ಎಫ್‌ಬಿಐ ಮಾಹಿತಿ ಡೇಟಾಬೇಸ್‌ಗೆ ಹ್ಯಾಕರ್‌ಗಳ ಲಗ್ಗೆ; ತನಿಖೆ ಚುರುಕು

ವಾಷಿಂಗ್ಟನ್: ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ)ನ ರಾಷ್ಟ್ರೀಯ ಅಪರಾಧ ಮಾಹಿತಿ ಡೇಟಾಬೇಸ್‌ಗೆ ಹ್ಯಾಕರ್‌ಗಳು ನುಗ್ಗಿರುವ ಪ್ರಕರಣದ ತನಿಖೆ ಆರಂಭವಾಗಿದೆ. ನ್ಯಾಷನಲ್ ಕ್ರೈಮ್ ಇನ್ಫರ್ಮೇಷನ್ ಸೆಂಟರ್ (ಎನ್‌ಸಿಐಸಿ) ಮೇಲೆ ಇತ್ತೀಚಿನ ತಿಂಗಳುಗಳಲ್ಲಿ ನಡೆದ ಎರಡನೇ ಸೈಬರ್ ದಾಳಿ ಇದಾಗಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.

ಇದೇ ವೇಳೆ, ರೈತರಿಗೆ ಹಣ ಪಾವತಿಸುವ ವ್ಯವಸ್ಥೆಯನ್ನು ಬಳಸಿಕೊಂಡು ಅಮೆರಿಕದ ಕೃಷಿ ಇಲಾಖೆಯ (ಯುಎಸ್‌ಡಿಎ) ಮೇಲೂ ಸೈಬರ್ ದಾಳಿ ನಡೆದಿದೆ. ಇದರಿಂದ ಸೂಕ್ಷ್ಮ ಮಾಹಿತಿ ಸೋರಿಕೆಯಾಗಿರುವ ಆತಂಕ ಎದುರಾಗಿದೆ.

ತಾಂತ್ರಿಕ ವ್ಯತ್ಯಯಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ಸೈಬರ್ ನಿರ್ದೇಶಕ ಸೀನ್ ಕೇರ್ನ್‌ಕ್ರಾಸ್ ಅವರನ್ನು ವಜಾಗೊಳಿಸಿ, ಕರ್ಸ್ಟನ್ ಡೇವಿಸ್ ಅವರನ್ನು ಹೊಸ ನಿರ್ದೇಶಕರನ್ನಾಗಿ ನೇಮಿಸಿದ್ದಾರೆ.