ಬೆಂಗಳೂರಿನಲ್ಲಿ ಆಭರಣ ಖರೀದಿಗೆ ಮುಗಿಬಿದ್ದ ಜನ, ಗ್ರಾಹಕರಿಗೆ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ
ಮದುವೆ ಸೀಸನ್ ನಡುವೆಯೇ ಚಿನ್ನದ ಬೆಲೆಯಲ್ಲಿ 10 ದಿನಗಳಲ್ಲಿ 10 ಗ್ರಾಂಗೆ 14,720 ರೂಪಾಯಿ ಇಳಿಕೆಯಾಗಿದ್ದು, ಬೆಂಗಳೂರಿನ ಆಭರಣ ಮಳಿಗೆಗಳಲ್ಲಿ ಗ್ರಾಹಕರ ಸಂಖ್ಯೆ ಶೇಕಡಾ 20ರಿಂದ 25ರಷ್ಟು ಹೆಚ್ಚಾಗಿದೆ. ಇದೇ ವೇಳೆ, ಚಿನ್ನ ಖರೀದಿಸುವ ಮುನ್ನ HUID ಕೋಡ್, ಶುದ್ಧತೆ, ತೂಕ ಮತ್ತು ಅಧಿಕೃತ ಬಿಲ್ ಪರಿಶೀಲಿಸುವಂತೆ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.
ಹತ್ತು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
ಬೆಂಗಳೂರಿನ ಚಿನ್ನದ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳ
ಚಿನ್ನ ಖರೀದಿಸುವ ಮುನ್ನ HUID, ಬಿಲ್ ಪರಿಶೀಲಿಸಿ
ಮದುವೆ ಸೀಸನ್ ನಡುವೆಯೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿರುವುದು ಆಭರಣ ಪ್ರಿಯರಿಗೆ ಸಂತಸ ತಂದಿದೆ. ಬಂಗಾರದ ದರ ಕುಸಿಯುತ್ತಿದ್ದಂತೆ ಬೆಂಗಳೂರಿನಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಡಿಸೆಂಬರ್ 15ರವರೆಗೆ ಮದುವೆಗಳ ಸಂಭ್ರಮ ಮುಂದುವರಿಯಲಿದ್ದು, ಚಿನ್ನದ ಅಂಗಡಿಗಳಿಗೆ ಲಗ್ಗೆ ಇಡುವ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಬೆಲೆ ಇಳಿಕೆಯ ಲಾಭ ಪಡೆಯಲು ಮುಂದಾಗಿರುವ ಗ್ರಾಹಕರು ಚಿನ್ನದ ಶುದ್ಧತೆ, ತೂಕ ಮತ್ತು ಅಧಿಕೃತ ಬಿಲ್ ಪರಿಶೀಲಿಸುವಂತೆ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.
ಕಳೆದ ಕೆಲ ದಿನಗಳಿಂದ ಚಿನ್ನದ ದರದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಕೇವಲ 10 ದಿನಗಳ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 14,720 ರೂಪಾಯಿ ಇಳಿಕೆಯಾಗಿದೆ. ಇದರಿಂದ ಮದುವೆ ಖರೀದಿಗೆ ಚಿನ್ನ ಕೊಳ್ಳಲು ಕಾಯುತ್ತಿದ್ದ ಗ್ರಾಹಕರಿಗೆ ಅನುಕೂಲವಾಗಿದೆ. ಬೆಲೆ ಕಡಿಮೆಯಾಗಿರುವುದರಿಂದ ಮದುವೆ ಮನೆಗಳಲ್ಲಿ ಆಭರಣ ಖರೀದಿಯ ಸಂಭ್ರಮ ಹೆಚ್ಚಾಗಿದ್ದು, ಚಿನ್ನದ ಮಾರುಕಟ್ಟೆಯಲ್ಲಿಯೂ ವಹಿವಾಟು ಚುರುಕಾಗಿದೆ.
ಬೆಂಗಳೂರಿನ ಚಿನ್ನದ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಏರಿಕೆ
ಡಿಸೆಂಬರ್ 15ರವರೆಗೆ ಮದುವೆಗಳ ಅಬ್ಬರ ಇರಲಿದ್ದು, ಈ ನಡುವೆ ಚಿನ್ನದ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ಡಬಲ್ ಖುಷಿ ನೀಡಿದೆ. ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನದ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಶೇಕಡಾ 20ರಿಂದ 25ರಷ್ಟು ಹೆಚ್ಚಾಗಿದೆ ಎಂಬುದು ತಿಳಿದುಬಂದಿದೆ.
2026ರಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಚಿನ್ನದ ಬೆಲೆ ತಲುಪಿರುವ ಹಿನ್ನೆಲೆಯಲ್ಲಿ ಮದುವೆಗಾಗಿ ಆಭರಣ ಖರೀದಿಸುವುದರ ಜೊತೆಗೆ, ಹೂಡಿಕೆಯ ಉದ್ದೇಶದಿಂದಲೂ ಜನರು ಚಿನ್ನ ಖರೀದಿಸಲು ಮುಂದಾಗಿದ್ದಾರೆ. ಬೆಲೆ ಇಳಿಕೆಯ ಲಾಭ ಪಡೆಯಲು ಗ್ರಾಹಕರು ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ಚಿನ್ನದ ಬೆಲೆ ಕಡಿಮೆಯಾಗಿರುವುದರಿಂದ ಖರೀದಿಗೆ ಮುಂದಾಗಿರುವುದಾಗಿ ಗ್ರಾಹಕರೂ ಸಂತಸ ವ್ಯಕ್ತಪಡಿಸಿದ್ದಾರೆ.
ಚಿನ್ನ ಖರೀದಿಸುವ ಮುನ್ನ ಎಚ್ಚರಿಕೆ: ಗೋಲ್ಡ್ ಅಸೋಸಿಯೇಷನ್ ಸೂಚನೆ
ಚಿನ್ನದ ಬೆಲೆ ಇಳಿಕೆಯಿಂದ ಖರೀದಿ ಚಟುವಟಿಕೆ ಹೆಚ್ಚಾಗಿರುವ ಬೆನ್ನಲ್ಲೇ, ಗ್ರಾಹಕರು ಆಭರಣ ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಸೂಚಿಸಿದೆ. ಚಿನ್ನದ ತೂಕ ಹೆಚ್ಚಿಸುವ ಉದ್ದೇಶದಿಂದ ರೀನಿಯಂ, ಇರಿಡಿಯಂನಂತಹ ಲೋಹಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಗೆ ಜಿಎಸ್‌ಟಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಚಿನ್ನ ಖರೀದಿಸುವ ಮುನ್ನ ಹಾಲ್‌ಮಾರ್ಕ್ ಜೊತೆಗೆ HUID ಕೋಡ್ ಪರಿಶೀಲಿಸುವುದು ಮುಖ್ಯ. ಆಭರಣದ ತಯಾರಕರು, ಮಾರಾಟಗಾರರು ಮತ್ತು ಹಾಲ್‌ಮಾರ್ಕ್‌ಗೆ ಸಂಬಂಧಿಸಿದ ವಿವರಗಳನ್ನು ಗ್ರಾಹಕರು ಖಚಿತಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಿಲ್ ಇಲ್ಲದೆ ಚಿನ್ನ ಖರೀದಿಸಬಾರದು. ಜಿಎಸ್‌ಟಿ ಪಾವತಿಸಿದರೂ ಅಧಿಕೃತ ಬಿಲ್ ಪಡೆಯುವುದು ಅಗತ್ಯ ಎಂದು ಅಸೋಸಿಯೇಷನ್ ಸಲಹೆ ನೀಡಿದೆ.
ಬಿಲ್‌ನಲ್ಲಿ ನಮೂದಿಸಿರುವ ಚಿನ್ನದ ತೂಕ ಮತ್ತು ಆಭರಣದ ನೈಜ ತೂಕವನ್ನು ತಾಳೆ ಮಾಡಬೇಕು. ಅದೇ ರೀತಿ, ಖರೀದಿಸುತ್ತಿರುವ ಆಭರಣ 18 ಕ್ಯಾರೆಟ್ ಅಥವಾ 22 ಕ್ಯಾರೆಟ್ ಎಂಬ ಶುದ್ಧತೆಯ ವಿವರ ಬಿಲ್‌ನಲ್ಲಿ ಸರಿಯಾಗಿ ನಮೂದಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಾಧ್ಯವಾದರೆ ಕ್ಯಾರೆಟ್ ಮೀಟರ್ ಮೂಲಕ ಚಿನ್ನದ ಶುದ್ಧತೆಯನ್ನು ಪರೀಕ್ಷಿಸಿದ ಬಳಿಕವೇ ಖರೀದಿಸುವಂತೆ ಗ್ರಾಹಕರಿಗೆ ಸೂಚಿಸಲಾಗಿದೆ.
