ಮಿಲಿಟರಿಯಿಂದ ಮನೋರಂಜನೆಯವರೆಗೆ ಬೆಂಗಳೂರು ಟೆಕ್ ಸಮಿಟ್ನಲ್ಲಿ ರೋಬೋಟ್ಗಳದ್ದೇ ಹವಾ!
ಬೆಂಗಳೂರಿನ ಬಿಐಇಸಿಯಲ್ಲಿ ನಡೆಯುತ್ತಿರುವ 29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್ನಲ್ಲಿ ಮೈನಿಂಗ್, ಮಿಲಿಟರಿ ಕಾರ್ಯಾಚರಣೆಗೆ ನೆರವಾಗುವ ನಾಲ್ಕು ಕಾಲಿನ ರೋಬೋಟ್ ಹಾಗೂ ಡ್ಯಾನ್ಸ್ ಮಾಡುವ ಹ್ಯೂಮನಾಯ್ಡ್ ರೋಬೋಟ್ಗಳು ವಿಶೇಷ ಆಕರ್ಷಣೆಯಾಗಿವೆ. ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಬೆಂಗಳೂರು ಟೆಕ್ ಸಮಿಟ್ ಆಯೋಜಿಸಲಾಗಿದ್ದು, ವಿಶ್ವದ 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ.
ಬಿಐಇಸಿಯಲ್ಲಿ ನಿನ್ನೆಯಿಂದ (ನವೆಂಬರ್ 17) ಆರಂಭವಾಗಿರುವ 29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್ನಲ್ಲಿ ಒಂದಕ್ಕಿಂತ ಒಂದು ವಿಭಿನ್ನ ತಂತ್ರಜ್ಞಾನಗಳ ರೋಬೋಟ್ಗಳು ನೋಡುಗರ ಕಣ್ಮನ ಸೆಳೆದಿವೆ. ಮನುಷ್ಯರು ಹೋಗಲಾಗದ ಸ್ಥಳಗಳಲ್ಲೂ ಸಂಚರಿಸಿ ಮಣ್ಣಿನ ಸ್ಯಾಂಪಲ್ ಸಂಗ್ರಹಿಸುವ ಮೈನಿಂಗ್ ರೋಬೋಟ್ ಇವುಗಳಲ್ಲಿ ವಿಶೇಷ ಆಕರ್ಷಣೆಯಾಗಿದೆ. ಚಿನ್ನ, ಕಬ್ಬಿಣದಂತಹ ಖನಿಜಗಳ ಗುಣಮಟ್ಟ ಪತ್ತೆಹಚ್ಚಲು ಈ ತಂತ್ರಜ್ಞಾನ ನೆರವಾಗಲಿದೆ ಎನ್ನಲಾಗಿದೆ.
ಇನ್ನು ಸೈನಿಕರಿಗೆ ಅಗತ್ಯ ವಸ್ತುಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿರುವ ನಾಲ್ಕು ಕಾಲಿನ ರೋಬೋಟ್ಗಳೂ ಪ್ರದರ್ಶನದ ವಿಶೇಷವಾಗಿತ್ತು. ಈ ರೋಬೋಟ್ಗಳು ಸೇನಾ ಕಾರ್ಯಾಚರಣೆಗಳಿಗೂ ನೆರವಾಗಬಲ್ಲವಾಗಿದ್ದು, ಬೆಟ್ಟ, ಗುಡ್ಡ, ಮರಳುಗಾಡಿನಂತಹ ಕಠಿಣ ಪ್ರದೇಶಗಳಲ್ಲೂ ಸಂಚರಿಸುವ ಜೀಪ್ ಮಾದರಿಯ ರೋಬೋಟ್ ಕೂಡ ಗಮನಸೆಳೆದಿದೆ. ಸುಮಾರು 20 ಕೆ.ಜಿ. ತೂಕದ ಈ ರೋಬೋಟ್ 15 ಕೆ.ಜಿ. ವರೆಗೂ ಭಾರ ಹೊರುವ ಸಾಮರ್ಥ್ಯ ಹೊಂದಿದೆ.
ಮನುಷ್ಯನಿಗೆ ಬಾಡಿಗಾರ್ಡ್ನಂತೆ ರಕ್ಷಣೆ ನೀಡುವ ಹ್ಯೂಮನಾಯ್ಡ್ ರೋಬೋಟ್ ಕೂಡ ಎಲ್ಲರನ್ನೂ ಬೆರಗುಗೊಳಿಸಿದೆ. ಎದುರಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ಈ ರೋಬೋಟ್, ಮನುಷ್ಯರಂತೆ ನಡೆಯುತ್ತೆ, ಕುಣಿಯುತ್ತೆ. ತರ್ಲೆ ಮಾಡಿದ್ರೆ ಹೊಡೆಯುತ್ತೆ! ಮತ್ತೊಂದೆಡೆ ಚಿಕ್ಕ ಗಾತ್ರದ ಮಾನವ ಸ್ನೇಹಿ ರೋಬೋಟ್ ತನ್ನ ಡ್ಯಾನ್ಸ್ನಿಂದ ಜನರನ್ನು ರಂಜಿಸುತ್ತಿದೆ. ಸ್ಪೀಕರ್, ಸಿಸಿ ಕ್ಯಾಮರಾ ಹೊಂದಿರುವ ಈ ರೋಬೋಟ್ ವಾಕಿಂಗ್ಗೂ ಸಾಥ್ ನೀಡಲಿದೆ.
ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಬೆಂಗಳೂರು ಟೆಕ್ ಸಮಿಟ್ ಆಯೋಜಿಸಲಾಗಿದೆ. ವಿಶ್ವದ 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, 700ಕ್ಕೂ ಹೆಚ್ಚು ಭಾಷಣಕಾರರು, 1,500ಕ್ಕೂ ಹೆಚ್ಚು ಪ್ರದರ್ಶಕರು, 16 ವಿಷಯಾಧಾರಿತ ವಿಭಾಗಗಳು, 13 ವೇದಿಕೆಗಳಲ್ಲಿ 140ಕ್ಕೂ ಹೆಚ್ಚು ವಿಚಾರಗೋಷ್ಠಿಗಳು ಸಮಿಟ್ನ ಭಾಗವಾಗಿರಲಿವೆ. ದೇಶದ 100 ನಗರಗಳಿಂದ 1,000ಕ್ಕೂ ಹೆಚ್ಚು ನವೋದ್ಯಮಗಳು ಸೇರಿ ಸ್ವೀಡನ್ ಪಾಲುದಾರ ರಾಷ್ಟ್ರ, ಆಸ್ಟ್ರೇಲಿಯಾ, ಪೋಲೆಂಡ್ ಮತ್ತು ಇಟಲಿ ಬೆಂಬಲಿತ ರಾಷ್ಟ್ರಗಳು ಕೂಡ ಸಮಿಟ್ನಲ್ಲಿ ಪಾಲ್ಗೊಂಡಿವೆ.
ಈ ಬಾರಿಯ ಟೆಕ್ ಸಮಿಟ್ನಲ್ಲಿ ಗಮನ ಸೆಳೆದ ಪ್ರಮುಖ ಆವಿಷ್ಕಾರಗಳಲ್ಲಿ ಮೈನಿಂಗ್ ರೋಬೋಟ್ ಕೂಡ ಒಂದು. ಮನುಷ್ಯರು ಪ್ರವೇಶಿಸಲು ಕಷ್ಟವಾಗುವ ಅಥವಾ ಅಪಾಯಕಾರಿಯಾಗಿರುವ ಪ್ರದೇಶಗಳಿಗೆ ತೆರಳಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಈ ರೋಬೋಟ್ ಹೊಂದಿದೆ.
ಚಿನ್ನ, ಕಬ್ಬಿಣ ಸೇರಿದಂತೆ ವಿವಿಧ ಖನಿಜಗಳಿರುವ ಪ್ರದೇಶಗಳಲ್ಲಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ಗುಣಮಟ್ಟವನ್ನು ಪರೀಕ್ಷಿಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಗಣಿಗಾರಿಕೆ ಕ್ಷೇತ್ರದಲ್ಲಿ ಕಾರ್ಮಿಕರ ಸುರಕ್ಷತೆ ಹೆಚ್ಚಿಸುವುದರ ಜೊತೆಗೆ ಖನಿಜ ಅನ್ವೇಷಣೆಯ ಕಾರ್ಯವನ್ನು ಸುಲಭಗೊಳಿಸುವ ಸಾಧ್ಯತೆಯಿದೆ.
ಸೇನಾ ಕಾರ್ಯಾಚರಣೆಗಳಿಗೆ ನೆರವಾಗುವ ನಾಲ್ಕು ಕಾಲಿನ ರೋಬೋಟ್ ಕೂಡ ಪ್ರದರ್ಶನದಲ್ಲಿ ಗಮನ ಸೆಳೆದಿದೆ. ನಾಯಿಯಂತೆ ನಾಲ್ಕು ಕಾಲುಗಳ ಸಹಾಯದಿಂದ ಚಲಿಸುವ ಈ ಯಂತ್ರವನ್ನು ಸೈನಿಕರಿಗೆ ಅಗತ್ಯ ವಸ್ತುಗಳನ್ನು ಸಾಗಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.
ಬೆಟ್ಟಗುಡ್ಡಗಳು, ಕಲ್ಲುಬಂಡೆಗಳಿರುವ ಪ್ರದೇಶಗಳು ಹಾಗೂ ಮರಳುಗಾಡಿನಂತಹ ಕಠಿಣ ಭೂಪ್ರದೇಶಗಳಲ್ಲಿ ಸಂಚರಿಸಲು ವಿನ್ಯಾಸಗೊಳಿಸಿರುವ ಜೀಪ್ ಮಾದರಿಯ ಚಿಕ್ಕ ರೋಬೋಟ್ ಕೂಡ ಪ್ರದರ್ಶನದಲ್ಲಿದೆ.
ವಾಕಿಂಗ್ಗೂ ಸಾಥ್ ನೀಡುವ ಪುಟ್ಟ ರೋಬೋಟ್!
ದೊಡ್ಡ ರೋಬೋಟ್ಗಳ ನಡುವೆ ಪುಟ್ಟ ಕಂಪ್ಯಾನಿಯನ್ ರೋಬೋಟ್ ಕೂಡ ಜನರನ್ನು ರಂಜಿಸುತ್ತಿದೆ. ಸಂಗೀತಕ್ಕೆ ತಕ್ಕಂತೆ ಡ್ಯಾನ್ಸ್ ಮಾಡುವ ಈ ರೋಬೋಟ್ನಲ್ಲಿ ಸ್ಪೀಕರ್ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಜನರೊಂದಿಗೆ ನಡೆಯಲು ಜೊತೆಯಾಗುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇಂತಹ ರೋಬೋಟ್ಗಳನ್ನು ಭವಿಷ್ಯದಲ್ಲಿ ವೈಯಕ್ತಿಕ ಸಹಾಯಕರು, ಮನೋರಂಜನೆ ಹಾಗೂ ಕೆಲವು ದೈನಂದಿನ ಚಟುವಟಿಕೆಗಳಿಗೆ ಬಳಸುವ ಸಾಧ್ಯತೆಯಿದೆ.
50 ಸಾವಿರ ಚದರ ಅಡಿಯ AI ಮತ್ತು ರೋಬೋಟಿಕ್ಸ್ ಪೆವಿಲಿಯನ್!
ಈ ಬಾರಿಯ ಟೆಕ್ ಸಮಿಟ್ನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಸುಮಾರು 50,000 ಚದರ ಅಡಿ ವಿಸ್ತೀರ್ಣದ ವಿಶೇಷ AI ಮತ್ತು ರೋಬೋಟಿಕ್ಸ್ ಪೆವಿಲಿಯನ್ನಲ್ಲಿ 101ಕ್ಕೂ ಹೆಚ್ಚು ನವೋದ್ಯಮಗಳು ತಮ್ಮ ತಂತ್ರಜ್ಞಾನ ಪ್ರದರ್ಶಿಸಲು ಯೋಜಿಸಲಾಗಿದೆ.
ಹ್ಯೂಮನಾಯ್ಡ್ ರೋಬೋಟ್ಗಳು, ಡ್ರೋನ್ಗಳು, ಸ್ವಯಂಚಾಲಿತ ಯಂತ್ರಗಳು, ಕೈಗಾರಿಕಾ ರೋಬೋಟಿಕ್ಸ್ ಹಾಗೂ ರೋಬೋಟ್ ಮೂಲಕ ಅಡುಗೆ ಮಾಡುವ ತಂತ್ರಜ್ಞಾನವೂ ಈ ಪ್ರದರ್ಶನದ ಪ್ರಮುಖ ವಿಷಯಗಳಾಗಿವೆ.
ಮಿಲಿಟರಿಯಿಂದ ಮನೋರಂಜನೆಯವರೆಗೆ ಬೆಂಗಳೂರು ಟೆಕ್ ಸಮಿಟ್ನಲ್ಲಿ ರೋಬೋಟ್ಗಳದ್ದೇ ಹವಾ!
