ಯೆ ಹೆಚ್ಚಳದಿಂದ ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆಯಲಿದ್ದು, ಉತ್ತಮ ಆಡಳಿತ ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಬಲಗೊಳ್ಳಲಿದೆ. ಈ ಪ್ರಸ್ತಾವನೆಗಳಿಗೆ ಉತ್ತರ ಪ್ರದೇಶದ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು ಎಂದು ಅಮಿತ್ ಶಾ ಮನವಿ ಮಾಡಿದರು.
