ನಕಲಿ ಔಷಧಿ ಜಾಲದ ಕಿಂಗ್‌ಪಿನ್ ಪ್ರಶಾಂತ್ ಬಂಧಿಸಿದ ದೆಹಲಿ ಪೊಲೀಸರು

ನಕಲಿ ಔಷಧಿ ಜಾಲದ ಕಿಂಗ್‌ಪಿನ್ ಪ್ರಶಾಂತ್ ಬಂಧಿಸಿದ ದೆಹಲಿ ಪೊಲೀಸರು

ನಕಲಿ ಔಷಧಿ ಜಾಲದ ಕಿಂಗ್‌ಪಿನ್ ಪ್ರಶಾಂತ್ ಬಾಬುನನ್ನು ದೆಹಲಿ ಪೊಲೀಸರು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದಿದ್ದಾರೆ. 2 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದೆ. ಮತ್ತೊಂದೆಡೆ, ಉಚಿತವಾಗಿ ಸಿಗಬೇಕಿದ್ದ ಕ್ಯಾನ್ಸರ್ ಇಂಜೆಕ್ಷನ್‌ಗಳನ್ನೂ ರೋಗಿಗಳಿಗೆ ಹಣಕ್ಕೆ ಮಾರಾಟ ಮಾಡಿರುವ ಆರೋಪ ಬೆಳಕಿಗೆ ಬಂದಿದೆ. ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ 15 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಔಷಧ ಪೂರೈಕೆಯಾಗಿರುವ ಶಂಕೆಯಿದೆ.

ನಕಲಿ ಔಷಧಿ ಜಾಲದ ಕಿಂಗ್‌ಪಿನ್ ಪ್ರಶಾಂತ್ ಬಾಬುನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಚಿತ ಕ್ಯಾನ್ಸರ್ ಇಂಜೆಕ್ಷನ್‌ಗಳನ್ನೂ ರೋಗಿಗಳಿಗೆ ಹಣಕ್ಕೆ ಮಾರಾಟ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಆರು ರಾಜ್ಯಗಳಲ್ಲಿ 15 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಔಷಧ ಪೂರೈಕೆ ಮಾಡಿರುವ ಆರೋಪವಿದೆ.

ನಕಲಿ ಔಷಧಿ ದಂಧೆ ನಡೆಸುತ್ತಿದ್ದ ಜಾಲದ ಕಿಂಗ್‌ಪಿನ್ ಪ್ರಶಾಂತ್ ಬಾಬುನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಕರ್ನಾಟಕದ ವಿಶೇಷ ತನಿಖಾ ತಂಡ (ಎಸ್​ಐಟಿ) ಪ್ರಶಾಂತ್‌ನನ್ನು ಬಂಧಿಸಿತ್ತು. ಇದೀಗ ದೆಹಲಿಯ ಮೋತಿಬಾಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಾಡಿ ವಾರಂಟ್ ಮೂಲಕ ಆತನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ, ತನಿಖೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಸಿಗಬೇಕಿದ್ದ ಇಂಜೆಕ್ಷನ್‌ಗಳನ್ನೂ ಹಣಕ್ಕೆ ಮಾರಾಟ ಮಾಡಿರುವ ಅಂಶ ಬೆಳಕಿಗೆ ಬಂದಿದೆ.

ಉಚಿತ ಕ್ಯಾನ್ಸರ್ ಇಂಜೆಕ್ಷನ್‌ಗಳನ್ನೂ ದುಬಾರಿ ಬೆಲೆಗೆ ಮಾರಾಟ!
ತನಿಖೆಯ ವೇಳೆ ನಕಲಿ ಔಷಧಿ ಜಾಲದ ವಂಚನೆಯ ವಿಧಾನ ಬಯಲಾಗಿದೆ. ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಎರಡು ಕ್ಯಾನ್ಸರ್ ಇಂಜೆಕ್ಷನ್‌ಗಳನ್ನು ಖರೀದಿಸಿದರೆ ಕಂಪನಿಯು ಒಂದು ಇಂಜೆಕ್ಷನ್ ಉಚಿತವಾಗಿ ನೀಡುತ್ತಿತ್ತು. ಆದರೆ ಈ ಮಾಹಿತಿಯನ್ನು ರೋಗಿಗಳಿಗೆ ತಿಳಿಸದೆ ಕಿಂಗ್‌ಪಿನ್ ಪ್ರಶಾಂತ್ ಬಾಬು ಉಚಿತವಾಗಿ ಸಿಗುತ್ತಿದ್ದ ಇಂಜೆಕ್ಷನ್‌ಗಳನ್ನೂ ಹಣ ಪಡೆದು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಅಲ್ಲದೆ, ಇಂಜೆಕ್ಷನ್ ಬಳಕೆ ಮಾಡಿದ ಬಳಿಕ ರೋಗಿ ಮೃತಪಟ್ಟರೆ ಉಳಿದ ಇಂಜೆಕ್ಷನ್‌ಗಳನ್ನು ವಾಪಸ್ ಪಡೆದು, ಬೇರೆಯವರಿಗೆ ಮೂಲ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದ ಆರೋಪವೂ ಕೇಳಿಬಂದಿದೆ. ಈ ಮೂಲಕ ಕ್ಯಾನ್ಸರ್ ರೋಗಿಗಳ ಸಂಕಷ್ಟವನ್ನೇ ದಂಧೆಗೆ ಬಳಸಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ದಕ್ಷಿಣ ಭಾರತದ ಆರು ರಾಜ್ಯಗಳಲ್ಲಿ ಜಾಲ ವಿಸ್ತರಣೆ!
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಒಟ್ಟು ಆರು ರಾಜ್ಯಗಳಲ್ಲಿ ಈ ಔಷಧಿ ಜಾಲ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ. ಹತ್ತಾರು ಖಾಸಗಿ ಆಸ್ಪತ್ರೆಗಳು ಹಾಗೂ ನೂರಾರು ಔಷಧ ಮಳಿಗೆಗಳ ಮೂಲಕ 15 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಔಷಧ ಪೂರೈಕೆಯಾಗಿರುವ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಈ ಜಾಲದ ಮೂಲಕ ಎಷ್ಟು ಇಂಜೆಕ್ಷನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಬಗ್ಗೆ SIT ತನಿಖೆ ನಡೆಸುತ್ತಿದೆ.

2 ಕೋಟಿ ರೂ. ವಂಚನೆ ಪ್ರಕರಣದಲ್ಲಿ ದೆಹಲಿ ಪೊಲೀಸರ ವಿಚಾರಣೆ
ಇನ್ನೊಂದೆಡೆ, ಔಷಧಿ ನೀಡುವುದಾಗಿ ನಂಬಿಸಿ 2 ಕೋಟಿ ರೂಪಾಯಿ ವಂಚಿಸಿದ ಆರೋಪದಡಿ ದೆಹಲಿಯ ಮೋತಿಬಾಗ್ ಠಾಣೆಯಲ್ಲಿ ಪ್ರಶಾಂತ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು, ಇದೀಗ ದೆಹಲಿ ನ್ಯಾಯಾಲಯದ ಅನುಮತಿ ಪಡೆದು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದಿದ್ದಾರೆ. ಸದ್ಯ 2 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದ್ದು, ನಕಲಿ ಔಷಧಿ ದಂಧೆಯ ಸಂಪೂರ್ಣ ಜಾಲದ ಬಗ್ಗೆ ತನಿಖಾ ತಂಡಗಳು ಮಾಹಿತಿ ಕಲೆಹಾಕುತ್ತಿವೆ.

₹5 ಕೋಟಿ ಮೌಲ್ಯದ ನಕಲಿ ಔಷಧಿ ಜಾಲ ಬಯಲಾಗಿದ್ದು ಹೇಗೆ?
2026ರ ಆಗಸ್ಟ್ 18ರಂದು ಬೆಂಗಳೂರಿನ ಹೊರವಲಯದ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟದ ಜಾಲ ಪತ್ತೆಯಾಗಿತ್ತು.

ಬಿಡದಿ ಸಮೀಪದ ಪ್ರದೇಶಗಳಲ್ಲಿ ನಡೆದ ದಾಳಿಯ ವೇಳೆ ಸುಮಾರು ₹5 ಕೋಟಿ ಮೌಲ್ಯದ ನಕಲಿ ಮತ್ತು ಅವಧಿ ಮೀರಿದ ಔಷಧಿಗಳು, ಇಂಜೆಕ್ಷನ್ ತುಂಬುವ ಉಪಕರಣಗಳು, ನಕಲಿ ಲೇಬಲ್‌ಗಳು ಹಾಗೂ ಬಿಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಕಡಿಮೆ ಬೆಲೆಯ ಔಷಧಿಗಳನ್ನು ದುಬಾರಿ ವಿದೇಶಿ ಕಂಪನಿಗಳ ಔಷಧಿಗಳಂತೆ ಮರುಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ತನಿಖಾಧಿಕಾರಿಗಳ ಶಂಕೆಯಾಗಿತ್ತು. ಕ್ಯಾನ್ಸರ್ ಚಿಕಿತ್ಸೆ ಹಾಗೂ ಐಸಿಯುಗಳಲ್ಲಿ ಬಳಸುವ ಪ್ರಮುಖ ಔಷಧಿಗಳನ್ನೂ ನಕಲಿ ಮಾಡಿರುವ ಅನುಮಾನ ವ್ಯಕ್ತವಾಗಿತ್ತು

90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ನಕಲಿ ಔಷಧಿ ಪೂರೈಕೆ ಶಂಕೆ!
ಈ ಪ್ರಕರಣದಲ್ಲಿ ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಬೆಂಗಳೂರಿನ 90ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ನಕಲಿ ಔಷಧಿಗಳನ್ನು ಪೂರೈಸಿರುವ ಸಾಧ್ಯತೆಯ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸಿರುವುದು.

ನಕಲಿ ಔಷಧಿಗಳನ್ನು ಅಸಲಿ ಔಷಧಿಗಳೊಂದಿಗೆ ಬೆರೆಸಿ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪವೂ ತನಿಖೆಯಲ್ಲಿ ಹೊರಬಂದಿದೆ.

ಕೆಲವು ಔಷಧಿಗಳ ಮೇಲೆ ನಕಲಿ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲಾಗಿತ್ತು. ಇದರಿಂದ ಖರೀದಿದಾರರಿಗೆ ಅಸಲಿ ಔಷಧಿಗಳೆಂಬ ಭಾವನೆ ಮೂಡಿಸುವ ಪ್ರಯತ್ನ ನಡೆದಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ

Leave a Reply

Your email address will not be published. Required fields are marked *