ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರ ವಿರುದ್ಧವೇ ಗರಂ ಆದ ಘಟನೆ ನಡೆಯಿತು. ಸಿಟ್ಟಾದ ಸಿಎಂ ಪೊಲೀಸ್ ಅಧಿಕಾರಿಗೆ ಹೇ ಎಂದು ಗದರಿ ಕೈ ಎತ್ತಿ ಹೊಡೆಯಲು ಮುಂದಾದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಸೋಮವಾರ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿ ಹಾಗೂ ದೇಶ ವಿರೋಧಿ ಆಡಳಿತ ವಿರೋಧಿ ಖಂಡನಾ ಸಮಾವೇಶದಲ್ಲಿ ಈ ಘಟನೆ ನಡೆಯಿತು. ಕೇಂದ್ರ ಸರ್ಕಾರದ ಬೆಲೆ ಏರಿಕೆ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಆಯೋಜಿಸಿರುವ ಜನಾಕ್ರೋಶ ಸಭೆಯಲ್ಲಿ ಸಿಎಂ ಭಾಷಣ ಮಾಡುವಾಗ, ಬಿಜೆಪಿಯ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ಮಾಡಿ ಅಡ್ಡಿಪಡಿಸಲಾಯಿತು. ಜತೆಗೆ ಬಿಜೆಪಿ ಕಾರ್ಯಕರ್ತರು ವೇದಿಕೆ ಕೆಳಗೆ ಗಲಾಟೆ ಮಾಡುತ್ತಿದ್ದರು. ಜತೆಗೆ ಕಾರ್ಯಕರ್ತರು ಓಡಾಟ ಹೆಚ್ಚಿತ್ತು. ಈ ವೇಳೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ ಪೊಲೀಸರ ಮೇಲೆ ಗರಂ ಆದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, " ಆರ್‌ಎಸ್‌ಎಸ್ ಹಾಗೂ ಬಿಜೆಪಿಗರನ್ನು ನೋಡಿಕೊಳ್ಳಿ ಅಂತಾ ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದರೆ ಸಾಕು, ಇವರಿಗೆ ಬಾಲ ಬಿಚ್ಚದಂತೆ ಮಾಡ್ತಾರೆ. ಬಾಲ ಬಿಚ್ಚಲು ಸಾಧ್ಯವೇ ಇಲ್ಲ" ಎಂದು ಹೇಳಿದರು.
ಬಿಜೆಪಿಯವರಿಂದ ಶಾಂತಿ ಕದಡುವ, ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತದೆ. ಅವರ ಗೊಡ್ಡು ಬೆದರಿಕೆಗಳಿಗೆ ನಾವು ಹೆದರಲ್ಲ. ಸಾರ್ವಜನಿಕವಾಗಿ ಅವರನ್ನು ಎದುರಿಸುವ ಶಕ್ತಿ ನಮಗಿದೆ. ಈ ರೀತಿ ದುಷ್ಕೃತ್ಯ ಮಾಡುವವರಿಗೆ ಇಡೀ ಕಾಂಗ್ರೆಸ್ ನಿಂದ ಧಿಕ್ಕಾರ ಎಂದು ಸಿಎಂ ಕಿಡಿಕಾರಿದರು.
Log in to write reviews