No Ads

ಭಾರತದ ದಾಳಿಯ ಭೀತಿ, ಭದ್ರತೆಯ ಕೊರತೆ; ರಾಜೀನಾಮೆ ನೀಡುತ್ತಿರುವ ಪಾಕ್ ಸೈನಿಕರು?

India 2025-04-28 16:16:17 120
post

ಇಸ್ಲಾಮಾಬಾದ್ : ಕಾಶ್ಮೀರದ ಪಹಲ್ಗಾಮ್ ನಲ್ಲಿನ ಭಯೋತ್ಪಾದಕ ಕೃತ್ಯದ ನಂತರ, ಪಾಕಿಸ್ತಾನ ಒಂದರ ಮೇಲೊಂದು ಸಮಸ್ಯೆಗಳನ್ನು ಎದುರಿಸುತ್ತಿದೆ. ಈಗಾಗಲೇ, ಭಾರತ ಸಿಂಧೂ ನದಿ ನೀರು ಹಂಚಿಕೆಯನ್ನು ಬಂದ್ ಮಾಡಿದೆ. ಇನ್ನೊಂದು ಕಡೆ, ಪಾಕಿಸ್ತಾನಿಗಳನ್ನು ಭಾರತ ಬಿಟ್ಟು ತೊಲಗುವಂತೆ ಸೂಚನೆ ನೀಡಿದೆ.

ಈ ಮಧ್ಯೆ, ಪಾಕಿಸ್ತಾನದ ಸೇನೆ ಮತ್ತೊಂದು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಸೈನಿಕರು ತಮ್ಮ ಮಿಲಿಟರಿ ಸೇವೆಗೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಒಂದು ಕಾರಣ, ಭಾರತದ ವಿರುದ್ದ ಎದುರಾಗಿರುವ ಯುದ್ದದ ಭೀತಿ.

ಒಂದು ಕಡೆ ಆರ್ಥಿಕ ಸಂಕಷ್ಟ, ಸರಿಯಾಗಿ ಬಿಡುಗಡೆಯಾಗದ ಸಂಬಳ, ಸೈನಿಕರ ಸಾಲುಸಾಲು ಸಾವು, ಭದ್ರತೆಯ ಕೊರತೆಯಿಂದಾಗಿ ಸೈನಿಕರು ರಾಜೀನಾಮೆಯನ್ನು ನೀಡುತ್ತಿದ್ದಾರೆ. ಕೆಲಸಕ್ಕೆ ರಾಜೀನಾಮೆ ನೀಡುತ್ತಿರುವ ಪಾಕ್ ಸೈನಿಕರು, ಸೌದಿ ಅರೇಬಿಯಾ, ಕುವೈತ್ ಮುಂತಾದ ಕಡೆ ಕೆಲಸ ಅರಸಿಕೊಂಡು ಹೋಗುತ್ತಿದ್ದಾರೆ.

ಪಾಕ್ ಸೈನಿಕರನ್ನು ಗುರಿಯಾಗಿಸಿಕೊಂಡು ಬಿಎಲ್ಎ ( Balochistan Liberation Army ) ನಡೆಸುತ್ತಿರುವ ದಾಳಿಯು, ಪಾಕಿಸ್ತಾನದ ಮಿಲಿಟರಿ ಪಡೆಗಳಿಗೆ ಸದ್ಯ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಬಲೂಚಿಸ್ತಾನ ಮತ್ತು ಖೈಬರ್ ಪಖಂಖ್ವಾದ ಭಾಗದಲ್ಲಿ ದಾಳಿಗಳು ಹೆಚ್ಚಾಗುತ್ತಿದೆ.

ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ ಕಾಬೂಲ್ ಫಂಟ್ ಲೈನ್ ಸುದ್ದಿಸಂಸ್ಥೆ ವರದಿಯನ್ನು ಮಾಡಿದೆ. ಅದರ ಪ್ರಕಾರ, ಇದುವರೆಗೆ ಸುಮಾರು 2,500 ಸೈನಿಕರು ಒಂದು ವಾರದ ಅವಧಿಯಲ್ಲಿ ಕೆಲಸವನ್ನು ತೊರೆದಿದ್ದಾರೆ. ಬಂಡುಕೋರರ ಗುಂಪು, ಪಾಕಿಸ್ತಾನಿ ಸೈನಿಕರ ಮೇಲೆ ದಾಳಿಯನ್ನು ಮಾಡುತ್ತಿದ್ದಾರೆ. ಇದರಿಂದಾಗಿ, ಸಾಕಷ್ಟು ಸಾವುನೋವು ಎದುರಾಗುತ್ತಿದೆ.

ಪ್ರಾಣವನ್ನು ಅಪಾಯಕ್ಕೆ ದೂಡುವ ಬದಲು, ಆರ್ಥಿಕವಾಗಿ ಬಲಿಷ್ಠವಾಗುವ ಆಯ್ಕೆಯನ್ನು ಮಾಡಿಕೊಂಡಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಸರ್ಕಾರ ಹಿನ್ನಡೆಯನ್ನು ಅನುಭವಿಸುತ್ತಿದೆ. ಸದ್ಯ, ಪಾಕಿಸ್ತಾನವು ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಉಗ್ರ ಕೃತ್ಯದ ನಂತರ ಭಾರತವು ಯಾವುದೇ ಸಮಯದಲ್ಲಿ ದಾಳಿಯನ್ನು ನಡೆಸಬಹುದು ಎನ್ನುವ ಭೀತಿಯೂ, ಸೈನಿಕರ ಮಾಸ್ ರಾಜೀನಾಮೆಗೆ ಕಾರಣ ಎಂದೂ ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿನ ಮಿಲಿಟರಿ ಪಡೆಗಳಿಗೆ, ಭದ್ರತೆ ಇಲ್ಲದಾಗಿರುವುದು, ಸೈನಿಕರ ಧೈರ್ಯವನ್ನು ಕುಗ್ಗಿಸಿದೆ.

ಈ ನಡುವೆ, ಪಾಕಿಸ್ತಾನ ಮಿಲಿಟರಿಯ ಆಂತರಿಕ ಮೆಮೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ, ಸೇನೆಯ ನಿಯಮಗಳನ್ನು ಉಲ್ಲಂಘಿಸಿದರೆ ಪಾಕ್ ಕಾಯಿದೆಯಡಿ ಕ್ರಮ ಜರುಗಿಸಲಾಗುವುದು ಎನ್ನುವ ಎಚ್ಚರಿಕೆಯನ್ನು ನೀಡಲಾಗಿದೆ.

ಕಳೆದ ತಿಂಗಳು (ಮಾ. 16) ಪಾಕ್ ಸೈನಿಕರನ್ನು ಗುರಿಯಾಗಿಸಿಕೊಂಡು, ಬಿಎಲ್ಎ ಬಂಡುಕೋರರು ಆತ್ಮಹತ್ಯಾ ದಾಳಿಯನ್ನು ನಡೆಸಿದ್ದರು. ಇದರಲ್ಲಿ ಸುಮಾರು 90 ಸೈನಿಕರು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಬಲೂಚಿಸ್ತಾನದಲ್ಲಿ ರೈಲನ್ನು ಅಪಹರಿಸಲಾಗಿತ್ತು, ಇದಾದ ನಂತರ ಮಿಲಿಟರಿ ಬೆಂಗಾವಲು ಪಡೆಯ ಮೇಲೂ ದಾಳಿಯಾಗಿತ್ತು.

ಪಾಕಿಸ್ತಾನಿ ಸರ್ಕಾರವು ಸೈನಿಕರ ಈ ಸಮಸ್ಯೆಗಳನ್ನು ಆದ್ಯತೆಯಿಂದ ಬಗೆಹರಿಸಬೇಕು. ಇದನ್ನು ಕಡೆಗಣಿಸಿದರೆ ಇಡೀ ದೇಶದ ಭದ್ರತೆಗೆ ಸವಾಲಾಗಬಹುದು. ಸದ್ಯದ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಇದು ಪಾಕಿಸ್ತಾನಕ್ಕೆ ದೊಡ್ಡ ಮಟ್ಟದ ಹೊಡೆತವನ್ನು ಕೊಡಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

" ಪಾಕಿಸ್ತಾನಿ ಸೇನೆಯಲ್ಲಿ ದೊಡ್ಡ ಪ್ರಮಾಣದ ದಂಗೆಯ ಪರಿಸ್ಥಿತಿ ಉದ್ಭವಿಸಿದೆ. ಸೇನಾ ಕಮಾಂಡರ್‌ ಗಳಿಂದ ಆಗಾಗ್ಗೆ ಬದಲಾಗುತ್ತಿರುವ ಆದೇಶಗಳು, ಮಾನಸಿಕ ಆಯಾಸ ಮತ್ತು ಕುಟುಂಬದ ಒತ್ತಡದಿಂದಾಗಿ, 100 ಕ್ಕೂ ಹೆಚ್ಚು ಸೇನಾ ಅಧಿಕಾರಿಗಳು ಮತ್ತು 500 ಕ್ಕೂ ಹೆಚ್ಚು ಸೈನಿಕರು ಇದುವರೆಗೆ ರಾಜೀನಾಮೆ ನೀಡಿದ್ದಾರೆ. ಈ ಸಾಮೂಹಿಕ ರಾಜೀನಾಮೆಯು ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಭದ್ರತಾ ವ್ಯವಸ್ಥೆಯನ್ನು ತೀವ್ರ ಬಿಕ್ಕಟ್ಟಿಗೆ ಸಿಲುಕಿಸಿದೆ " ಎಂದು 11 ನೇ ದಳದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಮರ್ ಅಹ್ಮದ್ ಬುಖಾರಿ ಅವರು ಸೇನಾ ಪ್ರಧಾನ ಕಚೇರಿಗೆ ಪತ್ರ ಬರೆದು ಈ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner