ಅಂಬರೀಶ್ 8ನೇ ವರ್ಷದ ಪುಣ್ಯಸ್ಮರಣೆ ಅಂಬಿ ಸಮಾಧಿಗೆ ವಿಶೇಷ ಪೂಜೆ!!

ಅಂಬರೀಶ್ 8ನೇ ವರ್ಷದ ಪುಣ್ಯಸ್ಮರಣೆ ಅಂಬಿ ಸಮಾಧಿಗೆ ವಿಶೇಷ ಪೂಜೆ!!

ಕನ್ನಡ ಚಿತ್ರರಂಗದ ‘ರೆಬೆಲ್ ಸ್ಟಾರ್’, ‘ಕಲಿಯುಗದ ಕರ್ಣ’ ಎಂದೇ ಖ್ಯಾತರಾಗಿದ್ದ ದಿವಂಗತ ಡಾ. ಅಂಬರೀಷ್ ಅವರ 8ನೇ ಪುಣ್ಯಸ್ಮರಣೆಯನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರು ಭಕ್ತಿ ಮತ್ತು ಭಾವಪೂರ್ಣವಾಗಿ ಆಚರಿಸುತ್ತಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ಅಂಬರೀಷ್ ಅವರ ಸ್ಮಾರಕ ಹಾಗೂ ಪುತ್ತಳಿಯನ್ನು ಇಂದು ಮುಂಜಾನೆಯಿಂದಲೇ ವಿವಿಧ ಬಗೆಯ ಬಣ್ಣಬಣ್ಣದ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ.

ಪುಣ್ಯಸ್ಮರಣೆಯ ಅಂಗವಾಗಿ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಹಾಗೂ ಪುತ್ರ ಅಭಿಷೇಕ್ ಅಂಬರೀಷ್ ಅವರು ಕಂಠೀರವ ಸ್ಟುಡಿಯೋಗೆ ಆಗಮಿಸಿ, ಅಂಬಿ ಸಮಾಧಿ ಮತ್ತು ಪುತ್ತಳಿಗೆ ವಿಶೇಷ ಪೂಜೆ ಸಲ್ಲಿಸಿ ನಮನ ಅರ್ಪಿಸಿದರು. ತಮ್ಮ ನೆಚ್ಚಿನ ನಾಯಕನ 8ನೇ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋದತ್ತ ಆಗಮಿಸುತ್ತಿದ್ದಾರೆ. ಸ್ಮಾರಕದ ಮುಂದೆ ಸಾಲುಗಟ್ಟಿ ನಿಂತು ‘ಕಲಿಯುಗದ ಕರ್ಣ’ನಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ನೆಚ್ಚಿನ ನಟನನ್ನು ಸ್ಮರಿಸುತ್ತಿದ್ದಾರೆ.

ಅಂಬಿ ಸಮಾಧಿಗೆ ವಿಶೇಷ ಪೂಜೆಅಂಬರೀಶ್ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಪ್ರತಿವರ್ಷವೂ ಪತ್ನಿ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್, ಕುಟುಂಬಸ್ಥರು ಹಾಗೂ ಅಭಿಮಾನಿಗಳು ಸಮಾಧಿಗೆ ಭೇಟಿ ನೀಡಿ ಅಂಬಿಯನ್ನು ಸ್ಮರಿಸುತ್ತಾರೆ.

ಅಂಬರೀಶ್ ಅವರ ಮೇಲಿನ ಅಭಿಮಾನದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ಅನ್ನದಾನ, ರಕ್ತದಾನ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಪರಿಪಾಠವಿದೆ.

ನಾಗರಹಾವು ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ!
1952ರ ಮೇ 29ರಂದು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯಲ್ಲಿ ಅಂಬರೀಶ್ ಜನಿಸಿದರು. ಅವರ ಮೂಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್. 1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ನಾಗರಹಾವು ಚಿತ್ರದ ಜಲೀಲ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ ಅಂಬರೀಶ್, ಮುಂದೆ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಾಯಕ ನಟರಾದರು. ತಮ್ಮ ಸಿನಿಪಯಣದಲ್ಲಿ 200ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಅಂತ, ಚಕ್ರವ್ಯೂಹ, ನ್ಯೂಡೆಲ್ಲಿ, ಒಲವಿನ ಉಡುಗೊರೆ, ಮಣ್ಣಿನ ದೋಣಿ, ಏಳು ಸುತ್ತಿನ ಕೋಟೆ ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು.
ರಾಜಕೀಯದಲ್ಲೂ ಮಿಂಚಿದ್ದ ಮಂಡ್ಯದ ಗಂಡು!
ಅಂಬರೀಶ್ ಕೇವಲ ಸಿನಿಮಾ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ರಾಜಕೀಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಮಂಡ್ಯ ಕ್ಷೇತ್ರದ ಸಂಸದರಾಗಿ, ಕೇಂದ್ರ ಸಚಿವರಾಗಿ ಹಾಗೂ ಕರ್ನಾಟಕದ ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಪಕ್ಷಾತೀತವಾಗಿ ರಾಜಕೀಯ ನಾಯಕರೊಂದಿಗೆ ಉತ್ತಮ ಸ್ನೇಹ ಹೊಂದಿದ್ದ ಅಂಬರೀಶ್, ತಮ್ಮ ನೇರ ಮಾತು ಮತ್ತು ಸ್ನೇಹಪರ ವ್ಯಕ್ತಿತ್ವದಿಂದ ಎಲ್ಲರಿಗೂ ಹತ್ತಿರವಾಗಿದ್ದರು.
ಚಿತ್ರರಂಗದ ಪ್ರೀತಿಯ ಅಂಬಿ ಮಾಮ!
ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಬಗೆಹರಿಸಲು ಅಂಬರೀಶ್ ಮುಂದಾಗುತ್ತಿದ್ದರು. ಹಿರಿಯ ಕಲಾವಿದರಿಂದ ಹಿಡಿದು ಕಿರಿಯ ನಟರವರೆಗೂ ಎಲ್ಲರೊಂದಿಗೂ ಆತ್ಮೀಯ ಸಂಬಂಧ ಹೊಂದಿದ್ದರು. ಇದೇ ಕಾರಣಕ್ಕೆ ಅವರನ್ನು ಚಿತ್ರರಂಗದವರು ಪ್ರೀತಿಯಿಂದ ‘ಅಂಬಿ ಮಾಮ’ ಎಂದು ಕರೆಯುತ್ತಿದ್ದರು.

ಸಹಾಯ ಕೇಳಿಕೊಂಡು ಬಂದವರಿಗೆ ನೆರವಾಗುವ ಗುಣ, ಸ್ನೇಹಕ್ಕೆ ನೀಡುತ್ತಿದ್ದ ಮಹತ್ವ ಹಾಗೂ ಸರಳ ವ್ಯಕ್ತಿತ್ವದಿಂದ ಅಂಬರೀಶ್ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದರು.
ಅಂಬಿ ನೆನಪು ಎಂದಿಗೂ ಅಜರಾಮರ!
ಅಂಬರೀಶ್ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸಿನಿಮಾಗಳು, ಡೈಲಾಗ್‌ಗಳು, ಸ್ನೇಹ ಮತ್ತು ವ್ಯಕ್ತಿತ್ವ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿವೆ. ಎಂಟು ವರ್ಷಗಳು ಕಳೆದರೂ ಮಂಡ್ಯದ ಗಂಡಿನ ಮೇಲಿನ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ

Leave a Reply

Your email address will not be published. Required fields are marked *