ಜಾನ್ವಿ ಕಪೂರ್ ಬೋಲ್ಡ್ ದೃಶ್ಯದ ಬಗ್ಗೆ ಮೌನ ಮುರಿದ ಶ್ರುತಿ ಹಾಸನ್

ಜಾನ್ವಿ ಕಪೂರ್ ಬೋಲ್ಡ್ ದೃಶ್ಯದ ಬಗ್ಗೆ ಮೌನ ಮುರಿದ ಶ್ರುತಿ ಹಾಸನ್

‘ಪೆದ್ದಿ’ ಸಿನಿಮಾದ ವಿವಾದಗಳ ನಡುವೆಯೇ ನಟಿ ಶ್ರುತಿ ಹಾಸನ್ ರಾಮ್ ಚರಣ್ ಜೊತೆಗಿನ ಸ್ಪೆಷಲ್ ಹಾಡಿಗೆ ಒಪ್ಪಿಕೊಂಡ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ನನಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ ಮತ್ತು ಇಷ್ಟವಿಲ್ಲದ ಉಡುಪುಗಳನ್ನು ನಾನು ಎಂದಿಗೂ ಧರಿಸುವುದಿಲ್ಲ ಎಂದು ಶ್ರುತಿ ಸ್ಪಷ್ಟಪಡಿಸಿದ್ದಾರೆ .

ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾ ತೆರೆಕಂಡು ಐದು ತಿಂಗಳಾದರೂ ವಿವಾದ ಮಾತ್ರ ತಣ್ಣಗಾಗಿಲ್ಲ. ಚಿತ್ರದಲ್ಲಿ ಜಾನ್ವಿ ಕಪೂರ್ ಪಾತ್ರದ ಚಿತ್ರಣ ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿರುವ ಬಗ್ಗೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಈ ನಡುವೆ ಚಿತ್ರದ ‘ಹೆಲ್ಲಲ್ಲಲ್ಲೋ’ ಸ್ಪೆಷಲ್ ಹಾಡಿನಲ್ಲಿ ಹೆಜ್ಜೆ ಹಾಕಿದ್ದ ನಟಿ ಶ್ರುತಿ ಹಾಸನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಗಲಾಟ್ಟಾ ಪ್ಲಸ್ ಸಂದರ್ಶನದಲ್ಲಿ ಮಾತನಾಡಿದ ಶ್ರುತಿ ಹಾಸನ್ ವಿಶೇಷ ಹಾಡುಗಳ ಅಗತ್ಯತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.‘ನನಗೆ ಡ್ಯಾನ್ಸ್ ಮಾಡುವುದು ಮತ್ತು ಸುಂದರವಾಗಿ ಅಲಂಕರಿಸಿಕೊಳ್ಳುವುದು ತುಂಬಾ ಇಷ್ಟ. ನನ್ನ ದೃಷ್ಟಿಕೋನದಲ್ಲಿ ನೃತ್ಯ ಎನ್ನುವುದು ಸ್ವಾತಂತ್ರ್ಯದ ಸಂಕೇತವಾಗಿದೆ. ನಾನು ಎಂದಿಗೂ ಯಾರನ್ನೂ ಮೆಚ್ಚಿಸಲು ಅಥವಾ ಒತ್ತಾಯಕ್ಕೆ ಮಣಿದು ಇಂತಹ ಹಾಡುಗಳನ್ನು ಮಾಡಿಲ್ಲ’ ಎಂದು ಶ್ರುತಿ ಹೇಳಿದ್ದಾರೆ.

‘ನನಗೆ ಯಾವುದೇ ಉಡುಪು ಅಥವಾ ದೃಶ್ಯ ಇಷ್ಟವಾಗದಿದ್ದರೆ ನೇರವಾಗಿ ನಿರಾಕರಿಸುತ್ತೇನೆ. ಈ ವಿಚಾರವಾಗಿ ಸೆಟ್‌ನಲ್ಲಿ ನಾನು ಸಾಕಷ್ಟು ಬಾರಿ ವಾದ ಮಾಡಿದ್ದೇನೆ. ಇದರಿಂದ ನನ್ನನ್ನು ಹಠಮಾರಿ ಎಂದು ಕರೆದವರೂ ಇದ್ದಾರೆ. ಆದರೂ ನಾನು ತಲೆಕೆಡಿಸಿಕೊಂಡಿಲ್ಲ. ನನಗೆ ಕಂಫರ್ಟಬಲ್ ಎನಿಸಿದರೆ ಮಾತ್ರ ನಾನು ಆ ಕೆಲಸ ಮಾಡುತ್ತೇನೆ’ ಎಂದು ಶ್ರುತಿ ಹಾಸನ್ ಖಡಕ್ ಆಗಿ ಉತ್ತರಿಸಿದ್ದಾರೆ.

ಸಿನಿಮಾದಲ್ಲಿ ಮಹಿಳೆಯರನ್ನು ತೋರಿಸುವ ರೀತಿಯ ಬಗ್ಗೆ ನಡೆಯುತ್ತಿರುವ ಚರ್ಚೆ ನನಗೆ ಅರ್ಥವಾಗುತ್ತದೆ. ಆದರೆ ಕೇವಲ ಐಟಂ ಸಾಂಗ್‌ಗಳಲ್ಲಿ ಮಾತ್ರ ಅತಿಯಾದ ಪ್ರದರ್ಶನವಿದೆ ಎನ್ನುವುದು ಸರಿಯಲ್ಲ. ಇಂದಿನ ಜಗತ್ತಿನಲ್ಲಿ ಹಲವು ವಿಧಗಳಲ್ಲಿ ಜನರನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ನಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಶ್ರುತಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಜಾನ್ವಿ ಕಪೂರ್ ಅನುಭವದ ಬಗ್ಗೆ ಪ್ರತಿಕ್ರಿಯಿಸಲು ಶ್ರುತಿ ನಿರಾಕರಿಸಿದ್ದಾರೆ. ಇತ್ತೀಚೆಗೆ ‘ಕಾಫಿ ವಿತ್ ಕರಣ್’ ಶೋನಲ್ಲಿ ಜಾನ್ವಿ ಕಪೂರ್ ‘ಪೆದ್ದಿ’ ಚಿತ್ರದ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು. ಆ ಪಾತ್ರವು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಿತ್ತು. ನಾನು ಇನ್ನಷ್ಟು ಜಾಗರೂಕಳಾಗಿರಬೇಕಿತ್ತು. ಮುಂದೆಂದೂ ಇಂತಹ ತಪ್ಪು ಮಾಡುವುದಿಲ್ಲ ಎಂದು ಜಾನ್ವಿ ಹೇಳಿಕೊಂಡಿದ್ದರು.

ಸದ್ಯ ತಮ್ಮ ಹೊಸ ಸಿನಿಮಾ ‘ಆಕಾಶಂಲೋ ಒಕ ತಾರಾ’ ಪ್ರಚಾರದಲ್ಲಿ ಬ್ಯುಸಿಯಾಗಿರುವ ಶ್ರುತಿ ಹಾಸನ್, ಗಲಾಟಾ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಪೆದ್ದಿ ಸಿನಿಮಾ ವಿವಾದದ ಕುರಿತು ಮಾತನಾಡಿದ್ದಾರೆ.

ಜಾನ್ವಿ ಕಪೂರ್ ಅವರ ಅನುಭವದ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ. ಇತರ ಮಹಿಳೆಯರ ಪರವಾಗಿ ನಾನು ಮಾತನಾಡಲು ಸಾಧ್ಯವಿಲ್ಲ. ಅದೇ ರೀತಿ ನನ್ನ ಅನುಭವದ ಬಗ್ಗೆ ಬೇರೆಯವರೂ ಮಾತನಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಅನುಭವವೂ ವಿಭಿನ್ನವಾಗಿರುತ್ತದೆ ಎಂಬ ಅಭಿಪ್ರಾಯವನ್ನು ಶ್ರುತಿ ವ್ಯಕ್ತಪಡಿಸಿದ್ದಾರೆ.

ನನಗೆ ಡ್ಯಾನ್ಸ್ ಮಾಡುವುದು ಇಷ್ಟ!
‘ಪೆದ್ದಿ’ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಲು ಒಪ್ಪಿಕೊಂಡಿದ್ದೇಕೆ ಎಂಬ ಪ್ರಶ್ನೆಗೂ ಶ್ರುತಿ ಹಾಸನ್ ಉತ್ತರಿಸಿದ್ದಾರೆ. ತಮಗೆ ಡ್ಯಾನ್ಸ್ ಮಾಡುವುದು, ಚೆನ್ನಾಗಿ ಸಿಂಗಾರ ಮಾಡಿಕೊಳ್ಳುವುದು ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು ಇಷ್ಟ. ಯಾವುದೇ ಒತ್ತಡಕ್ಕೆ ಮಣಿದು ಇಂತಹ ಹಾಡುಗಳಲ್ಲಿ ನಟಿಸುವುದಿಲ್ಲ ಎಂದು ತಿಳಿಸಿದ್ದಾರೆ.

ತಮಗೆ ಇಷ್ಟವಿಲ್ಲದ ಉಡುಪು ಧರಿಸುವುದಿಲ್ಲ. ಯಾವುದೇ ದೃಶ್ಯದಲ್ಲಿ ನಟಿಸಲು ಮುಜುಗರ ಅನಿಸಿದರೆ ನೇರವಾಗಿ ನಿರಾಕರಿಸುತ್ತಾರೆ. ಈ ವಿಚಾರವಾಗಿ ಈ ಹಿಂದೆ ಹಲವು ಬಾರಿ ವಾದಗಳೂ ನಡೆದಿವೆ ಎಂದು ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ

ಜಾನ್ವಿ ಕಪೂರ್ ಅಸಮಾಧಾನ ವ್ಯಕ್ತಪಡಿಸಿದ್ದೇಕೆ?
ಈ ಹಿಂದೆ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿಥ್ ಕರಣ್’ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರ್ ತಮ್ಮ ‘ಪೆದ್ದಿ’ ಸಿನಿಮಾ ಅನುಭವದ ಬಗ್ಗೆ ಮಾತನಾಡಿದ್ದರು.

ಚಿತ್ರದಲ್ಲಿ ತಮ್ಮ ಅಚ್ಚಿಯಮ್ಮ ಪಾತ್ರವನ್ನು ತೋರಿಸಿದ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇಂತಹ ದೃಶ್ಯಗಳು ಸಮಾಜದ ಮೇಲೆ, ವಿಶೇಷವಾಗಿ ಮಹಿಳೆಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಚಿತ್ರೀಕರಣದ ವೇಳೆಯೇ ಇನ್ನಷ್ಟು ಎಚ್ಚರಿಕೆ ವಹಿಸಬೇಕಿತ್ತು ಎಂದು ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು.

ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿಯೂ ತಿಳಿಸಿದ್ದರು

Leave a Reply

Your email address will not be published. Required fields are marked *