ಮೇಲುಕೋಟೆಯಲ್ಲಿ ಕಂಗೊಳಿಸಿದ ರಾಜಮುಡಿ ಕಿರೀಟ! 400 ವರ್ಷಗಳ ಇತಿಹಾಸ, ವಜ್ರ-ರತ್ನಗಳ ವೈಭವ

ಮೇಲುಕೋಟೆಯಲ್ಲಿ ಕಂಗೊಳಿಸಿದ ರಾಜಮುಡಿ ಕಿರೀಟ! 400 ವರ್ಷಗಳ ಇತಿಹಾಸ, ವಜ್ರ-ರತ್ನಗಳ ವೈಭವ

ಮೈಸೂರು ಅರಸರ ಭಕ್ತಿಯ ಸಂಕೇತವಾದ ಐತಿಹಾಸಿಕ ರಾಜಮುಡಿ ಕಿರೀಟ ಧರಿಸಿ ಕಂಗೊಳಿಸಿದ ಮೇಲುಕೋಟೆ ಚಲುವನಾರಾಯಣಸ್ವಾಮಿ. ವಜ್ರ, ಪಚ್ಚೆ, ರತ್ನಗಳ ವೈಭವದ ದರ್ಶನಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು!

ಭಕ್ತರ ಗೋವಿಂದ ನಾಮಸ್ಮರಣೆ, ಮಂಗಳವಾದ್ಯಗಳ ನಾದ, ವಜ್ರ ಮತ್ತು ಅಮೂಲ್ಯ ರತ್ನಗಳಿಂದ ಕಂಗೊಳಿಸುವ ರಾಜಮುಡಿಯ ದಿವ್ಯದರ್ಶನ. ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಕಾರ್ತಿಕ ಮಾಸದ ರಾಜಮುಡಿ ಉತ್ಸವ ಅತ್ಯಂತ ವೈಭವದಿಂದ ನೆರವೇರಿದೆ. ಶ್ರೀ ಚಲುವನಾರಾಯಣಸ್ವಾಮಿಗೆ ಅಪರೂಪದ ವಜ್ರಖಚಿತ ರಾಜಮುಡಿ ಕಿರೀಟವನ್ನು ಧಾರಣೆ ಮಾಡಿ ನಡೆಸಿದ ಉತ್ಸವ ಭಕ್ತರ ಕಣ್ಮನ ಸೆಳೆದಿದೆ.

ರಾಜಮುಡಿಗೆ ವಿಜೃಂಭಣೆಯ ಚಾಲನೆ!
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ನವೆಂಬರ್ 17ರ ರಾತ್ರಿ ರಾಜಮುಡಿ ಕಿರೀಟಧಾರಣಾ ಮಹೋತ್ಸವ ನಡೆಯಿತು. ಕಾರ್ತಿಕ ಮಾಸದ ಒಂಬತ್ತು ದಿನಗಳ ಬ್ರಹ್ಮೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಮೈಸೂರು ಅರಸರು ಸಮರ್ಪಿಸಿದ್ದ ಐತಿಹಾಸಿಕ ರಾಜಮುಡಿ ಕಿರೀಟ, ಗಂಡಭೇರುಂಡ ಪದಕ, ಪದ್ಮಪೀಠ, ಶಂಖ ಮತ್ತು ಚಕ್ರ ಸೇರಿದಂತೆ ಅಪರೂಪದ ಆಭರಣಗಳಿಂದ ಸ್ವಾಮಿಯನ್ನು ಅಲಂಕರಿಸಲಾಗಿತ್ತು.

ರಾಜಮುಡಿ ಕಿರೀಟದ ಹಿಂದಿದೆ ನಾಲ್ಕು ಶತಮಾನಗಳ ಇತಿಹಾಸ
ಮೇಲುಕೋಟೆಯ ರಾಜಮುಡಿ ಕಿರೀಟಕ್ಕೂ ಮೈಸೂರು ಅರಸರಿಗೂ ಅವಿನಾಭಾವ ಸಂಬಂಧವಿದೆ. ಮೈಸೂರು ಸಂಸ್ಥಾನದ ಮೊದಲ ಅರಸರಲ್ಲಿ ಒಬ್ಬರಾದ ರಾಜ ಒಡೆಯರ್ ಅವರು ಶ್ರೀ ಚಲುವನಾರಾಯಣಸ್ವಾಮಿಯ ಪರಮ ಭಕ್ತರಾಗಿದ್ದರು. ಸ್ವಾಮಿಗೆ ಅಮೂಲ್ಯವಾದ ರತ್ನಖಚಿತ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದರು. ಅಂದಿನಿಂದ ಈ ಕಿರೀಟಕ್ಕೆ ರಾಜಮುಡಿ ಎಂಬ ಹೆಸರು ಬಂದಿದೆ. ಐತಿಹಾಸಿಕ ದಾಖಲೆಗಳಲ್ಲೂ ರಾಜ ಒಡೆಯರ್ ಅವರಿಂದ ರಾಜಮುಡಿ ಸಮರ್ಪಣೆಯಾಗಿರುವ ಉಲ್ಲೇಖವಿದೆ. ಇದು ಸುಮಾರು ನಾಲ್ಕು ಶತಮಾನಗಳ ಹಿಂದಿನ ರಾಜಪರಂಪರೆಯ ಕೊಡುಗೆಯಾಗಿದ್ದು, ಮೈಸೂರು ಅರಸರ ಭಕ್ತಿ ಮತ್ತು ಮೇಲುಕೋಟೆಯ ಧಾರ್ಮಿಕ ಪರಂಪರೆಗೆ ಸಾಕ್ಷಿಯಾಗಿದೆ. ರಾಜ ಒಡೆಯರ್ ಅವರ ಭಕ್ತಿಯ ನೆನಪಾಗಿ ಮೇಲುಕೋಟೆ ದೇವಸ್ಥಾನದ ಕಂಬದಲ್ಲೂ ಅವರ ಶಿಲ್ಪರೂಪದ ಚಿತ್ರಣವಿದೆ.

16 ಬಗೆಯ ಆಭರಣಗಳ ವಿಶೇಷ ಅಲಂಕಾರ
ರಾಜಮುಡಿ ಉತ್ಸವದ ವೇಳೆ ಚಲುವನಾರಾಯಣಸ್ವಾಮಿಗೆ ಸುಮಾರು 16 ಬಗೆಯ ಅಪರೂಪದ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗುತ್ತದೆ. ಗಂಡಭೇರುಂಡ ಪದಕ, ಹನ್ನೆರಡು ಆಳ್ವಾರುಗಳನ್ನು ಒಳಗೊಂಡ ಪದ್ಮಪೀಠ, ಶಂಖ, ಚಕ್ರ, ಗದೆ, ಶಿರಶ್ಚಕ್ರ, ಅಭಯಹಸ್ತ, ಪಾದಜೋಡಿ ಮತ್ತು ಕರ್ಣಕುಂಡಲ ಸೇರಿದಂತೆ ಹಲವು ವಿಶಿಷ್ಟ ಆಭರಣಗಳು ಈ ಅಲಂಕಾರದ ಭಾಗವಾಗಿವೆ. ವಜ್ರ, ಪಚ್ಚೆ, ರತ್ನ ಹಾಗೂ ಮುತ್ತುಗಳಿಂದ ಕೂಡಿದ ಆಭರಣಗಳು ಸ್ವಾಮಿಯ ದಿವ್ಯರೂಪಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ.

ಜಿಲ್ಲಾ ಖಜಾನೆಯಿಂದ ಬಿಗಿ ಭದ್ರತೆಯಲ್ಲಿ ಕಿರೀಟ
ಈ ರಾಜಮುಡಿ ಕಿರೀಟ ಸೇರಿದಂತೆ ದೇವಸ್ಥಾನದ ಅಮೂಲ್ಯ ಆಭರಣಗಳನ್ನು ಮಂಡ್ಯ ಜಿಲ್ಲಾ ಖಜಾನೆಯಲ್ಲಿ ಸುರಕ್ಷಿತವಾಗಿ ಇರಿಸಲಾಗುತ್ತದೆ. ಉತ್ಸವದ ಸಂದರ್ಭದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ತರಲಾಗುತ್ತದೆ. ಬಳಿಕ ದೇವಸ್ಥಾನದ ಸಂಪ್ರದಾಯದಂತೆ ಪರಿಶೀಲನೆ, ಪಾರ್ಕಾವಣೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಅರ್ಚಕರಿಗೆ ಹಸ್ತಾಂತರಿಸಲಾಗುತ್ತದೆ. ನಂತರ ಸ್ವಾಮಿಗೆ ಕಿರೀಟಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ರಾಜಮುಡಿ ಕಿರೀಟಧಾರಣೆಯ ಬಳಿಕ ಚಲುವನಾರಾಯಣಸ್ವಾಮಿಯನ್ನು ಭವ್ಯ ತೋಮಾಲೆ ಹಾಗೂ ಚಿನ್ನಾಭರಣಗಳಿಂದ ಅಲಂಕರಿಸಿ ಮಂಗಳವಾದ್ಯಗಳೊಂದಿಗೆ ಉತ್ಸವ ನಡೆಸಲಾಯಿತು. ಮೇಲುಕೋಟೆಯ ಚತುರ್ವೀಧಿಗಳಲ್ಲಿ ಸ್ವಾಮಿಯ ಉತ್ಸವ ಮೆರವಣಿಗೆ ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತರು ಗೋವಿಂದ ನಾಮಸ್ಮರಣೆ ಮಾಡಿ ದರ್ಶನ ಪಡೆದರು.

ರಾಜಮುಡಿ ಬೆಲೆ ಎಷ್ಟು? 10 ಕೋಟಿ ರೂ.ಗೂ ಅಧಿಕ ಎಂಬ ಅಂದಾಜು!
ರಾಜಮುಡಿ ಕಿರೀಟದ ವೈಭವವನ್ನು ನೋಡಿದವರು ಅದರ ಮೌಲ್ಯ ಎಷ್ಟಿರಬಹುದು ಎಂದು ಅಚ್ಚರಿಪಡುತ್ತಾರೆ. ಚಿನ್ನ, ವಜ್ರ, ಪಚ್ಚೆ ಮತ್ತು ಅಪರೂಪದ ರತ್ನಗಳಿಂದ ನಿರ್ಮಿತವಾಗಿರುವ ಈ ಕಿರೀಟಕ್ಕೆ ಧಾರ್ಮಿಕ ಹಾಗೂ ಐತಿಹಾಸಿಕವಾಗಿ ಅಪಾರ ಮಹತ್ವವಿದೆ. ಇದರ ಪ್ರಸ್ತುತ ಮೌಲ್ಯ 10 ಕೋಟಿ ರೂಪಾಯಿಗೂ ಅಧಿಕ ಇರಬಹುದು

Leave a Reply

Your email address will not be published. Required fields are marked *