ಸಾವಿಗೂ ಮುನ್ನ ಕೊನೆಯದಾಗಿ ಕ್ಲಾಸ್‌ಗೆ ಹಾಜರಾದ ವಿದ್ಯಾರ್ಥಿನಿ! ಆಕೆಯ ಒಂದು ಆಸೆ ಈಡೇರಿಸಲು ಆಸ್ಪತ್ರೆಯನ್ನೇ ಶಾಲೆಯನ್ನಾಗಿಸಿದ ಶಿಕ್ಷಕರು!

ಸಾವಿಗೂ ಮುನ್ನ ಕೊನೆಯದಾಗಿ ಕ್ಲಾಸ್‌ಗೆ ಹಾಜರಾದ ವಿದ್ಯಾರ್ಥಿನಿ! ಆಕೆಯ ಒಂದು ಆಸೆ ಈಡೇರಿಸಲು ಆಸ್ಪತ್ರೆಯನ್ನೇ ಶಾಲೆಯನ್ನಾಗಿಸಿದ ಶಿಕ್ಷಕರು!

ಶಾಲೆಗೆ ಹೋಗಬೇಕು, ಸ್ನೇಹಿತರ ಜೊತೆ ಕುಳಿತು ಪಾಠ ಕೇಳಬೇಕು, ಟೀಚರ್ ಜೊತೆ ಮಾತನಾಡಬೇಕು.. 18 ವರ್ಷದ ಹುಡುಗಿಯ ಕೊನೆಯ ಆಸೆ ಇಷ್ಟೇ ಆಗಿತ್ತು! ಆದರೆ ಆಕೆಗೆ ಆಸ್ಪತ್ರೆಯ ಹಾಸಿಗೆಯಿಂದ ಎದ್ದು ಶಾಲೆಗೆ ಹೋಗುವ ಶಕ್ತಿಯೂ ಇರಲಿಲ್ಲ. ತನ್ನ ಆಸೆ ಈಡೇರುವುದಿಲ್ಲ ಎಂದು ಕಣ್ಣೀರಿಟ್ಟ ವಿದ್ಯಾರ್ಥಿನಿಗೆ ಶಿಕ್ಷಕರು ಹಾಗೂ ಸಹಪಾಠಿಗಳು ಮರೆಯಲಾಗದ ಉಡುಗೊರೆಯೊಂದನ್ನು ನೀಡಿದ್ದಾರೆ. ಆಸ್ಪತ್ರೆಯನ್ನೇ ತರಗತಿಯನ್ನಾಗಿ ಬದಲಿಸಿ ಆಕೆಯ ಕೊನೆಯ ಆಸೆ ನೆರವೇರಿಸಿದ್ದಾರೆ. ಆದರೆ ಅದಾದ ಎರಡೇ ದಿನಕ್ಕೆ ನಡೆದ ಘಟನೆ ಎಲ್ಲರನ್ನೂ ದುಃಖದಲ್ಲಿ ಮುಳುಗಿಸಿದೆ.
18 ವರ್ಷದ ಹುಡುಗಿಯ ಮನಕಲಕುವ ಕಥೆ!
ಚೀನಾದ ಗೈಝೌ ಪ್ರಾಂತ್ಯದ 18 ವರ್ಷದ ಯಾವೋ ಯಿಂಗ್‌ಬೈ ಎಂಬ ವಿದ್ಯಾರ್ಥಿನಿಯ ಕಥೆ ಇದೀಗ ಮನಕಲಕುವಂತಿದೆ.

ಎಲ್ಲರಂತೆ ಶಾಲೆಗೆ ಹೋಗಬೇಕು, ಸ್ನೇಹಿತರೊಂದಿಗೆ ಸಮಯ ಕಳೆಯಬೇಕು, ಪಾಠ ಕೇಳಬೇಕು ಎಂಬ ಆಸೆ ಆಕೆಗೂ ಇತ್ತು.

ಆದರೆ ಐದು ವರ್ಷಗಳಿಂದ ಲ್ಯುಕೇಮಿಯಾ ಎಂಬ ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಆಕೆಯ ಬದುಕು ಆಸ್ಪತ್ರೆ ಮತ್ತು ಚಿಕಿತ್ಸೆಯ ನಡುವೆಯೇ ಸಾಗುತ್ತಿತ್ತು.

ಅನಾರೋಗ್ಯದ ಕಾರಣ ನಿಯಮಿತವಾಗಿ ಶಾಲೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಿ, 18ನೇ ವಯಸ್ಸಿನಲ್ಲೂ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಳು ಎಂದು ವರದಿಯಾಗಿದೆ.
ಮಗಳನ್ನು ಉಳಿಸಲು ಪೋಷಕರಿಂದ ನಿರಂತರ ಹೋರಾಟ!
ಯಾವೋ ಯಿಂಗ್‌ಬೈ ಅವರನ್ನು ಉಳಿಸಲು ಪೋಷಕರು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು.

ಚಿಕಿತ್ಸೆಯ ಭಾಗವಾಗಿ ಸ್ಟೆಮ್ ಸೆಲ್ ಕಸಿ ಮಾಡಿಸಲು ಕುಟುಂಬ ಮತ್ತೊಂದು ಮಗುವಿನ ಹೊಕ್ಕಳಬಳ್ಳಿಯ ರಕ್ತವನ್ನು ಬಳಸಿಕೊಂಡಿತ್ತು ಎಂದು ವರದಿಯಾಗಿದೆ.

ಚಿಕಿತ್ಸೆಯ ಬಳಿಕ ಆಕೆಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತ್ತು.

ಇದರಿಂದ ಕೆಲ ತಿಂಗಳು ಶಾಲೆಗೆ ಹಾಜರಾಗಲು ಸಾಧ್ಯವಾಗಿತ್ತು. ಸಹಪಾಠಿಗಳೊಂದಿಗೆ ಬೆರೆತು ಪಾಠ ಕೇಳುವ ಅವಕಾಶವೂ ಸಿಕ್ಕಿತ್ತು.

ಆದರೆ ಮೂರು ತಿಂಗಳ ಹಿಂದೆ ಕ್ಯಾನ್ಸರ್ ಮತ್ತೆ ಉಲ್ಬಣಗೊಂಡಿತು. ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಆಕೆ ಮತ್ತೆ ಆಸ್ಪತ್ರೆಗೆ ದಾಖಲಾಗಬೇಕಾಯಿತು.
‘ನನಗೆ ಇನ್ನೊಂದು ಸಲ ಕ್ಲಾಸ್‌ಗೆ ಹೋಗಬೇಕು!’
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಾವೋ ಅವರನ್ನು ನೋಡಲು ಶಿಕ್ಷಕರು ಮತ್ತು ಸಹಪಾಠಿಗಳು ಆಗಾಗ ಭೇಟಿ ನೀಡುತ್ತಿದ್ದರು.

ಹೀಗೆ ಒಂದು ದಿನ ತನ್ನ ನೆಚ್ಚಿನ ಶಿಕ್ಷಕರು ಹಾಗೂ ಸ್ನೇಹಿತರೊಂದಿಗೆ ಮಾತನಾಡುವಾಗ ಯಾವೋ ಮನದಾಳದ ಆಸೆಯೊಂದನ್ನು ಹೇಳಿಕೊಂಡಿದ್ದಾಳೆ.

‘ನನಗೆ ಮತ್ತೊಮ್ಮೆ ನನ್ನ ಸ್ನೇಹಿತರ ಜೊತೆ ತರಗತಿಯಲ್ಲಿ ಕುಳಿತು ಪಾಠ ಕೇಳಬೇಕು. ಎಲ್ಲರನ್ನೂ ಮಾತನಾಡಿಸಬೇಕು. ಆದರೆ ನಾನು ಮತ್ತೆ ಶಾಲೆಗೆ ಹೋಗಲು ಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ’ ಎಂದು ಕಣ್ಣೀರಿಟ್ಟಿದ್ದಾಳೆ ಎಂದು ವರದಿಯಾಗಿದೆ.

ತೀವ್ರ ನೋವು, ಮೂಗಿನಿಂದ ರಕ್ತಸ್ರಾವ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆಕೆಗೆ ಆಸ್ಪತ್ರೆಯ ಹಾಸಿಗೆಯಿಂದ ಏಳುವುದೇ ಕಷ್ಟವಾಗಿತ್ತು.

ಆಕೆಯ ಮಾತು ಕೇಳಿದ ಶಿಕ್ಷಕರು ಮತ್ತು ಸಹಪಾಠಿಗಳು ಭಾವುಕರಾಗಿದ್ದಾರೆ.

ಆದರೆ ಅಲ್ಲಿಯೇ ಒಂದು ನಿರ್ಧಾರ ಮಾಡಿದ್ದಾರೆ.
ವಿದ್ಯಾರ್ಥಿನಿಗಾಗಿ ಆಸ್ಪತ್ರೆಯನ್ನೇ ಶಾಲೆಯನ್ನಾಗಿ ಮಾಡಿದ ಶಿಕ್ಷಕರು!
ಯಾವೋ ಶಾಲೆಗೆ ಬರಲು ಸಾಧ್ಯವಾಗದಿದ್ದರೆ ಶಾಲೆಯನ್ನೇ ಆಕೆಯ ಬಳಿಗೆ ಕರೆದುಕೊಂಡು ಹೋಗಬಾರದೇಕೆ?

ಈ ಆಲೋಚನೆಯೊಂದಿಗೆ ಶಿಕ್ಷಕರು ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದಾರೆ.

ಆಸ್ಪತ್ರೆಯ ಒಂದು ಕೊಠಡಿಯಲ್ಲಿ ತಾತ್ಕಾಲಿಕ ತರಗತಿ ವ್ಯವಸ್ಥೆ ಮಾಡಲಾಗಿದೆ.

ಶಾಲೆಯ ಬೆಂಚುಗಳು, ಬೋರ್ಡ್ ಹಾಗೂ ಪಾಠಕ್ಕೆ ಬೇಕಾದ ಸಾಮಗ್ರಿಗಳನ್ನು ಅಳವಡಿಸಲಾಗಿದೆ.

ಆಕೆಯ ನೆಚ್ಚಿನ ಸಹಪಾಠಿಗಳು, ಶಿಕ್ಷಕರು, ಮುಖ್ಯಶಿಕ್ಷಕರು ಮತ್ತು ಶಾಲೆಯ ಸಿಬ್ಬಂದಿಯನ್ನು ಅಲ್ಲಿಗೆ ಆಹ್ವಾನಿಸಲಾಗಿದೆ.

ಆಸ್ಪತ್ರೆಯ ಕೊಠಡಿ ಕೆಲವೇ ಕ್ಷಣಗಳಲ್ಲಿ ನಿಜವಾದ ತರಗತಿಯಂತೆ ಬದಲಾಗಿದೆ.
‘ಯಾರೂ ಅಳಬೇಡಿ.. ಇದು ಸಾಮಾನ್ಯ ಕ್ಲಾಸ್!’
ವಿಶೇಷ ತರಗತಿ ಆರಂಭವಾಗುವ ಮುನ್ನ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ ನೀಡಿದ್ದರು.

ಯಾರೂ ಅತಿಯಾಗಿ ಭಾವುಕರಾಗಬಾರದು. ಯಾವೋಗೆ ಇದು ಸಾಮಾನ್ಯ ಶಾಲಾ ದಿನದಂತೆಯೇ ಅನಿಸಬೇಕು. ಎಲ್ಲರೂ ಎಂದಿನಂತೆ ವರ್ತಿಸಬೇಕು ಎಂದು ತಿಳಿಸಿದ್ದರು.

ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಾವೋ ಅವರನ್ನು ಹಾಸಿಗೆಯ ಸಮೇತ ತರಗತಿಗೆ ಕರೆತರಲಾಗಿದೆ.

ತನ್ನ ಸುತ್ತಲೂ ಸ್ನೇಹಿತರು, ಎದುರಿಗೆ ಶಿಕ್ಷಕರು, ಕಣ್ಣಮುಂದೆ ಬೋರ್ಡ್ ಕಂಡಾಗ ಆಕೆಗೆ ಮತ್ತೆ ಶಾಲೆಗೆ ಬಂದ ಅನುಭವವಾಗಿದೆ.
ನೋವಿನ ನಡುವೆಯೂ ಪಾಠ ಕೇಳಿದ ಯಾವೋ!
ಆ ವಿಶೇಷ ತರಗತಿಯಲ್ಲಿ ಪುರಾತತ್ವಶಾಸ್ತ್ರ ಹಾಗೂ ಚೀನಾದ ಪ್ರಸಿದ್ಧ ಸ್ಯಾನ್‌ಕ್ಸಿಂಗ್‌ಡುಯಿ ಮ್ಯೂಸಿಯಂ ಕುರಿತು ಪಾಠ ಮಾಡಲಾಗಿದೆ.

ಜ್ವರ, ನೋವು ಹಾಗೂ ಉಸಿರಾಟದ ಸಮಸ್ಯೆಯ ನಡುವೆಯೂ ಯಾವೋ ಶಿಕ್ಷಕರ ಪಾಠವನ್ನು ಗಮನವಿಟ್ಟು ಕೇಳಿದ್ದಾಳೆ.

ಇತರ ವಿದ್ಯಾರ್ಥಿಗಳಂತೆ ಪಾಠದ ಕೆಲವು ಭಾಗಗಳನ್ನು ಪುನರಾವರ್ತಿಸಿದ್ದಾಳೆ ಎಂದು ವರದಿಯಾಗಿದೆ.

ಅನಾರೋಗ್ಯದಿಂದ ಹಲವು ತಿಂಗಳು ದೂರವಾಗಿದ್ದ ತರಗತಿಯ ಅನುಭವ ಆಕೆಗೆ ಮತ್ತೊಮ್ಮೆ ದೊರೆತಿತ್ತು.

ಶಿಕ್ಷಕರು ಮತ್ತು ಸಹಪಾಠಿಗಳು ಆಕೆಯ ಆಸೆ ನೆರವೇರಿಸಲು ಸಾಧ್ಯವಾದಷ್ಟು ಸಹಜ ವಾತಾವರಣ ನಿರ್ಮಿಸಿದ್ದರು.
ಕೊನೆಯ ತರಗತಿ ಮುಗಿಯುತ್ತಿದ್ದಂತೆ ಕಣ್ಣೀರಿಟ್ಟ ವಿದ್ಯಾರ್ಥಿನಿ!
ಪಾಠ ಮುಗಿದ ಬಳಿಕ ಯಾವೋ ಭಾವುಕರಾಗಿದ್ದಾಳೆ.

ತನ್ನ ಕೊನೆಯ ಆಸೆ ಈಡೇರಿದ ಸಂತೋಷದ ಜೊತೆಗೆ ಸ್ನೇಹಿತರು ಹಾಗೂ ಶಿಕ್ಷಕರಿಂದ ಮತ್ತೆ ದೂರವಾಗಬೇಕಾದ ನೋವು ಆಕೆಯನ್ನು ಕಾಡಿದೆ.

ಆಕೆಯ ಸ್ಥಿತಿ ಕಂಡು ಶಿಕ್ಷಕರು ಮತ್ತು ಸಹಪಾಠಿಗಳಿಗೂ ದುಃಖ ತಡೆಯಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

ಅಂದು ಆಸ್ಪತ್ರೆಯಲ್ಲಿ ನಡೆದದ್ದು ಕೇವಲ ಒಂದು ಪಾಠವಲ್ಲ. ವಿದ್ಯಾರ್ಥಿನಿಯ ಬದುಕಿನ ಅತ್ಯಂತ ಮಹತ್ವದ ಆಸೆಯೊಂದನ್ನು ಈಡೇರಿಸಿದ ಕ್ಷಣವಾಗಿತ್ತು.
ತರಗತಿಗೆ ಹಾಜರಾದ ಎರಡೇ ದಿನಕ್ಕೆ ದುರಂತ!
ಆಸ್ಪತ್ರೆಯಲ್ಲಿ ವಿಶೇಷ ತರಗತಿ ನಡೆದ ಎರಡೇ ದಿನಕ್ಕೆ ಯಾವೋ ಯಿಂಗ್‌ಬೈ ಕೊನೆಯುಸಿರೆಳೆದಿದ್ದಾಳೆ ಎಂದು ವರದಿಯಾಗಿದೆ.

ಆಕೆಯ ನಿಧನದ ಸುದ್ದಿ ತಿಳಿದು ಸಹಪಾಠಿಗಳು ಮತ್ತು ಶಿಕ್ಷಕರು ದುಃಖಿತರಾಗಿದ್ದಾರೆ.

ಮತ್ತೊಮ್ಮೆ ಚೇತರಿಸಿಕೊಂಡು ಶಾಲೆಗೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಈ ಸುದ್ದಿ ಆಘಾತ ತಂದಿದೆ.

ಬದುಕಿನ ಕೊನೆಯ ದಿನಗಳಲ್ಲಿ ಯಾವೋ ಬಯಸಿದ್ದು ದೊಡ್ಡ ಉಡುಗೊರೆಯನ್ನಲ್ಲ. ಸ್ನೇಹಿತರೊಂದಿಗೆ ಕುಳಿತು ಒಂದು ಪಾಠ ಕೇಳುವ ಅವಕಾಶವನ್ನಷ್ಟೇ. ಆಕೆಯ ಆ ಪುಟ್ಟ ಆಸೆಯನ್ನು ನೆರವೇರಿಸಿದ ಶಿಕ್ಷಕರು ಮತ್ತು ಸಹಪಾಠಿಗಳ ಮಾನವೀಯ ನಡೆ ಇದೀಗ ಎಲ್ಲರ ಮನಮುಟ್ಟುವಂತಿದೆ.

Leave a Reply

Your email address will not be published. Required fields are marked *