ಬೆಂಗಳೂರಿಗೆ ಬರಬೇಕಿದ್ದ 30 ಪ್ರಯಾಣಿಕರಿಗೆ ನಡುರಾತ್ರಿ ಸಂಕಷ್ಟ! ಬಸ್ ಕೆಟ್ಟು ನಿಂತರೂ ಕ್ಯಾರೇ ಎನ್ನದ ಟ್ರಾವೆಲ್ಸ್?

ಬೆಂಗಳೂರಿಗೆ ಬರಬೇಕಿದ್ದ 30 ಪ್ರಯಾಣಿಕರಿಗೆ ನಡುರಾತ್ರಿ ಸಂಕಷ್ಟ! ಬಸ್ ಕೆಟ್ಟು ನಿಂತರೂ ಕ್ಯಾರೇ ಎನ್ನದ ಟ್ರಾವೆಲ್ಸ್?

ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ರು.. ಹಣವನ್ನೂ ಪಾವತಿಸಿದ್ರು.. ರಾತ್ರಿ 9:30ಕ್ಕೆ ಬೆಂಗಳೂರು ತಲುಪಬೇಕಿದ್ದ ಪ್ರಯಾಣಿಕರಿಗೆ ನಡುರಾತ್ರಿಯಲ್ಲಿ ದೊಡ್ಡ ಶಾಕ್ ಕಾದಿತ್ತು! ಮಹಿಳೆಯರು, ಮಕ್ಕಳು ಸೇರಿದಂತೆ ಬರೋಬ್ಬರಿ 30 ಮಂದಿ ಪ್ರಯಾಣಿಕರು ನಿರ್ಜನ ಪ್ರದೇಶದಲ್ಲಿ ಗಂಟೆಗಟ್ಟಲೆ ಪರದಾಡುವಂತಾಗಿದೆ. ಅಷ್ಟಕ್ಕೂ ಬಸ್‌ನಲ್ಲಿ ನಡೆದಿದ್ದೇನು? ಟಿಕೆಟ್ ಬುಕ್ ಮಾಡಿದ್ದು ಒಂದು ಟ್ರಾವೆಲ್ಸ್‌ನಲ್ಲಿ.. ಆದ್ರೆ ಪ್ರಯಾಣಕ್ಕೆ ಬಂದಿದ್ದು ಮತ್ತೊಂದು ಬಸ್! ಈ ಗೊಂದಲದ ಹಿಂದಿನ ಕಥೆಯೇನು?

**ನಡುರಾತ್ರಿಯಲ್ಲಿ ನಡು ರಸ್ತೆಯಲ್ಲೇ ನಿಂತುಹೋಯ್ತು ಬಸ್!**

ಮಂತ್ರಾಲಯದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ದಿಢೀರ್ ಕೆಟ್ಟು ನಿಂತಿದೆ.

ರಾತ್ರಿ 9:30ರ ವೇಳೆಗೆ ಬೆಂಗಳೂರು ತಲುಪಬೇಕಿದ್ದ ಬಸ್ ಮಾರ್ಗಮಧ್ಯೆಯೇ ನಿಂತಿದ್ದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಸ್‌ನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 30 ಮಂದಿ ಪ್ರಯಾಣಿಕರಿದ್ದರು. ರಾತ್ರಿ ವೇಳೆ ನಿರ್ಜನ ಪ್ರದೇಶದಲ್ಲಿ ಬಸ್ ನಿಂತಿದ್ದರಿಂದ ಪ್ರಯಾಣಿಕರು ಆತಂಕಗೊಂಡಿದ್ದಾರೆ.

**ಟಿಕೆಟ್ ಬುಕ್ ಮಾಡಿದ್ದು ಒಂದು ಬಸ್‌ಗೆ.. ಬಂದಿದ್ದು ಮತ್ತೊಂದು!**

ಈ ಪ್ರಕರಣದಲ್ಲಿ ಮತ್ತೊಂದು ವಿಚಾರ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಯಾಣಿಕರು ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಕುಕ್ಕೇಶ್ರೀ ಟ್ರಾವೆಲ್ಸ್ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದರು.

ಆದ್ರೆ ಪ್ರಯಾಣಕ್ಕೆ ಬಂದಿದ್ದು ಸ್ಟ್ರೀಮ್‌ಲೈನ್ ಟೂರ್ಸ್ ಅಂಡ್ ಟ್ರಾವೆಲ್ಸ್‌ಗೆ ಸೇರಿದ ಬಸ್!

ಆ ಬಸ್‌ನ ನೋಂದಣಿ ಸಂಖ್ಯೆ NL 01 B 3358 ಎಂದು ತಿಳಿದುಬಂದಿದೆ.

ತಾವು ಟಿಕೆಟ್ ಬುಕ್ ಮಾಡಿಕೊಂಡಿದ್ದ ಟ್ರಾವೆಲ್ಸ್ ಹೆಸರಿಗೂ ಪ್ರಯಾಣಕ್ಕೆ ಬಂದ ಬಸ್‌ಗೂ ವ್ಯತ್ಯಾಸವಿದ್ದಿದ್ದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

**ಬಸ್ ಕೆಟ್ಟರೂ ಪರ್ಯಾಯ ವ್ಯವಸ್ಥೆಯೇ ಇಲ್ಲ!**

ಬಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ಚಾಲಕ ವಾಹನ ನಿಲ್ಲಿಸಿದ್ದಾನೆ ಎನ್ನಲಾಗಿದೆ.

ಆದ್ರೆ ಬಸ್ ಕೆಟ್ಟು ನಿಂತ ಬಳಿಕವೂ ಟ್ರಾವೆಲ್ಸ್ ಸಂಸ್ಥೆಯವರು ಪರ್ಯಾಯ ವಾಹನದ ವ್ಯವಸ್ಥೆ ಮಾಡಿಕೊಟ್ಟಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಮಹಿಳೆಯರು, ಮಕ್ಕಳು ರಾತ್ರಿ ವೇಳೆ ರಸ್ತೆಯಲ್ಲೇ ಕಾಯುವಂತಾಗಿದ್ದು, ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

**ರಾತ್ರಿ 2 ಗಂಟೆಗೆ ಪ್ರಯಾಣಿಕರೇ ಮಾಡಿಕೊಂಡ್ರು ವ್ಯವಸ್ಥೆ!**

ಗಂಟೆಗಟ್ಟಲೆ ಕಾದರೂ ಪರ್ಯಾಯ ಬಸ್ ಬರದ ಹಿನ್ನೆಲೆಯಲ್ಲಿ ಪ್ರಯಾಣಿಕರೇ ಮುಂದಾಗಿ ಕ್ಯಾಬ್ ಬುಕ್ ಮಾಡಿಕೊಂಡಿದ್ದಾರೆ.

ರಾತ್ರಿ ಸುಮಾರು 2 ಗಂಟೆಯ ವೇಳೆಗೆ ತಮ್ಮದೇ ವ್ಯವಸ್ಥೆಯಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.

ಟಿಕೆಟ್‌ಗೆ ಹಣ ಪಾವತಿಸಿದ್ದರೂ ನಿಗದಿತ ಸ್ಥಳಕ್ಕೆ ತಲುಪಿಸುವ ಜವಾಬ್ದಾರಿಯನ್ನು ಟ್ರಾವೆಲ್ಸ್ ಸಂಸ್ಥೆಗಳು ಸರಿಯಾಗಿ ನಿರ್ವಹಿಸಿಲ್ಲ ಎಂಬುದು ಪ್ರಯಾಣಿಕರ ಆರೋಪ.

**ಟ್ರಾವೆಲ್ಸ್ ವಿರುದ್ಧ ಪ್ರಯಾಣಿಕರ ಆಕ್ರೋಶ!**

ಪ್ರಯಾಣಿಕರಾದ ಶೃತಿ, ಸುಮತಿ, ರಾಜು ಮತ್ತು ಉಬೇದ್ ಅವರು ಬಸ್ ಚಾಲಕ ಹಾಗೂ ಮಾಲೀಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಕ್ಕೇಶ್ರೀ ಟ್ರಾವೆಲ್ಸ್ ಮತ್ತು ಸ್ಟ್ರೀಮ್‌ಲೈನ್ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಗಳ ಸೇವೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

**ಟಿಕೆಟ್ ಹಣ ಪಡೆದರೆ ಸಾಕಾ? ಪ್ರಯಾಣಿಕರ ಸುರಕ್ಷತೆ ಬೇಡ್ವಾ?**

ಖಾಸಗಿ ಬಸ್‌ಗಳಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಬಹುದು. ಆದ್ರೆ ಅಂತಹ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಎಷ್ಟು ಮುಖ್ಯ ಎಂಬ ಪ್ರಶ್ನೆಯನ್ನು ಈ ಘಟನೆ ಮುನ್ನೆಲೆಗೆ ತಂದಿದೆ.

ಅದರಲ್ಲೂ ಮಹಿಳೆಯರು ಮತ್ತು ಮಕ್ಕಳಿರುವ ಬಸ್ ನಡುರಾತ್ರಿಯಲ್ಲಿ ಕೆಟ್ಟು ನಿಂತಾಗ ತಕ್ಷಣ ನೆರವು ಸಿಗದಿದ್ದರೆ ಪ್ರಯಾಣಿಕರ ಪರಿಸ್ಥಿತಿ ಏನಾಗಬಹುದು?

ಒಟ್ಟಿನಲ್ಲಿ ಮಂತ್ರಾಲಯದಿಂದ ಬೆಂಗಳೂರಿಗೆ ಹೊರಟಿದ್ದ 30 ಮಂದಿ ಪ್ರಯಾಣಿಕರು ಎದುರಿಸಿದ ಸಂಕಷ್ಟ ಇದೀಗ ಖಾಸಗಿ ಬಸ್‌ಗಳ ಸೇವೆ ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Leave a Reply

Your email address will not be published. Required fields are marked *