ಹಾಲಿನ ಪನ್ನೀರ್ ಅಂದುಕೊಂಡು ತಿಂತಿದ್ದೀರಾ? ನಕಲಿ ಪನ್ನೀರ್ ತಯಾರಿಕಾ ಘಟಕದ ಮೇಲೆ ಬೃಹತ್ ದಾಳಿ!

ಹಾಲಿನ ಪನ್ನೀರ್ ಅಂದುಕೊಂಡು ತಿಂತಿದ್ದೀರಾ? ನಕಲಿ ಪನ್ನೀರ್ ತಯಾರಿಕಾ ಘಟಕದ ಮೇಲೆ ಬೃಹತ್ ದಾಳಿ!

ಲೀಟರ್‌ಗಟ್ಟಲೆ ಪಾಮ್ ಆಯಿಲ್ ಪತ್ತೆ! ಪನ್ನೀರ್ ಹೊಳೆಯಲು ಬಟ್ಟೆಗೆ ಬಳಸುವ ರಾಸಾಯನಿಕ ಬಳಕೆ ಆರೋಪ! ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿಯಲ್ಲಿ ಬಯಲಾಯ್ತು ಆತಂಕಕಾರಿ ಸಂಗತಿ!

ಉತ್ತರ ಪ್ರದೇಶ: ಪನ್ನೀರ್ ಬಟರ್ ಮಸಾಲಾ, ಪನ್ನೀರ್ ಟಿಕ್ಕಾ, ಪನ್ನೀರ್ ಬಿರಿಯಾನಿ ಅಂದ್ರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೀರಾ? ಹಾಗಾದರೆ ಈ ಸುದ್ದಿ ನೀವು ಓದಲೇಬೇಕು.

ಮಾರುಕಟ್ಟೆಯಲ್ಲಿ ಸಿಗುವ ಪನ್ನೀರ್ ಅಸಲಿಯೋ ಅಥವಾ ನಕಲಿಯೋ ಎಂಬ ಅನುಮಾನ ಮೂಡಿಸುವಂತಹ ಘಟನೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದಿದೆ.

ಕೃತಕ ಪನ್ನೀರ್ ತಯಾರಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದು, ಲೀಟರ್‌ಗಟ್ಟಲೆ ಪಾಮ್ ಆಯಿಲ್ ಪತ್ತೆಯಾಗಿದೆ ಎನ್ನಲಾಗಿದೆ.
ಪನ್ನೀರ್ ತಯಾರಿಕಾ ಘಟಕದ ಮೇಲೆ ಅಧಿಕಾರಿಗಳ ಬೃಹತ್ ದಾಳಿ!

ರಾಯ್‌ಬರೇಲಿಯ ಹರಚಂದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಘೌರಾ ಸಮೀಪದಲ್ಲಿರುವ ಬಬ್ಲು ಛೇನಾ ವಾಲಾ ಎಂಬುವವರಿಗೆ ಸೇರಿದ ಪನ್ನೀರ್ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ವೇಳೆ ಕೃತಕ ಪನ್ನೀರ್ ತಯಾರಿಕೆಗೆ ಬಳಸಲು ಸಂಗ್ರಹಿಸಿಟ್ಟಿದ್ದ ಪಾಮ್ ಆಯಿಲ್ ಪತ್ತೆಯಾಗಿದೆ ಎನ್ನಲಾಗಿದೆ. ಪರಿಶೀಲನೆ ಬಳಿಕ ಅಧಿಕಾರಿಗಳು ಲೀಟರ್‌ಗಟ್ಟಲೆ ಪಾಮ್ ಆಯಿಲ್ ಅನ್ನು ಚೆಲ್ಲಿದ್ದಾರೆ.
ಪನ್ನೀರ್ ಬಿಳಿಯಾಗಿ ಹೊಳೆಯಲು ಬಟ್ಟೆಗೆ ಬಳಸುವ ಕೆಮಿಕಲ್?

ಈ ಘಟನೆಯಲ್ಲಿ ಪಾಮ್ ಆಯಿಲ್ ಬಳಕೆಯ ಆರೋಪಕ್ಕಿಂತಲೂ ಆತಂಕಕಾರಿ ಸಂಗತಿಯೊಂದು ಕೇಳಿಬಂದಿದೆ. ಪನ್ನೀರ್ ಆಕರ್ಷಕವಾಗಿ ಹಾಗೂ ಬಿಳಿಯಾಗಿ ಕಾಣುವಂತೆ ಮಾಡಲು ರಾಣಿಪಾಲ್ ಮತ್ತು ಬಟ್ಟೆಗಳನ್ನು ಹೊಳೆಯುವಂತೆ ಮಾಡಲು ಬಳಸುವ ಆಪ್ಟಿಕಲ್ ವೈಟ್ನರ್‌ನಂತಹ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಆದರೆ ಈ ರಾಸಾಯನಿಕಗಳ ಬಳಕೆಯಾಗಿರುವುದು ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಡಬೇಕಿದೆ.ಲಾಭದ ಆಸೆಗೆ ಗ್ರಾಹಕರ ಆರೋಗ್ಯದ ಜೊತೆ ಚೆಲ್ಲಾಟ?

ಹಾಲಿನಿಂದ ತಯಾರಿಸಬೇಕಾದ ಪನ್ನೀರ್‌ಗೆ ಪರ್ಯಾಯ ಪದಾರ್ಥಗಳನ್ನು ಬಳಸಿ, ಅದನ್ನು ಅಸಲಿ ಪನ್ನೀರ್ ಎಂದು ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

ಇಂತಹ ಕಲಬೆರಕೆ ಆಹಾರ ಪದಾರ್ಥಗಳ ಸೇವನೆಯಿಂದ ಗ್ರಾಹಕರ ಆರೋಗ್ಯಕ್ಕೆ ಅಪಾಯ ಎದುರಾಗಬಹುದು.

ಆಹಾರಕ್ಕೆ ಅನುಮೋದನೆ ಇಲ್ಲದ ರಾಸಾಯನಿಕಗಳನ್ನು ಬಳಸುವುದು ಗಂಭೀರ ಆಹಾರ ಸುರಕ್ಷತಾ ಉಲ್ಲಂಘನೆಯಾಗಿದೆ.
ಮಾರುಕಟ್ಟೆಯಲ್ಲಿ ಸಿಗುವ ಪನ್ನೀರ್ ಎಷ್ಟು ಸುರಕ್ಷಿತ

ಹೊರಗಿನಿಂದ ನೋಡಲು ಬಿಳಿಯಾಗಿ, ಮೃದುವಾಗಿ ಹಾಗೂ ಆಕರ್ಷಕವಾಗಿ ಕಾಣುವ ಪನ್ನೀರ್ ಅಸಲಿಯೇ ಎಂಬುದನ್ನು ಕೇವಲ ಅದರ ನೋಟದಿಂದ ನಿರ್ಧರಿಸಲು ಸಾಧ್ಯವಿಲ್ಲ.

ಹೀಗಾಗಿ ಗ್ರಾಹಕರು ವಿಶ್ವಾಸಾರ್ಹ ಅಂಗಡಿಗಳಲ್ಲಿ ಪನ್ನೀರ್ ಖರೀದಿಸುವುದು ಸೂಕ್ತ. ರಾಯ್‌ಬರೇಲಿಯಲ್ಲಿ ಪತ್ತೆಯಾಗಿರುವ ಈ ಪ್ರಕರಣದ ಬಳಿಕ ಕಲಬೆರಕೆ ಪನ್ನೀರ್ ಮಾರಾಟದ ಬಗ್ಗೆ ಮತ್ತಷ್ಟು ಪ್ರಶ್ನೆಗಳು ಮೂಡಿವೆ.

ಅಷ್ಟಕ್ಕೂ ಈ ಘಟಕದಲ್ಲಿ ತಯಾರಾಗುತ್ತಿದ್ದ ಪನ್ನೀರ್ ಎಲ್ಲೆಲ್ಲಿಗೆ ಪೂರೈಕೆಯಾಗುತ್ತಿತ್ತು? ಎಷ್ಟು ಪ್ರಮಾಣದಲ್ಲಿ ಮಾರಾಟವಾಗಿತ್ತು? ರಾಸಾಯನಿಕ ಬಳಕೆಯ ಆರೋಪ ನಿಜವೇ? ಅಧಿಕಾರಿಗಳ ಮುಂದಿನ ಪರಿಶೀಲನೆಯಿಂದ ಉತ್ತರ ಸಿಗಬೇಕಿದೆ.

Leave a Reply

Your email address will not be published. Required fields are marked *