5,600 ಪೊಲೀಸರ ಕಾವಲು, ಡ್ರೋನ್ ಹಾರಾಟಕ್ಕೂ ನಿಷೇಧ! ಸುಪ್ರೀಂ ಕೋರ್ಟ್ ಆದೇಶಕ್ಕೂ ಸವಾಲು ಹಾಕಿದ ವಿಜಯ್ ಸರ್ಕಾರ? ತಮಿಳುನಾಡಿನಲ್ಲಿ ಇಂದು ಏನಾಗಲಿದೆ?

5,600 ಪೊಲೀಸರ ಕಾವಲು, ಡ್ರೋನ್ ಹಾರಾಟಕ್ಕೂ ನಿಷೇಧ! ಸುಪ್ರೀಂ ಕೋರ್ಟ್ ಆದೇಶಕ್ಕೂ ಸವಾಲು ಹಾಕಿದ ವಿಜಯ್ ಸರ್ಕಾರ? ತಮಿಳುನಾಡಿನಲ್ಲಿ ಇಂದು ಏನಾಗಲಿದೆ?

ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗಿಸುವ ವಿಚಾರಕ್ಕೆ ಭಾರೀ ಹೈಡ್ರಾಮಾ – ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತಾ ವಿಜಯ್ ಸರ್ಕಾರ?

ತಮಿಳುನಾಡಿನಲ್ಲಿ ಇದೀಗ ಒಂದು ದೀಪ ಬೆಳಗಿಸುವ ವಿಚಾರವೇ ದೊಡ್ಡ ರಾಜಕೀಯ ಮತ್ತು ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಿದೆ. ಒಂದೆಡೆ ಸುಪ್ರೀಂ ಕೋರ್ಟ್ ಆದೇಶ, ಮತ್ತೊಂದೆಡೆ ರಾಜ್ಯ ಸರ್ಕಾರದ ಮರುಪರಿಶೀಲನಾ ಅರ್ಜಿ.
ಇದರ ನಡುವೆ ಮುನ್ನೆಚ್ಚರಿಕಾ ಕ್ರಮವಾಗಿ ಬರೋಬ್ಬರಿ 5,600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅಷ್ಟಕ್ಕೂ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ನಡೆಯುತ್ತಿರುವ ಈ ಹೈಡ್ರಾಮಾದ ಹಿಂದಿನ ಕಾರಣವೇನು?

ಮಧುರೈ ಜಿಲ್ಲೆಯ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿರುವ ವಿವಾದಿತ ಕಲ್ಲಿನ ಕಂಬದ ಮೇಲೆ ಕಾರ್ತಿಕೈ ದೀಪಂ ಹಬ್ಬದ ಪ್ರಯುಕ್ತ ದೀಪ ಬೆಳಗಿಸುವ ವಿಚಾರ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನವೆಂಬರ್ 20ರಂದು ಮಹತ್ವದ ಮಧ್ಯಂತರ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ನವೆಂಬರ್ 24ರಂದು ಅಂದರೆ ಇಂದು ಈ ಕಲ್ಲಿನ ಕಂಬದ ಮೇಲೆ ದೀಪ ಬೆಳಗಿಸಲು ಒಂದು ಬಾರಿಯ ವಿಶೇಷ ಅನುಮತಿ ನೀಡಿದೆ.
ಆದರೆ, ಈ ಅನುಮತಿ ಮುಂದಿನ ವರ್ಷಗಳಲ್ಲಿಯೂ ಇದೇ ರೀತಿ ದೀಪ ಬೆಳಗಿಸುವ ಹಕ್ಕನ್ನು ಸ್ಥಾಪಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಆದೇಶದ ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದೆ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕೂಡ ಕಾನೂನು ಸಚಿವರು, ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ಆದೇಶದಂತೆ ಬೆಟ್ಟದ ಮೇಲಿನ ಕಲ್ಲಿನ ಕಂಬದಲ್ಲಿ ದೀಪ ಬೆಳಗಿಸಲಾಗುತ್ತದೆಯೇ ಎಂಬ ಬಗ್ಗೆ ಸರ್ಕಾರದಿಂದ ಅಧಿಕೃತ ಸ್ಪಷ್ಟನೆ ಹೊರಬಿದ್ದಿರಲಿಲ್ಲ.

ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಮಧುರೈ ಜಿಲ್ಲಾಡಳಿತ ಭಾರೀ ಭದ್ರತೆ ಕೈಗೊಂಡಿದೆ. ಬರೋಬ್ಬರಿ 5,600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ತಾತ್ಕಾಲಿಕವಾಗಿ ಡ್ರೋನ್ ರೆಡ್ ಝೋನ್ ಎಂದು ಘೋಷಿಸಲಾಗಿದೆ.
ನವೆಂಬರ್ 23 ಮತ್ತು 24ರಂದು ಅನುಮತಿಯಿಲ್ಲದೆ ಡ್ರೋನ್ ಹಾರಿಸುವುದನ್ನು ನಿಷೇಧಿಸಲಾಗಿದೆ. ಜೊತೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಸಾರ್ವಜನಿಕ ಸಭೆ, ಪ್ರತಿಭಟನೆ, ಮೆರವಣಿಗೆ ಹಾಗೂ ಅನುಮತಿಯಿಲ್ಲದೆ ಬೆಟ್ಟ ಹತ್ತುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಇನ್ನೊಂದೆಡೆ, ಬೆಟ್ಟದ ಮೇಲಿರುವ ದರ್ಗಾ ಮತ್ತು ದೇವಸ್ಥಾನದ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಎರಡೂ ಕಡೆಯವರ ಭಾವನೆಗಳು ಈ ವಿವಾದವನ್ನು ಮತ್ತಷ್ಟು ಸೂಕ್ಷ್ಮವಾಗಿಸಿವೆ.
ಸಾಂಪ್ರದಾಯಿಕವಾಗಿ ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಸಮೀಪ ದೀಪ ಬೆಳಗಿಸುವ ಪದ್ಧತಿಯನ್ನು ಮುಂದುವರಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಹೀಗಾಗಿ ಇಂದು ತಿರುಪ್ಪರಂಕುಂದ್ರಂ ಬೆಟ್ಟದ ಮೇಲೆ ನಡೆಯುವ ಬೆಳವಣಿಗೆಗಳತ್ತ ಇಡೀ ತಮಿಳುನಾಡಿನ ಗಮನ ನೆಟ್ಟಿದೆ. ಸುಪ್ರೀಂ ಕೋರ್ಟ್ ನೀಡಿರುವ ಒಂದು ಬಾರಿಯ ಅನುಮತಿಯಂತೆ ದೀಪ ಬೆಳಗಿಸಲು ವಿಜಯ್ ಸರ್ಕಾರ ಮುಂದಾಗುತ್ತದೆಯೇ? ಅಥವಾ ಸರ್ಕಾರದ ಮುಂದಿನ ನಡೆ ಏನಾಗಿರಲಿದೆ? ಸಾವಿರಾರು ಪೊಲೀಸರ ಭದ್ರತೆಯ ನಡುವೆಯೂ ಈ ವಿವಾದಕ್ಕೆ ತೆರೆ ಬೀಳುತ್ತದೆಯೇ ಎಂಬ ಕುತೂಹಲ ಮೂಡಿದೆ.

Leave a Reply

Your email address will not be published. Required fields are marked *