ಸಾಮಾಜಿಕ ಜಾಲತಾಣದಲ್ಲಿ ಮನಸ್ಸಿಗೆ ಬಂದಿದ್ದನ್ನೆಲ್ಲ ಪೋಸ್ಟ್ ಮಾಡುವಂತಿಲ್ಲ, ಅದು ಮುಕ್ತ ಪರವಾನಗಿ ಅಲ್ಲ, ಕರ್ನಾಟಕ ಹೈಕೋರ್ಟ್!!

ಸಾಮಾಜಿಕ ಜಾಲತಾಣದಲ್ಲಿ ಮನಸ್ಸಿಗೆ ಬಂದಿದ್ದನ್ನೆಲ್ಲ ಪೋಸ್ಟ್ ಮಾಡುವಂತಿಲ್ಲ, ಅದು ಮುಕ್ತ ಪರವಾನಗಿ ಅಲ್ಲ, ಕರ್ನಾಟಕ ಹೈಕೋರ್ಟ್!!

ಸಾಮಾಜಿಕ ಜಾಲತಾಣ ಖಾತೆ ಇದೆ ಎಂಬ ಕಾರಣಕ್ಕೆ ಮನಸ್ಸಿಗೆ ಬಂದಿದ್ದನ್ನೆಲ್ಲ ಪೋಸ್ಟ್ ಮಾಡಲು ಅದು ಮುಕ್ತ ಪರವಾನಗಿ ಅಲ್ಲ, ಪೋಸ್ಟ್‌ಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯೊಳಗಿರಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯಪಟ್ಟಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸುವ ಸಂದರ್ಭನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದ ಖಾತೆ ಇದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ತಮಗೆ ಇಷ್ಟ ಬಂದ ಯಾವುದೇ ಸಂದೇಶವನ್ನು ಪೋಸ್ಟ್ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಮೂಲಕ ಮಾನಹಾನಿ ಮತ್ತು ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಪೋಸ್ಟ್​ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯೊಳಗಿರಬೇಕು’
ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಬೆದರಿಕೆಯ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪ ಎದುರಿಸುತ್ತಿರುವ ಶುಭಾ ಎಂಬುವವರ ಅರ್ಜಿಯನ್ನು ವಜಾಗೊಳಿಸುವ ವೇಳೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಖಾತೆ ಹೊಂದಿರುವ ಮಾತ್ರಕ್ಕೆ ವ್ಯಕ್ತಿಯೊಬ್ಬರು ತಮಗೆ ಬೇಕಾದ ಯಾವುದೇ ಸಂದೇಶವನ್ನು ಪೋಸ್ಟ್ ಮಾಡಲು ಮುಕ್ತ ಪರವಾನಗಿ ಸಿಕ್ಕಿದೆ ಎಂದು ಭಾವಿಸಬಾರದು. ಪೋಸ್ಟ್ ಮಾಡುವ ಸಂದೇಶಗಳು ಸಂವಿಧಾನದ 19(1)(ಎ) ವಿಧಿಯಡಿ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿ ಹಾಗೂ ಮಿತಿಯೊಳಗೆ ಇರಬೇಕು ಎಂದು ನ್ಯಾಯಾಲಯ ಎಚ್ಚರಿಸಿದೆ.

ಇದೇ ದಿನ ಹೊರಡಿಸಿದ ಮತ್ತೊಂದು ಪ್ರತ್ಯೇಕ ಆದೇಶದಲ್ಲಿ, ಶುಭಾ ಮತ್ತು ಮೋಹನ್ ಎಂಬವರ ವಿರುದ್ಧ ಆನ್‌ಲೈನ್‌ನಲ್ಲಿ ಮಾನಹಾನಿ ಹಾಗೂ ಕಿರುಕುಳದ ಅಭಿಯಾನ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಎನ್‌ಎಸ್ ಸೆಕ್ಷನ್ 353(2) ಅಡಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ವಜಾಗೊಳಿಸಿದೆ. ತಮ್ಮ ವಿರುದ್ಧ ತಿರುಚಿದ ಹಾಗೂ ಸುಳ್ಳು ಮಾಹಿತಿಯುಳ್ಳ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಅಲ್ಲದೆ, ತಾವು ಕ್ರೈಸ್ತ ಸಮುದಾಯಕ್ಕೆ ಸೇರಿದವರು ಎಂಬ ಸುಳ್ಳು ಆರೋಪಗಳನ್ನು ಹರಡುವ ಮೂಲಕ ತಮ್ಮ ವಿರುದ್ಧ ದ್ವೇಷ ಹುಟ್ಟಿಸುವ ಪ್ರಯತ್ನ ಮಾಡಲಾಗಿದೆ ಎಂದು ಥಾನುಷಾ ಎಂ. ಶೆಟ್ಟಿ ಎಂಬವರು ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ದೂರುದಾರರು ಅತ್ಯಾಚಾರ ಎಸಗಿದ್ದಾರೆ, ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ, ಸೌಜನ್ಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, ಹಿಂದೂ ದೇವಾಲಯಗಳನ್ನು ಅವಮಾನಿಸಿದ್ದಾರೆ ಹಾಗೂ ಪೋಕ್ಸೊ ಕಾಯ್ದೆಯಡಿ ಅಪರಾಧಗಳನ್ನು ಎಸಗಿದ್ದಾರೆ ಎಂಬ ಆರೋಪಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಆರೋಪಗಳು ಪ್ರಾಥಮಿಕ ತನಿಖೆ ಮತ್ತು ವಿಚಾರಣೆಗೆ ಅರ್ಹವಾಗಿವೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್, ವಾಟ್ಸ್‌ಆ್ಯಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳು ಜನರ ಅಭಿಪ್ರಾಯ ವ್ಯಕ್ತಪಡಿಸುವ ಪ್ರಮುಖ ವೇದಿಕೆಗಳಾಗಿವೆ. ಆದರೆ ಈ ವೇದಿಕೆಗಳನ್ನು ಬಳಸುವಾಗ ಪ್ರತಿಯೊಬ್ಬರೂ ಸಾಮಾಜಿಕ ಹಾಗೂ ಕಾನೂನಾತ್ಮಕ ಜವಾಬ್ದಾರಿಯನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ.

ಹೈಕೋರ್ಟ್ ಹೇಳಿದ್ದೇನು?
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಸಾಮಾಜಿಕ ಜಾಲತಾಣಗಳ ಬಳಕೆ ಕುರಿತು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರುವುದರಿಂದ ಯಾವುದೇ ಸಂದೇಶವನ್ನು ಬೇಕಾಬಿಟ್ಟಿಯಾಗಿ ಪ್ರಕಟಿಸುವ ಸ್ವಾತಂತ್ರ್ಯ ಸಿಗುವುದಿಲ್ಲ. ಸಂವಿಧಾನದ 19(1)(ಎ) ವಿಧಿಯಡಿ ದೊರೆತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯೊಳಗೆ ಸಂದೇಶಗಳನ್ನು ಪ್ರಕಟಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳು ತನಿಖೆ ನಡೆಸುವಷ್ಟು ಗಂಭೀರವಾಗಿವೆ. ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿದೆ.

ಧರ್ಮಸ್ಥಳ ವಿವಾದದ ಹಿನ್ನೆಲೆಯಲ್ಲೂ ಮತ್ತೊಂದು ಪ್ರಕರಣ
ಶುಭಾ ಹಾಗೂ ಮೋಹನ್ ಎಂಬುವವರ ವಿರುದ್ಧ ದಾಖಲಾಗಿದ್ದ ಮತ್ತೊಂದು ಪ್ರಕರಣದಲ್ಲಿಯೂ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

ತಿರುಚಿದ ಫೋಟೋಗಳು, ಸುಳ್ಳು ಸುದ್ದಿಗಳು ಹಾಗೂ ಧಾರ್ಮಿಕ ದ್ವೇಷಕ್ಕೆ ಕಾರಣವಾಗುವಂತಹ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದರು.

ಧರ್ಮಸ್ಥಳ ದೇವಸ್ಥಾನವನ್ನು ಬೆಂಬಲಿಸಿದ ಕಾರಣಕ್ಕೆ ದ್ವೇಷದಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಆದರೆ ಎರಡು ಗುಂಪುಗಳ ನಡುವೆ ವಿವಾದವಿದೆ ಎಂಬ ಕಾರಣಕ್ಕೆ ಕಾನೂನುಬಾಹಿರ ಕೃತ್ಯಗಳಿಗೆ ವಿನಾಯಿತಿ ಸಿಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ

Leave a Reply

Your email address will not be published. Required fields are marked *