ಆನೆಗಳು ನಾಡು ಪ್ರವೇಶಿಸುವುದಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಿ; ಚಿಕ್ಕಮಗಳೂರು ಆನೆ ಪಾರ್ಕ್ ಅಲ್ಲ: ಡಾ. ಸಿ.ಟಿ. ರವಿ

ಬೆಂಗಳೂರು: ಆನೆಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಚಿಕ್ಕಮಗಳೂರು ಜಿಲ್ಲೆಯನ್ನು ರಾಜ್ಯದ ಆನೆ ಪಾರ್ಕ್ ಮಾಡಲು ಹೊರಟಿದ್ದೀರಾ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಡಿನಲ್ಲಿ ಸಾಕಷ್ಟು ಮೇವು ಮತ್ತು ನೀರು ದೊರೆತರೆ ಆನೆಗಳು ನಾಡಿಗೆ ಬರುವ ಅಗತ್ಯವಿರುವುದಿಲ್ಲ. ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಭದ್ರಾ ಅಭಯಾರಣ್ಯವನ್ನು ಆನೆಗಳ ದೊಡ್ಡಿಯನ್ನಾಗಿ ಮಾಡಿದ್ದೀರಾ? ರಾಜ್ಯದ ಎಲ್ಲ ಆನೆಗಳನ್ನು ಚಿಕ್ಕಮಗಳೂರಿಗೆ ತಂದು ಬಿಡುವುದೇ ಸರ್ಕಾರದ ಉದ್ದೇಶವೇ? ಜಿಲ್ಲೆಯಲ್ಲಿ ಸುಮಾರು 12.5 ಲಕ್ಷ ಜನರಿದ್ದು, ಅವರ ಬದುಕಿನ ಬಗ್ಗೆಯೂ ಸರ್ಕಾರ ಗಮನಹರಿಸಬೇಕು ಎಂದರು.

ಅರಣ್ಯಗಳಲ್ಲಿ ನೀಲಗಿರಿ, ಅಕೇಶಿಯಾ ಮತ್ತು ಪೈನ್ ಮರಗಳನ್ನು ಬೆಳೆಸುವುದರಿಂದ ಪ್ರಾಣಿಗಳಿಗೆ ಏನು ಪ್ರಯೋಜನ? ನೈಸರ್ಗಿಕ ಆಹಾರ ಮತ್ತು ನೀರಿನ ಕೊರತೆಯಿಂದ ಆನೆಗಳು ನಾಡಿಗೆ ಬರುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು. ಆನೆಗಳಿಂದ ಅಡಿಕೆ, ತೆಂಗು, ಕಬ್ಬು ಮತ್ತು ಭತ್ತದ ಬೆಳೆಗಳಿಗೆ ಹಾನಿಯಾಗುತ್ತಿದ್ದು, ಜೀವಕ್ಕೂ ಅಪಾಯ ಎದುರಾಗಿದೆ. ಸರ್ಕಾರದ ಪರಿಹಾರ ಸಮರ್ಪಕವಾಗಿಲ್ಲ ಎಂದು ಟೀಕಿಸಿದರು.

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ₹8,000 ಗೌರವಧನ ನೀಡುವ ಭರವಸೆ ನೀಡಿದ್ದರೂ, ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾದರೂ ಈಡೇರಿಸಿಲ್ಲ ಎಂದು ರವಿ ಆರೋಪಿಸಿದರು. ಬೆಂಗಳೂರು ಹಬ್ಬ ಮತ್ತು ಮುಖ್ಯಮಂತ್ರಿಗಳ ನಿವಾಸದ ನವೀಕರಣಕ್ಕೆ ಹಣವಿರುವ ಸರ್ಕಾರಕ್ಕೆ ಪ್ರತಿಭಟನಾನಿರತ ಕಾರ್ಯಕರ್ತೆಯರ ನೆರವಿಗೆ ಬರಲು ಮನಸ್ಸಿಲ್ಲವೇ ಎಂದು ಪ್ರಶ್ನಿಸಿದರು. ಅವರ ಬೇಡಿಕೆ ಈಡೇರಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆದು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಸಾಮಾಜಿಕ ಜಾಲತಾಣಗಳ ಖಾತೆ ಸ್ಥಗಿತದ ವಿಚಾರದಲ್ಲಿ ಕಾಂಗ್ರೆಸ್ ಸಂವಿಧಾನಿಕ ಸಂಸ್ಥೆಗಳ ವಿರುದ್ಧ ಅನುಮಾನ ವ್ಯಕ್ತಪಡಿಸುತ್ತಿದೆ ಎಂದು ಟೀಕಿಸಿದ ಅವರು, ಎನ್‌ಡಿಎ ಮುಖ್ಯಮಂತ್ರಿ ಆಯ್ಕೆಯನ್ನು ಸೂಕ್ತ ಸಮಯದಲ್ಲಿ ಮಿತ್ರಪಕ್ಷಗಳು ನಿರ್ಧರಿಸಲಿವೆ ಎಂದರು. ಶಕ್ತಿ ಸೇರಿದಂತೆ ಉಚಿತ ಯೋಜನೆಗಳಿಂದ ಸಾರಿಗೆ ಇಲಾಖೆಗೆ ಹಾಗೂ ಜನರಿಗೆ ಹೊರೆಯಾಗುತ್ತಿದೆ ಎಂದು ಆರೋಪಿಸಿದರು.

ಚಿಕ್ಕಮಗಳೂರಿನ ಆನೆ ಸಮಸ್ಯೆ ಕುರಿತು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವ ಎಚ್ಚರಿಕೆ ನೀಡಿರುವುದು ರಾಜಕೀಯ ನಾಟಕ ಎಂದು ರವಿ ಟೀಕಿಸಿದರು. ಶಾಸಕರು ನಿಜವಾಗಿಯೂ ರಾಜೀನಾಮೆ ನೀಡಲು ಬಯಸಿದರೆ ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಬಹುದು. ಆದರೆ ರಾಜಕೀಯ ಹೇಳಿಕೆಗಳ ನಡುವೆ ಜನರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದರು.