ಮತ್ತೆ ಲಕ್ಷ್ಮಿ ಹೆಬ್ಬಾಳ್ಕರ್ಗೆ ಒಲಿಯುತ್ತಾ ಮಂತ್ರಿಗಿರಿ!? ಅಚ್ಚರಿಯ ಹೇಳಿಕೆ ಕೊಟ್ಟ ಮಾಜಿ ಸಚಿವೆ
ಇಂದು ಬೆಂಗಳೂರಿನಲ್ಲಿ ಮಾತಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮತ್ತೊಮ್ಮೆ ತಾವೇ ಸಚಿವರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದ್ಯ ರಾಜ್ಯ ಸಚಿವ ಸಂಪುಟದಲ್ಲಿ 2 ಸ್ಥಾನಗಳು ಖಾಲಿ ಇದ್ದು, ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಈ ಪೈಕಿ ಒಂದು ಸ್ಥಾನವನ್ನು ಮಹಿಳಾ ಕೋಟಾದಡಿ ಮಹಿಳೆಯರಿಗೆ ನೀಡಬೇಕು ಎಂಬ ಒತ್ತಾಯ ಹೆಚ್ಚಿದ ಹಿನ್ನೆಲೆ ಯಾರಿಗೆ ಮಂತ್ರಿಗಿರಿ ನೀಡಬೇಕು ಅನ್ನೋ ಚರ್ಚೆ ಕೂಡ ಜೋರಾಗಿದೆ. ಡಿಸೆಂಬರ್ 2 ರಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನ ಮಹಿಳಾ ಶಾಸಕಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಈ ಬೆಳವಣಿಗೆ ನಡುವೆ ಸಚಿವ ಸ್ಥಾನದ ಆಕಾಂಕ್ಷಿ ಆಗಿರೋ ಲಕ್ಷ್ಮಿ ಹೆಬ್ಬಾಳ್ಕರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮುಂಚೂಣಿಯಲ್ಲಿದೆ ಇಬ್ಬರ ಹೆಸರು
ಖಾಲಿ ಇರುವ 2 ಸಚಿವ ಸ್ಥಾನಗಳ ಭರ್ತಿಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಜೊತೆ ನಿರಂತರ ಚರ್ಚೆ ನಡೆಸುತ್ತಿದ್ದಾರೆ. 2 ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಕೂಡ ಬೆಳೆಯುತ್ತಲಿದೆ. ಮಹಿಳಾ ಕೋಟಾದಡಿ ಅನ್ನಪೂರ್ಣ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇಂದು ಬೆಂಗಳೂರಿನಲ್ಲಿ ಮಾತಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮತ್ತೊಮ್ಮೆ ತಾವೇ ಸಚಿವರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಸಿಎಂ ನನ್ನನ್ನೇ ಆಯ್ಕೆ ಮಾಡೋ ವಿಶ್ವಾಸವಿದೆ’
ನ್ಯೂಸ್18 ಜೊತೆ ಮಾತಾಡಿದ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವ್ರು. ಮಂತ್ರಿ ಸ್ಥಾನಕ್ಕೆ ಸಿಎಂ ನನ್ನನ್ನೇ ಪರಿಗಣಿಸುವ ವಿಶ್ವಾಸವಿದೆ ಎಂದಿದ್ದಾರೆ. ನಾನು ಮೂರು ವರ್ಷಗಳ ಕಾಲ ಮಂತ್ರಿಯಾಗಿ ಚೆನ್ನಾಗಿ ಕೆಲಸ ಮಾಡಿದ್ದೇನೆ. ಇವಾಗ ಮತ್ತೊಮ್ಮೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಸಿಎಂಗೆ ಮನವಿ ಮಾಡಿದ್ದೇನೆ. ಬೆಳಗಾವಿ ಅಧಿವೇಶನದ ಒಳಗೆ ಸಂಪುಟದ ಭರ್ತಿ ಮಾಡುವ ಬಗ್ಗೆ ಸಿಎಂ ಹೇಳಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇನ್ನೂ 2 ಸ್ಥಾನಗಳು ಖಾಲಿ
ಪ್ರಸ್ತುತ ಸಚಿವ ಸಂಪುಟದಲ್ಲಿ ಇನ್ನೂ 2 ಸ್ಥಾನಗಳು ಖಾಲಿ ಇದ್ದು, ಈ ಸ್ಥಾನಗಳ ಭರ್ತಿಗಾಗಿ ದೆಹಲಿ ಮಟ್ಟದಲ್ಲಿ ಲಾಬಿ ಹಾಗೂ ಚರ್ಚೆಗಳು ನಡೆಯುತ್ತಿವೆ. ಅಧಿವೇಶನದೊಳಗೆ ಸಂಪುಟ ವಿಸ್ತರಣೆ ನಡೆಯಲಿದ್ದು, ಮಹಿಳಾ ಸಚಿವ ಸ್ಥಾನ ತುಂಬೋದು ಖಚಿತ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸಚಿವ ಸಂಪುಟಕ್ಕೆ ಮಹಿಳೆಯೊಬ್ಬರನ್ನು ಸೇರಿಸಿಕೊಳ್ಳುವ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ.
ನವೆಂಬರ್ 16ರಂದು ಪ್ರಕಟವಾದ ವರದಿಗಳ ಪ್ರಕಾರ, ಈ ಸಂಬಂಧ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲು ದೆಹಲಿಯಿಂದ ಕರೆ ಬರುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಮುಂದಿನ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಮಹಿಳಾ ಸಚಿವರನ್ನು ನೇಮಿಸುವುದಾಗಿ ಅವರು ಈ ಹಿಂದೆ ಭರವಸೆ ನೀಡಿದ್ದರು. ಆದರೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದರ ಕುರಿತು ಇನ್ನೂ ಅಧಿಕೃತ ಘೋಷಣೆಯಾಗಿಲ್ಲ
ಮತ್ತೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕುರಿತು ಈ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ತಾವು ಸಚಿವ ಸ್ಥಾನಕ್ಕಾಗಿ ಯಾರ ಮೇಲೂ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ತಾವು ಪಕ್ಷದ ಶಿಸ್ತಿನ ಕಾರ್ಯಕರ್ತೆಯಾಗಿದ್ದು, ಹೈಕಮಾಂಡ್ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿರ್ವಹಿಸುವುದಾಗಿ ಹೇಳಿದ್ದರು.
ಮೂರು ವರ್ಷಗಳ ಕಾಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ಕೆಲಸ ಮಾಡುವ ಅವಕಾಶ ದೊರೆತಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದ ಅವರು, ಮತ್ತೊಮ್ಮೆ ಅವಕಾಶ ಸಿಕ್ಕರೆ ಕೆಲಸ ಮಾಡುವುದಾಗಿ ತಿಳಿಸಿದ್ದರು.
ಅದೇ ಸಂದರ್ಭದಲ್ಲಿ ಮಹಿಳೆಯರಿಲ್ಲದ ಸಚಿವ ಸಂಪುಟ ಅಪೂರ್ಣ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. ಮಹಿಳೆಯರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿರುವುದರಿಂದ ಸರ್ಕಾರದ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿ ಮಹಿಳೆಯರ ಧ್ವನಿ ಇರಬೇಕು ಎಂದು ಪ್ರತಿಪಾದಿಸಿದ್ದರು.
ಆಗಸ್ಟ್ 2026ರಲ್ಲಿ ನೀಡಿದ್ದ ಈ ಹೇಳಿಕೆ ಇದೀಗ ಮತ್ತೆ ಪ್ರಸ್ತುತವಾಗುತ್ತಿದೆ
ಗೃಹಲಕ್ಷ್ಮೀ ಫಲಾನುಭವಿಗಳಿಂದಲೇ ಹೆಬ್ಬಾಳ್ಕರ್ ಪರ ಮನವಿ!
ಈ ನಡುವೆ ನವೆಂಬರ್ 6ರಂದು ನಡೆದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳೊಂದಿಗಿನ ಸಂವಾದದಲ್ಲೂ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಪ್ರಸ್ತಾಪವಾಗಿತ್ತು.
ಸಂವಾದದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು, ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಎಂದು ನೆನಪಿಸಿಕೊಂಡು, ಅವರನ್ನು ಮತ್ತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯನ್ನಾಗಿ ನೇಮಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದರು.
ಈ ಮನವಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಸ್ಯಮಿಶ್ರಿತವಾಗಿ ಪ್ರತಿಕ್ರಿಯಿಸಿದ್ದರು. ಮಹಿಳಾ ಸಚಿವರನ್ನು ನೇಮಿಸುವ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದರು.
ಈ ಬೆಳವಣಿಗೆಯ ನಂತರ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೆ ಸಚಿವ ಸಂಪುಟಕ್ಕೆ ಮರಳುವ ಸಾಧ್ಯತೆ ಕುರಿತ ಚರ್ಚೆಗೆ ಮತ್ತಷ್ಟು ವೇಗ ಸಿಕ್ಕಿದೆ
ಮತ್ತೆ ಲಕ್ಷ್ಮಿ ಹೆಬ್ಬಾಳ್ಕರ್ಗೆ ಒಲಿಯುತ್ತಾ ಮಂತ್ರಿಗಿರಿ!? ಅಚ್ಚರಿಯ ಹೇಳಿಕೆ ಕೊಟ್ಟ ಮಾಜಿ ಸಚಿವೆ
