ಬೆಂಗಳೂರು: ರೈತರ ಆದಾಯ ಹೆಚ್ಚಿಸಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸುವ ಉದ್ದೇಶದಿಂದ ₹75 ಕೋಟಿ ವೆಚ್ಚದಲ್ಲಿ ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಗುರುವಾರ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳ ಬಗ್ಗೆ ಮಾಹಿತಿ ಒದಗಿಸಿದ್ದಾರೆ.
ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಒಂದು ಲಕ್ಷ ಹೊಸ ಮನೆಗಳನ್ನು ನಿರ್ಮಿಸುವ ಗುರಿಗೂ ಸಂಪುಟ ಒಪ್ಪಿಗೆ ನೀಡಿದೆ. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ನೀಡುವ ಸಹಾಯಧನವನ್ನು ₹1.20 ಲಕ್ಷದಿಂದ ₹2 ಲಕ್ಷಕ್ಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ₹2 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿಯವರ ‘ನಮ್ಮ ಮನೆ’ ಯೋಜನೆಯಡಿ ರಾಜ್ಯದ ಶ್ರಮಿಕರಿಗೆ ಶೇ.50ರ ರಿಯಾಯಿತಿ ದರದಲ್ಲಿ 30×40 ಅಡಿ ಅಳತೆಯ 50 ಸಾವಿರ ನಿವೇಶನಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.

ಸಾಲದ ಬಡ್ಡಿ ₹236 ಕೋಟಿ ಮನ್ನಾ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಏಳು ನಿಗಮಗಳ ವಿವಿಧ ಯೋಜನೆಗಳಡಿ 2012-13ರಿಂದ 2020-21ರವರೆಗೆ ನೀಡಿರುವ ಸಾಲದ ಅಸಲನ್ನು ಪೂರ್ಣವಾಗಿ ಮರುಪಾವತಿಸುವ ಫಲಾನುಭವಿಗಳಿಗೆ ಬಡ್ಡಿ ಮನ್ನಾ ಮಾಡಲು ನಿರ್ಧರಿಸಲಾಗಿದೆ. ಈ ಒಂದಾವರ್ತಿ ತೀರುವಳಿ ಯೋಜನೆಯಡಿ ಒಟ್ಟು ₹236.04 ಕೋಟಿ ಬಡ್ಡಿ ಮೊತ್ತ ಮನ್ನಾ ಆಗಲಿದೆ.
ಅಲ್ಲದೆ, 2025-26ರ ಆಯವ್ಯಯದಲ್ಲಿ ಘೋಷಿಸಿದ್ದಂತೆ ಸುಟ್ಟ ಗಾಯಗಳಿಂದ ಬದುಕುಳಿದವರ ತಡೆಗಟ್ಟುವಿಕೆ, ಚಿಕಿತ್ಸೆ, ಪುನರ್ವಸತಿ ಮತ್ತು ಸಾಮಾಜಿಕ ಪುನರ್ಸಂಘಟನೆಗಾಗಿ ‘ಕರ್ನಾಟಕ ಸುಟ್ಟ ಗಾಯಗಳಿಂದ ಬದುಕುಳಿದವರ ನೀತಿ-2025’ ಜಾರಿಗೆ ಸಂಪುಟ ಅನುಮೋದನೆ ನೀಡಿದೆ.
5 ಸಾವಿರ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್
ಅಲ್ಪಸಂಖ್ಯಾತ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು 5 ಸಾವಿರ ವಿದ್ಯಾರ್ಥಿಗಳಿಗೆ ₹25 ಕೋಟಿ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಲ್ಯಾಪ್ಟಾಪ್ಗಳನ್ನು ಖರೀದಿಸಿ ವಿತರಿಸಲು ನಿರ್ಧರಿಸಲಾಗಿದೆ.
2026-27ನೇ ಸಾಲಿನಲ್ಲಿ 1.39 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಮವಸ್ತ್ರ ಒದಗಿಸಲು ₹27.97 ಕೋಟಿ ಅನುದಾನ ಮಂಜೂರು ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
ಹಾಸನ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಅನುದಾನ
ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ವೆಚ್ಚವನ್ನು ₹193.65 ಕೋಟಿಯಿಂದ ₹542.96 ಕೋಟಿಗೆ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ. ಇದರಿಂದ ಹೆಚ್ಚುವರಿಯಾಗಿ ₹349.31 ಕೋಟಿ ಅನುದಾನದ ಅಗತ್ಯವಿದ್ದು, ಹೆಚ್ಚುವರಿ ಜಮೀನು ಸ್ವಾಧೀನಕ್ಕೂ ಒಪ್ಪಿಗೆ ನೀಡಲಾಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಪ್ರಜಾಸೌಧ ನಿರ್ಮಾಣದ ಎರಡನೇ ಹಂತದ ಕಾಮಗಾರಿಗೆ ₹5 ಕೋಟಿ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಮೊದಲ ಹಂತದ ಕಾಮಗಾರಿಗೆ ₹10 ಕೋಟಿ ವೆಚ್ಚದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಾರ್ಡ್ 71ರ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆ ಆರಂಭಿಸಲು ಸಂಪುಟ ಒಪ್ಪಿಗೆ ನೀಡಿದೆ.
ಬಿ-ಸ್ಮೈಲ್ ಸಂಸ್ಥೆಯ ಮೂಲಕ ಹೊಸ ವೈಟ್ಟಾಪಿಂಗ್ ಕಾಮಗಾರಿಗಳ ಮೊದಲ ಹಂತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಕೆ.ಆರ್. ಪುರಂ ಮೆಟ್ರೋ ನಿಲ್ದಾಣದವರೆಗೆ ಹೊರವರ್ತುಲ ರಸ್ತೆಯನ್ನು ಜಾಗತಿಕ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯ ₹486.79 ಕೋಟಿ ಪರಿಷ್ಕೃತ ಅಂದಾಜಿಗೂ ಅನುಮೋದನೆ ನೀಡಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಸಿ, ಒಣ, ನೈರ್ಮಲ್ಯ ಹಾಗೂ ರಸ್ತೆ ಗುಡಿಸುವಿಕೆಯಿಂದ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆಗಾಗಿ ಈಗಾಗಲೇ ಅನುಮೋದನೆಯಾಗಿರುವ 10 ಪ್ಯಾಕೇಜ್ಗಳ ₹1,379.62 ಕೋಟಿ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ.
ಕೆಂಗೇರಿ ಬಳಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸುತ್ತಿರುವ ವಾಣಿಜ್ಯ ಸಂಕೀರ್ಣ ಮತ್ತು ಮಲ್ಟಿಫ್ಲೆಕ್ಸ್ ಕಟ್ಟಡದ ಎರಡನೇ ಹಂತದ ಕಾಮಗಾರಿಗೆ ₹68.50 ಕೋಟಿ ವೆಚ್ಚ ಮಾಡಲು ಅನುಮೋದನೆ ನೀಡಲಾಗಿದೆ. ತಿಪಟೂರು ನಗರಕ್ಕೆ ನೊಣವಿನಕೆರೆಯಿಂದ ಕುಡಿಯುವ ನೀರು ಪೂರೈಸುವ ಹೆಚ್ಚುವರಿ ಯೋಜನೆಯ ₹39.35 ಕೋಟಿ ಅಂದಾಜಿಗೂ ಒಪ್ಪಿಗೆ ದೊರೆತಿದೆ.
9 ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ₹10,252 ಕೋಟಿ
ಕೆಶಿಪ್-4 ಯೋಜನೆಯಡಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನೊಂದಿಗೆ ₹10,252.58 ಕೋಟಿ ವೆಚ್ಚದಲ್ಲಿ ಒಂಬತ್ತು ರಾಜ್ಯ ಹೆದ್ದಾರಿಗಳ ಒಟ್ಟು 730.01 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಂಪುಟ ನಿರ್ಧರಿಸಿದೆ.
ವಿಶ್ವಬ್ಯಾಂಕ್ ಸಹಯೋಗದಲ್ಲಿ ₹1,700 ಕೋಟಿ ವೆಚ್ಚದ ಕರ್ನಾಟಕ ವಿದ್ಯುತ್ ಬಸ್ ಕಾರ್ಯಕ್ರಮ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಅಗ್ನಿಶಾಮಕ, ಪೊಲೀಸ್ ಇಲಾಖೆಗೆ ವಾಹನಗಳು
ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಅನಾಹುತಗಳನ್ನು ತಡೆಗಟ್ಟಲು 52ರಿಂದ 54 ಮೀಟರ್ ಎತ್ತರಕ್ಕೆ ತಲುಪಬಲ್ಲ ಏರಿಯಲ್ ಲ್ಯಾಡರ್ ಪ್ಲಾಟ್ಫಾರಂ ವಾಹನವನ್ನು ₹16 ಕೋಟಿ ವೆಚ್ಚದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ.
ಪೊಲೀಸ್ ಪಡೆಗಳ ಆಧುನೀಕರಣ ಯೋಜನೆಯಡಿ 134 ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (Emergency Response Support System) ವಾಹನಗಳನ್ನು ₹11 ಕೋಟಿ ವೆಚ್ಚದಲ್ಲಿ ಖರೀದಿಸಲು ಸಂಪುಟ ಒಪ್ಪಿಗೆ ನೀಡಿದೆ.
ಹುಬ್ಬಳ್ಳಿಯ ಜಯದೇವ ಹೃದ್ರೋಗ ಕೇಂದ್ರಕ್ಕೆ ಅಗತ್ಯವಿರುವ ಹೆಚ್ಚುವರಿ ಉಪಕರಣಗಳನ್ನು ಖರೀದಿಸಲು ₹36.597 ಕೋಟಿ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ವಿಧೇಯಕಗಳಿಗೆ ಸಂಪುಟ ಅಸ್ತು
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕೆಲವು ಕಾನೂನುಗಳ (ತಿದ್ದುಪಡಿ) ವಿಧೇಯಕ-2026ಕ್ಕೆ ಅನುಮೋದನೆ ನೀಡಲಾಗಿದ್ದು, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಮೂರನೇ ತಿದ್ದುಪಡಿ) ವಿಧೇಯಕ-2026 ಹಾಗೂ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ-1961ರ ಎರಡನೇ ತಿದ್ದುಪಡಿ ವಿಧೇಯಕ-2026ಕ್ಕೂ ಸಂಪುಟ ಅನುಮೋದನೆ ನೀಡಿದೆ.
ಇದಲ್ಲದೆ, ಯಶವಂತಪುರದಿಂದ ಹಳೆ ಮದ್ರಾಸ್ ರಸ್ತೆ ಹಾಗೂ ಮಾರೇನಹಳ್ಳಿ ಮುಖ್ಯರಸ್ತೆಯಿಂದ ಕನಕಪುರ ಮುಖ್ಯರಸ್ತೆಯವರೆಗೆ ‘ಸಿ’ ವರ್ಗದ ಎರಡು ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣಕ್ಕೆ ಸಂಬಂಧಿಸಿದ ನಿಧಿ ರಚನೆಯ ಆದೇಶ ಮಾರ್ಪಾಡು ಮಾಡಲು ನಿರ್ಧರಿಸಲಾಗಿದೆ.
ಭಾರತ್ ಜೋಡೋ ಯುವಸಂಘ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಮಟ್ಟದ ಯುವ ಸಮಿತಿ ರಚಿಸುವುದು ಹಾಗೂ ಪೂರ್ಣಾವಧಿ ಸಂಯೋಜಕರು ಮತ್ತು ಪ್ರೇರಕರನ್ನು ನೇಮಿಸಲು ಸಂಪುಟ ಅನುಮೋದನೆ ನೀಡಿದೆ.
