ಚಿಕಾಗೋ: ಪಾಕಿಸ್ತಾನ ಭಾರತದ ವಿರುದ್ಧ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ ಮಾತ್ರ ಆ ದೇಶದೊಂದಿಗೆ ಮಾತುಕತೆ ನಡೆಸಲು ಸಾಧ್ಯ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಪಾಕಿಸ್ತಾನಿ ವಿದ್ಯಾರ್ಥಿಯೊಬ್ಬರು ಭಾರತ–ಪಾಕಿಸ್ತಾನ ಸಂಬಂಧಗಳ ಕುರಿತು ಪ್ರಶ್ನಿಸಿದರು. ಪರಸ್ಪರ ಆರೋಪಗಳನ್ನು ಬದಿಗಿಟ್ಟು ಸಾಮಾನ್ಯ ಹಿತಾಸಕ್ತಿಗಳಿಗಾಗಿ ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡಲು ಸಾಧ್ಯವೇ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಗೆ ಅವಕಾಶವಿದೆ. ಆದರೆ, ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದು ಪ್ರಮುಖ ಸಮಸ್ಯೆಯಾಗಿದೆ. ಮುಗ್ಧ ಜನರು ಭಯೋತ್ಪಾದಕ ದಾಳಿಗಳಿಗೆ ಬಲಿಯಾಗುತ್ತಿರುವಾಗ ಮಾತುಕತೆ ನಡೆಸುವುದು ಸಾಧ್ಯವಿಲ್ಲ. ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ ಮಾತುಕತೆಗೆ ದಾರಿ ತೆರೆಯಲಿದೆ ಎಂದರು.

ಇಸ್ರೇಲ್ ಜೊತೆ ಸಂಬಂಧ, ಗಾಜಾ ವಿಚಾರದಲ್ಲಿ ವಿರೋಧ
ಭಾರತ ಇಸ್ರೇಲ್ ಜೊತೆ ಉತ್ತಮ ಸಂಬಂಧ ಹೊಂದಿರಬೇಕು ಮತ್ತು ರಕ್ಷಣಾ ಸಹಕಾರ ಮುಂದುವರಿಸಬೇಕು ಎಂಬುದು ತಮ್ಮ ನಿಲುವು ಎಂದು ರಾಹುಲ್ ಹೇಳಿದರು. ಆದರೆ, ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಗಳ ಬಗ್ಗೆ ಭಾರತ ಮೌನವಾಗಿರಬಾರದು ಎಂದರು.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯನ್ನು ಖಂಡಿಸಿದ ಅವರು, ಮುಗ್ಧ ನಾಗರಿಕರ ಹತ್ಯೆಯನ್ನೂ ವಿರೋಧಿಸಿದರು. ಅದೇ ರೀತಿ ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಗಳನ್ನೂ ಖಂಡಿಸಬೇಕು. ಒಂದು ತಪ್ಪು ಮತ್ತೊಂದು ತಪ್ಪನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಭಾರತದ ವಿದೇಶಾಂಗ ನೀತಿ ಯಾವುದೇ ದೇಶದ ಒತ್ತಡಕ್ಕೆ ಒಳಗಾಗದೆ ರಾಷ್ಟ್ರೀಯ ಹಿತಾಸಕ್ತಿಗಳನ್ನು ಆಧರಿಸಿರಬೇಕು. ಅಮೆರಿಕ, ಇಸ್ರೇಲ್, ರಷ್ಯಾ ಅಥವಾ ಚೀನಾ ಸೇರಿದಂತೆ ಯಾವುದೇ ದೇಶದ ಒತ್ತಡಕ್ಕೆ ಮಣಿಯದೆ ಭಾರತ ತನ್ನ ನಿಲುವನ್ನು ವ್ಯಕ್ತಪಡಿಸಬೇಕು ಎಂದು ಪ್ರತಿಪಾದಿಸಿದರು.
ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರತ ಸಕ್ರಿಯವಾಗಲಿ
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಮಾತುಕತೆಗಳ ವಿಚಾರದಲ್ಲೂ ಭಾರತದ ಪಾತ್ರದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಪಾಕಿಸ್ತಾನವು ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವಾಗ ಭಾರತ ಕೇವಲ ಪ್ರೇಕ್ಷಕನಂತೆ ಉಳಿದಿರುವುದು ಆಶ್ಚರ್ಯ ತಂದಿದೆ ಎಂದರು.
ಸ್ವಾತಂತ್ರ್ಯಾನಂತರ ಭಾರತ ತನ್ನದೇ ಆದ ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕ ದೃಷ್ಟಿಕೋನ ಹೊಂದಿತ್ತು. ಜಾಗತಿಕ ವಿಚಾರಗಳಲ್ಲಿ ಭಾರತ ಹೆಚ್ಚು ಸಕ್ರಿಯ ಪಾತ್ರ ವಹಿಸಬೇಕು. ಆದರೆ, ಇತ್ತೀಚೆಗೆ ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವನಿ ಪರಿಣಾಮಕಾರಿಯಾಗಿ ಕೇಳಿಸುತ್ತಿಲ್ಲ ಎಂದು ಟೀಕಿಸಿದರು.
ಚುನಾವಣೆ ಬಹಿಷ್ಕರಿಸುವುದಿಲ್ಲ
ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳ ನಡುವೆಯೂ ಕಾಂಗ್ರೆಸ್ ಚುನಾವಣೆಗಳನ್ನು ಬಹಿಷ್ಕರಿಸುವುದಿಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.
ಚುನಾವಣೆಯಲ್ಲಿ ಸ್ಪರ್ಧಿಸದೆ ಇರುವುದರಿಂದ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ. ಪಕ್ಷದ ಕಾರ್ಯಕರ್ತರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲದಂತಾಗುತ್ತದೆ. ಹೀಗಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಮುಂದುವರಿಸಲಿದೆ. ಚುನಾವಣಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಜನರ ಮುಂದೆ ಬಹಿರಂಗಪಡಿಸುವುದೇ ಪಕ್ಷದ ಉದ್ದೇಶ ಎಂದರು.
2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೇ ಕೆಲವು ಅಕ್ರಮಗಳ ಬಗ್ಗೆ ಅನುಮಾನವಿತ್ತು. ಆದರೆ, ಸಾಕಷ್ಟು ಪುರಾವೆಗಳಿಲ್ಲದ ಕಾರಣ ಆಗ ಮಾತನಾಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು. ಭಾರತೀಯ ಪ್ರಜಾಪ್ರಭುತ್ವ ಪವಿತ್ರವಾಗಿದ್ದು, ಅದರ ವ್ಯವಸ್ಥೆಯಲ್ಲಿ ಸಮಸ್ಯೆಗಳಿವೆ ಎಂದು ಹೇಳಲು ಬಲವಾದ ಪುರಾವೆಗಳು ಅಗತ್ಯ ಎಂದರು.
ಚುನಾವಣೆಯಿಂದ ಹಿಂದೆ ಸರಿಯದೆ ಪ್ರಜಾಪ್ರಭುತ್ವದ ವ್ಯವಸ್ಥೆಯೊಳಗೇ ಉಳಿದು ಹೋರಾಟ ನಡೆಸಬೇಕು ಎಂದು ಅವರು ಪ್ರತಿಪಾದಿಸಿದರು. ಚಿಕಾಗೋ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ರಾಬರ್ಟ್ ಪೇಪ್ ಅವರೊಂದಿಗೆ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿ ಈ ಅಭಿಪ್ರಾಯಗಳನ್ನು ಹಂಚಿಕೊಂಡರು.
