ಸಾವಿಗೂ ಒಂದೇ ದಿನ ಮೊದಲು ನೆಚ್ಚಿನ ಜಾಗಕ್ಕೆ ಹೋಗಿದ್ದ ಅಂಬರೀಷ್! ಅಂದು ರೆಬೆಲ್ ಸ್ಟಾರ್ ಬೇಸರಗೊಂಡಿದ್ದೇಕೆ?

ಸಾವಿಗೂ ಒಂದೇ ದಿನ ಮೊದಲು ನೆಚ್ಚಿನ ಜಾಗಕ್ಕೆ ಹೋಗಿದ್ದ ಅಂಬರೀಷ್! ಅಂದು ರೆಬೆಲ್ ಸ್ಟಾರ್ ಬೇಸರಗೊಂಡಿದ್ದೇಕೆ?

ಅಂಬರೀಷ್ ನಮ್ಮನ್ನಗಲಿ 8 ವರ್ಷಗಳು ಕಳೆದಿವೆ. ಆದರೆ ನಿಧನಕ್ಕೂ ಒಂದು ದಿನ ಮೊದಲು ಅಂಬಿ ತಮ್ಮ ನೆಚ್ಚಿನ ರೇಸ್ ಕ್ಲಬ್‌ಗೆ ಭೇಟಿ ನೀಡಿದ್ದರು. ಅಂದು ಆಸೆಯಿಂದ ಹೋಗಿದ್ದ ಅಂಬರೀಷ್ ನಿರಾಸೆಯಿಂದ ವಾಪಸಾಗಿದ್ದರು. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್, ಕಲಿಯುಗದ ಕರ್ಣ ಅಂಬರೀಷ್ ಅವರ ನೆನಪುಗಳು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚಹಸಿರಾಗಿವೆ. 2018ರ ನವೆಂಬರ್ 24ರಂದು ಅಂಬರೀಷ್ ಅವರ ಅಗಲಿಕೆ ಇಡೀ ಕರ್ನಾಟಕವನ್ನೇ ಕಣ್ಣೀರಿನಲ್ಲಿ ಮುಳುಗಿಸಿತ್ತು.

ಸಿನಿಮಾ, ರಾಜಕೀಯ, ಸ್ನೇಹಿತರ ಒಡನಾಟದ ಜೊತೆಗೆ ಅಂಬರೀಷ್ ಅವರಿಗೆ ಕುದುರೆ ರೇಸ್ ಎಂದರೆ ವಿಶೇಷ ಆಸಕ್ತಿಯಿತ್ತು. ಆದರೆ ನಿಧನಕ್ಕೂ ಒಂದು ದಿನ ಮೊದಲು ತಮ್ಮ ನೆಚ್ಚಿನ ರೇಸ್ ಕ್ಲಬ್‌ಗೆ ಭೇಟಿ ನೀಡಿದ್ದ ಅಂಬರೀಷ್, ಅಂದು ಬೇಸರದಿಂದಲೇ ವಾಪಸಾಗಿದ್ದರು ಎನ್ನಲಾಗಿದೆ.
ಅನಾರೋಗ್ಯದ ನಡುವೆಯೂ ರೇಸ್ ಕ್ಲಬ್‌ಗೆ ಹೋಗಿದ್ದ ಅಂಬಿ!
2018ರ ನವೆಂಬರ್ 23ರಂದು ಉಸಿರಾಟದ ಸಮಸ್ಯೆಯ ನಡುವೆಯೂ ಅಂಬರೀಷ್ ಬೆಂಗಳೂರಿನ ರೇಸ್ ಕ್ಲಬ್‌ಗೆ ಭೇಟಿ ನೀಡಿದ್ದರು. ಅಂಬಿ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಆಪ್ತರು ಹಾಗೂ ಸ್ನೇಹಿತರು ಕೂಡ ಆಗಮಿಸಿದ್ದರು.

ಕುದುರೆ ರೇಸ್ ವೀಕ್ಷಿಸುತ್ತಾ ಸ್ನೇಹಿತರೊಂದಿಗೆ ಸಮಯ ಕಳೆಯುವುದು ಅಂಬರೀಷ್ ಅವರ ನೆಚ್ಚಿನ ಹವ್ಯಾಸವಾಗಿತ್ತು. ಆದರೆ ಅಂದು ಅಂಬಿ ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ.
ಅಂಬರೀಷ್ ಆಸೆಗೆ ತಣ್ಣೀರೆರಚಿದ್ದ ಮಳೆ!
ಅಂದು ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದ್ದರಿಂದ ಕುದುರೆ ರೇಸ್‌ಗಳನ್ನು ರದ್ದುಗೊಳಿಸಲಾಗಿತ್ತು. ಮಳೆ ನಿಂತ ಬಳಿಕವಾದರೂ ರೇಸ್ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಅಂಬರೀಷ್ ಕೆಲಕಾಲ ಸ್ನೇಹಿತರೊಂದಿಗೆ ಮಾತನಾಡುತ್ತಾ ಕುಳಿತಿದ್ದರಂತೆ.

ಆದರೆ ಮಳೆ ಕಡಿಮೆಯಾಗದ ಕಾರಣ ರೇಸ್ ನಡೆಯಲೇ ಇಲ್ಲ. ಅನಾರೋಗ್ಯದ ನಡುವೆಯೂ ಆಸೆಯಿಂದ ರೇಸ್ ನೋಡಲು ಬಂದಿದ್ದ ಅಂಬರೀಷ್ ನಿರಾಸೆಗೊಂಡಿದ್ದರು ಎನ್ನಲಾಗಿದೆ.

ಅದೇ ತಮ್ಮ ನೆಚ್ಚಿನ ರೇಸ್ ಕ್ಲಬ್‌ಗೆ ಕೊನೆಯ ಭೇಟಿಯಾಗಲಿದೆ ಎಂದು ಅಂದು ಯಾರೂ ಊಹಿಸಿರಲಿಲ್ಲ.
ವಿದೇಶಿ ಕುದುರೆಗಳ ಮಾಲೀಕರಾಗಿದ್ದ ರೆಬೆಲ್ ಸ್ಟಾರ್!
ಅಂಬರೀಷ್ ಅವರಿಗೆ ಕುದುರೆ ರೇಸ್ ಮೇಲಿದ್ದ ಆಸಕ್ತಿ ಇಂದು ನಿನ್ನೆಯದ್ದಲ್ಲ. 1978ರಲ್ಲೇ ಮೈಸೂರು ರೇಸ್ ಕ್ಲಬ್‌ನ ಸದಸ್ಯರಾಗಿದ್ದ ಅವರು, ಬೆಂಗಳೂರು ರೇಸ್ ಕ್ಲಬ್‌ನಲ್ಲೂ ಸಕ್ರಿಯರಾಗಿದ್ದರು.

ಕೇವಲ ಕುದುರೆ ರೇಸ್ ವೀಕ್ಷಿಸುವುದಷ್ಟೇ ಅಲ್ಲದೆ, ಸ್ವತಃ ರೇಸ್ ಕುದುರೆಗಳ ಮಾಲೀಕರೂ ಆಗಿದ್ದರು. ಐರ್ಲೆಂಡ್‌ನಿಂದ ತರಿಸಿದ್ದ ‘ಸ್ಪೀಡ್ ಹಾಕ್’ ಮತ್ತು ‘ಜಾಕಿ’ ಎಂಬ ಎರಡು ಕುದುರೆಗಳನ್ನು ಹೊಂದಿದ್ದರು. ಈ ಪೈಕಿ ಸ್ಪೀಡ್ ಹಾಕ್ ಆರು ಬಾರಿ ಟ್ರೋಫಿ ಗೆದ್ದಿತ್ತು ಎನ್ನಲಾಗಿದೆ.
ಮರುದಿನವೇ ಕನ್ನಡಿಗರನ್ನು ಅಗಲಿದ ಅಂಬಿ!
ನವೆಂಬರ್ 23ರಂದು ಸ್ನೇಹಿತರೊಂದಿಗೆ ಸಮಯ ಕಳೆದಿದ್ದ ಅಂಬರೀಷ್, ಮರುದಿನ ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ 2018ರ ನವೆಂಬರ್ 24ರಂದು ರಾತ್ರಿ 10.15ರ ಸುಮಾರಿಗೆ ಕೊನೆಯುಸಿರೆಳೆದಿದ್ದರು.

ಅಂಬರೀಷ್ ಅವರ ನೆಚ್ಚಿನ ಹವ್ಯಾಸಕ್ಕೆ ಸಾಕ್ಷಿಯಾಗಿದ್ದ ರೇಸ್ ಕ್ಲಬ್‌ನ ಆ ಕೊನೆಯ ಭೇಟಿ ಇಂದು ಭಾವುಕ ನೆನಪಾಗಿ ಉಳಿದಿದೆ.
ನೆಚ್ಚಿನ ರೇಸ್ ಕೋರ್ಸ್ ರಸ್ತೆಗೆ ಅಂಬಿಯದ್ದೇ ಹೆಸರು!
ಅಂಬರೀಷ್ ಅವರ ನೆನಪನ್ನು ಶಾಶ್ವತವಾಗಿಸುವ ಉದ್ದೇಶದಿಂದ 2023ರಲ್ಲಿ ಕರ್ನಾಟಕ ಸರ್ಕಾರ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ‘ರೆಬೆಲ್ ಸ್ಟಾರ್ ಡಾ. ಎಂ.ಎಚ್. ಅಂಬರೀಷ್ ರಸ್ತೆ’ ಎಂದು ಮರುನಾಮಕರಣ ಮಾಡಿತ್ತು.

ಅಂದು ಆಸೆಯಿಂದ ರೇಸ್ ನೋಡಲು ಬಂದಿದ್ದ ಅಂಬಿ ನಿರಾಸೆಯಿಂದ ಹಿಂದಿರುಗಿದ್ದರು. ಇಂದು ಅದೇ ರಸ್ತೆಗೆ ಅಂಬಿಯ ಹೆಸರು ಉಳಿದಿದೆ. ರೆಬೆಲ್ ಸ್ಟಾರ್ ನಮ್ಮನ್ನಗಲಿದ್ದರೂ ಅವರ ನೆನಪುಗಳು ಎಂದೆಂದಿಗೂ ಅಜರಾಮರ!

Leave a Reply

Your email address will not be published. Required fields are marked *