ಪಣಜಿ: ಅರಣ್ಯದಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ವ್ಯಕ್ತಿಯ ಜೀವನದ ಮೂಲಕ ಸಂತೋಷ, ಮಾನವ ಘನತೆ ಮತ್ತು ಬದುಕಿನ ಸವಾಲುಗಳನ್ನು ಎದುರಿಸುವ ಸ್ಥೈರ್ಯವನ್ನು ಅನಾವರಣಗೊಳಿಸುವ ಕನ್ನಡ ಸಾಕ್ಷ್ಯಚಿತ್ರವೊಂದು 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಗಮನ ಸೆಳೆದಿದೆ.
ಪ್ರದೀಪ್ ಕುಮಾರ್ ಶೆಟ್ಟಿ ಕೆ. (ಡಾ. ಪ್ರದೀಪ್ ಕೆಂಚನೂರು) ನಿರ್ದೇಶನದ 20 ನಿಮಿಷಗಳ ‘ದಿ ಹಗ್ ಆಫ್ ಎಂಪ್ಟಿನೆಸ್’ ಸಾಕ್ಷ್ಯಚಿತ್ರವು ‘ಇಂಡಿಯನ್ ಪನೋರಮಾ’ ವಿಭಾಗದ ಕಥೇತರ ಚಿತ್ರಗಳ ವಿಭಾಗದಲ್ಲಿ ಪ್ರದರ್ಶನಗೊಂಡಿದೆ. ಈ ವರ್ಷದ ಆರಂಭದಲ್ಲಿ ನಡೆದ 19ನೇ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರವು ಫಿಪ್ರೆಸ್ಕಿ (FIPRESCI) ಅಂತರರಾಷ್ಟ್ರೀಯ ವಿಮರ್ಶಕರ ಪ್ರಶಸ್ತಿಯನ್ನೂ ಗೆದ್ದಿತ್ತು.
ಗೋವಾದಲ್ಲಿ ಪತ್ರಿಕಾ ಮಾಹಿತಿ ಬ್ಯೂರೋ (PIB) ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಶೆಟ್ಟಿ, ಸಾಕ್ಷ್ಯಚಿತ್ರವು ಚಂದ್ರಶೇಖರ್ ಎಂಬ ವ್ಯಕ್ತಿಯ ಬದುಕಿನ ಕಥೆಯನ್ನು ಕಟ್ಟಿಕೊಡುತ್ತದೆ ಎಂದು ತಿಳಿಸಿದರು. 2003ರಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕರ್ನಾಟಕದ ಸುಳ್ಯ ಸಹಕಾರಿ ಬ್ಯಾಂಕ್ ಅವರ ಆಸ್ತಿಯನ್ನು ವಶಪಡಿಸಿಕೊಂಡಿತ್ತು. ಅಂದಿನಿಂದ ಎರಡು ದಶಕಗಳಿಗೂ ಹೆಚ್ಚು ಕಾಲ ಅವರು ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಈ ನಡುವೆ ಚಂದ್ರಶೇಖರ್ ಅರಣ್ಯವನ್ನೇ ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದಾರೆ. ಬಳ್ಳಿಗಳಿಂದ ಬುಟ್ಟಿಗಳನ್ನು ಹೆಣೆದು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ವಿದ್ಯುತ್, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದ ಪರಿಸ್ಥಿತಿಯಲ್ಲೂ ತಮ್ಮ ಬದುಕಿಗೆ ಅರ್ಥ ಕಂಡುಕೊಂಡಿದ್ದಾರೆ.
ಕಾನೂನು ವಿವಾದವನ್ನಷ್ಟೇ ಕೇಂದ್ರವಾಗಿಸದೆ, ಚಂದ್ರಶೇಖರ್ ಅವರ ದೈನಂದಿನ ಬದುಕು, ಜೀವನಶೈಲಿ ಮತ್ತು ಮನಸ್ಥಿತಿಯನ್ನು ಚಿತ್ರಿಸುವ ಪ್ರಯತ್ನ ಮಾಡಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ಕೇವಲ ₹4 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಾಕ್ಷ್ಯಚಿತ್ರ, ಭೌತಿಕ ಸೌಕರ್ಯಗಳಿಲ್ಲದಿದ್ದರೂ ಸಂತೋಷದಿಂದ ಬದುಕಲು ಸಾಧ್ಯವೇ ಎಂಬ ಗಂಭೀರ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಡುತ್ತದೆ.
