ಚೈತ್ರ ನವರಾತ್ರಿಯ ಕೊನೆಯ ದಿನವಾದ ರಾಮನವಮಿಯನ್ನು(Rama Navami ) ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ದಿನ ವಿಷ್ಣುವು ರಾಮನ ಅವತಾರ ತಾಳಿದನು ಎಂಬ ನಂಬಿಕೆ ಇದೆ. ಅದಲ್ಲದೆ ಯುಗಾದಿ ಬಳಿಕ ಬರುವ ಮೊದಲ ಹಬ್ಬವಾದ್ದರಿಂದ ಇದಕ್ಕೆ ಯುಗಾದಿಯಷ್ಟೇ ಪ್ರಾಮುಖ್ಯತೆ ನೀಡಲಾಗುತ್ತದೆ. ಅದರಲ್ಲಿಯೂ ಶ್ರೀರಾಮ, ಕೋಟ್ಯಾಂತರ ಭಕ್ತರ ಆರಾಧ್ಯ ದೇವನಾದ್ದರಿಂದ ಆತನ ಜನ್ಮ ದಿನವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ತ್ರೇತಾ ಯುಗದಲ್ಲಿ ರಾಜ ದಶರಥ ಮತ್ತು ಅವನ ಮೊದಲ ಪತ್ನಿ, ರಾಣಿ ಕೌಸಲ್ಯೆಗೆ ಜನಿಸಿದ ಶ್ರೀರಾಮನ ಜನ್ಮದಿನವನ್ನೇ ನಾವು ಪ್ರತಿವರ್ಷ ರಾಮನವಮಿ ಎಂದು ಆಚರಣೆ ಮಾಡುತ್ತೇವೆ.
ಈ ಬಾರಿ ಏ. 06 ಭಾನುವಾರದಂದು ಈ ದಿನವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಆದರೆ ಈ ಹಬ್ಬ ಎಲ್ಲಾ ಹಬ್ಬಗಳಂತೆ ಅಲ್ಲ, ರಾಮನ ನೈವೇದ್ಯಕ್ಕೆ ಹೋಳಿಗೆ, ಚಕ್ಕುಲಿಗಳಿರುವುದಿಲ್ಲ ಬದಲಾಗಿ ಕೋಸಂಬರಿ, ಪಾನಕಗಳಿರುತ್ತವೆ. ಯಾಕೆ ಹೀಗೆ? ಈ ದಿನ ಮಾಡುವ ಪಾನಕವನ್ನು ಸೇವನೆ ಮಾಡಲೇಬೇಕು ಎಂಬುದಕ್ಕೆ ಕಾರಣವಿದೆಯೇ ತಿಳಿದುಕೊಳ್ಳಿ.
ರಾಮನವಮಿ ದಿನ ಶ್ರೀ ರಾಮನನ್ನು ಭಕ್ತಿಯಿಂದ ಪೂಜಿಸಿದರೆ ಜೀವನದಲ್ಲಿ ಬರುವಂತಹ ಕಷ್ಟ, ಕಾರ್ಪಣ್ಯಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನ ಭಕ್ತಿಯಿಂದ ಪೂಜೆ ಮಾಡಿ ರಾಮನನ್ನು ಭಜಿಸಿದಲ್ಲಿ ಮನೆಯಲ್ಲಿ ನೆಮ್ಮದಿ, ಸಂಪತ್ತಿಗೆ ಬರಗಾಲ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಈ ಹಬ್ಬಕ್ಕೆ ದೇವರ ನೈವೇದ್ಯ ಮಾಡಲು ಚಕ್ಕುಲಿ, ಹೋಳಿಗೆ, ಕಡುಬು ಮಾಡಬೇಕಾಗಿಲ್ಲ ಬದಲಾಗಿ ಬೆಲ್ಲದ ಪಾನಕ, ಹೆಸರುಬೇಳೆ ಕೋಸಂಬರಿ ಅಥವಾ ಕಿಚಡಿ, ಮಜ್ಜಿಗೆಯನ್ನು ನೈವೇದ್ಯ ಮಾಡಿದರೆ ರಾಮ ಸಂತುಷ್ಠನಾಗುತ್ತಾನೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಾಗಾಗಿ ಈ ದಿನ ವಿವಿಧ ರೀತಿಯ ಪಾನಕ, ಕಿಚಡಿಗಳನ್ನು ಮಾಡುವ ಮೂಲಕ ರಾಮನಿಗೆ ನೈವೇದ್ಯ ಮಾಡಿ ಬಳಿಕ ರಾಮನ ಭಕ್ತರಿಗೆ ಅವುಗಳನ್ನು ವಿತರಿಸಲಾಗುತ್ತದೆ. ಆದರೆ ಯಾಕೆ ಈ ರೀತಿಯ ಆಹಾರಗಳನ್ನು ದೇವರಿಗೆ ಇಡಬೇಕು? ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆಯೇ.
ಸಾಮಾನ್ಯವಾಗಿ ವರುಷದ ಮೊದಲ ಮಾಸ ಅಂದರೆ ಚೈತ್ರಮಾಸ ಯಾವಾಗಲೂ ಉಷ್ಣಾಂಶದಿಂದ ಕೂಡಿರುತ್ತದೆ. ಈ ಸಮಯದಲ್ಲಿ ಬಿಸಿಲಿನ ಧಗೆಯಿಂದ ಜನರು ತತ್ತರಿಸುತ್ತಿರುತ್ತಾರೆ. ಹಾಗಾಗಿ ಅತಿಯಾದ ಸಿಹಿ ತಿನ್ನುವುದು ಜೀರ್ಣಕ್ರಿಯೆ ತೊಂದರೆ ಮಾಡಬಹುದು ಜೊತೆಗೆ ಸೆಖೆಯನ್ನು ಹೆಚ್ಚಿಸಬಹುದು. ಹಾಗಾಗಿ ತಣ್ಣನೆಯ ಬೆಲ್ಲದ ಪಾನಕ, ಮಜ್ಜಿಗೆ ಅಥವಾ ಹೆಸರುಬೇಳೆ ಕಿಚಡಿ ಅಥವಾ ಕೋಸಂಬರಿಯ ಸೇವನೆ ಮಾಡುವುದರಿಂದ ದೇಹ ತಂಪಾಗುತ್ತದೆ. ಇವು ಬಿಸಿಯಾಗಿರುವ ನಮ್ಮ ದೇಹವನ್ನು ತಂಪು ಮಾಡಿ ಆರೋಗ್ಯ ಚೆನ್ನಾಗಿರುವಂತೆ ಮಾಡುತ್ತದೆ. ಅಲ್ಲದೆ ಹೆಸರುಬೇಳೆ ಕಿಚಡಿ ಅಥವಾ ಕೋಸಂಬರಿಗಳಲ್ಲಿ ಬಳಕೆ ಮಾಡುವ ಎಲ್ಲಾ ಪದಾರ್ಥಗಳು ಕೂಡ ದೇಹಕ್ಕೆ ಬಹಳ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಜೊತೆಗೆ ಬೇಸಿಗೆಯ ಉರಿಯಿಂದ ದೇಹ ಒಳಗಿನಿಂದ ತಂಪಾಗುತ್ತದೆ ಹಾಗಾಗಿ ರಾಮನವಮಿಯ ದಿನ ಬೆಲ್ಲದ ಪಾನಕ, ಮಜ್ಜಿಗೆ ಈ ರೀತಿಯ ಖಾದ್ಯಗಳನ್ನೇ ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ.
ಇನ್ನು ಧಾರ್ಮಿಕ ನಂಬಿಕೆಯ ಪ್ರಕಾರ ವಿಷ್ಣು ಪಾನಕ ಪ್ರೀಯ. ಇದನ್ನು ಪುರಾಣಗಳಲ್ಲಿಯೂ ವರ್ಣಿಸಲಾಗಿದೆ. ರಾಮ ಅವನ ಅವತಾರವಾಗಿರುವುದರಿಂದ ಅವನಿಗೆ ಪಾನಕ, ಮಜ್ಜಿಗೆಯನ್ನು ಅರ್ಪಣೆ ಮಾಡಲಾಗುತ್ತದೆ.
Log in to write reviews