No Ads

ರಶ್ಮಿಕಾ ಮಂದಣ್ಣಗೆ ಬೆದರಿಕೆ; ಅಮಿತ್ ಶಾಗೆ ಕೊಡವರ ದೂರಿನ ಪತ್ರ!

ಮನರಂಜನೆ 2025-03-10 12:59:12 118
post

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಬಹಳ ಟೀಕೆಗೆ ಗುರಿಯಾಗಿದ್ದಾರೆ. ಶಾಸಕ ರವಿಕುಮಾರ್ ಗಾಣಿಗ,ರಶ್ಮಿಕಾ ಮಂದಣ್ಣ ವಿರುದ್ಧ ಸತತ ಟೀಕೆಗಳನ್ನು ಮಾಡಿದ್ದು, ಕಾರ್ಯಕ್ರಮಕ್ಕೆ ಕರೆಯಲು ಹೋದರೆ ಕರ್ನಾಟಕ ಎಲ್ಲಿದೆ ಎಂದು ರಶ್ಮಿಕಾ ಕೇಳಿದ್ದರು.  ಆಕೆಗೆ ಸರಿಯಾಗಿ ಬುದ್ಧಿ ಕಲಿಸಬೇಕಿದೆ ಎಂದಿದ್ದರು. ಮುಂಬೈನ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ತಮ್ಮನ್ನು ತಾವು ಹೈದರಾಬಾದ್​ನವರು ಎಂದು ಪರಿಚಯಿಸಿಕೊಂಡಿದ್ದು ಸಹ ಸಖತ್ ಟೀಕೆಗೆ ಕಾರಣವಾಗಿತ್ತು. ರಶ್ಮಿಕಾ ವಿರುದ್ಧ ಶಾಸಕ ರವಿಕುಮಾರ್, ಕನ್ನಡ ರಕ್ಷಣಾ ಪಡೆಗಳು ಟೀಕೆ, ನಿಂದನೆ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೆ ಕೊಡವ ನ್ಯಾಷನಲ್ ಕೌನ್ಸಿಲ್​ನವರು ನಟಿಯ ಬೆಂಬಲಕ್ಕೆ ಬಂದಿದ್ದಾರೆ.

ಕೊಡಲ ನ್ಯಾಷನಲ್ ಕೌನ್ಸಿಲ್​ನ ಅಧ್ಯಕ್ಷ ಎನ್​ಯು ನಾಚಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದು ರಶ್ಮಿಕಾ ಮಂದಣ್ಣಗೆ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದಾರೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದ ರಶ್ಮಿಕಾ ಮಂದಣ್ಣ ತಮ್ಮ ಕಠಿಣ ಶ್ರಮ ಮತ್ತು ಪರಿಶ್ರಮದಿಂದ ಇಂದು ಭಾರತೀಯ ಚಿತ್ರರಂಗದಲ್ಲಿ ಅಪ್ರತಿಮ ಸ್ಥಾನ ಸಂಪಾದನೆ ಮಾಡಿದ್ದಾರೆ. ರಶ್ಮಿಕಾರ ಪರಿಶ್ರಮ, ಪ್ರತಿಭೆಯನ್ನು ಅರಿಯದ ಕೆಲವರು ಅನವಶ್ಯಕವಾಗಿ ಟೀಕೆ ಮಾಡುತ್ತಿದ್ದಾರೆ, ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದು ಬೆದರಿಕೆಗೆ ಸಮ ಎಂದು ಅವರು ಆರೋಪ ಮಾಡಿದ್ದಾರೆ.

‘ರಶ್ಮಿಕಾ ಮಂದಣ್ಣ ಒಬ್ಬ ಶ್ರೇಷ್ಠ ನಟಿ, ಅವರ ಸ್ವಂತ ಆಯ್ಕೆ ಮತ್ತು ಸ್ವಾತಂತ್ರ್ಯಗಳನ್ನು ನಾವು ಗೌರವಿಸಬೇಕು. ಯಾರದ್ದೋ ಸೂಚನೆಯಂತೆ, ಯಾರದ್ದೋ ಮರ್ಜಿಯಂತೆ ನಡೆದುಕೊಳ್ಳಬೇಕು ಎಂದು ನಾವು ಒತ್ತಾಯಿಸಬಾರದು. ಒಂದೊಮ್ಮೆ ಹೀಗೆ ಮಾಡಿದರೆ ಅದನ್ನು ಕೊಡವ ಫೋಬಿಯಾ ಎಂದು ಗುರುತಿಸಬೇಕಾಗುತ್ತದೆ. ರಶ್ಮಿಕಾರ ಸಮುದಾಯವನ್ನು ಗುರಿ ಮಾಡಿಕೊಂಡು ಹೇರುತ್ತಿರುವ ಬೆದರಿಕೆ ಎನ್ನುವ ಅರ್ಥ ಬರುತ್ತದೆ’ ಎಂದಿದ್ದಾರೆ ನಟಿ.

‘ಕಾವೇರಿ ನದಿಯನ್ನು ಬಹುವಾಗಿ ಪ್ರೀತಿಸುವ ಮಂಡ್ಯದ ಜನರನ್ನು ಪ್ರತಿನಿಧಿಸುವ ಶಾಸಕರು, ಕಾವೇರಿ ಮಾತೆಯ ಪ್ರೀತಿಯ ಪುತ್ರಿ ಮತ್ತು ಆ ಭಾಗದ ಹೆಮ್ಮೆಯ ಪುತ್ರಿ ರಶ್ಮಿಕಾ ಮಂದಣ್ಣ ಅವರನ್ನು ಟೀಕೆ ಮಾಡಿರುವುದು ವಿಪರ್ಯಾಸ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದಾಗಿ ಮತ್ತು ಜನರ ಆಶಯಗಳನ್ನು ಕಾಪಾಡುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಶಾಸಕರಾಗಿರುವಂಥಹವರು ಟೀಕಾ ವೈಖರಿ ಆಕ್ಷೇಪಾರ್ಹ ಎಂದು ಅವರು ಹೇಳಿದ್ದಾರೆ.

ಡಿಕೆ ಶಿವಕುಮಾರ್ ಅವರು ಚಿತ್ರರಂಗದವರ ನೆಟ್ಟು-ಬೋಲ್ಟು ಟೈಟ್ ಮಾಡುವುದು ಗೊತ್ತಿದೆ ಎಂದು ಹೇಳಿದ ಬೆನ್ನಲ್ಲೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ರವಿಕುಮಾರ್ ರಶ್ಮಿಕಾ ಮಂದಣ್ಣ ಅವರ ಮೇಲೆ ವಾಕ್ಪ್ರಹಾರ ಮಾಡಿದ್ದರು. ಕಾರ್ಯಕ್ರಮಕ್ಕೆ ಕರೆಯಲು ಹೋದಾಗ ಕರ್ನಾಟಕದ ಬಗ್ಗೆ ತುಚ್ಛವಾಗಿ ಮಾತನಾಡಿದ್ದರು ಎಂದು ಆರೋಪ ಮಾಡಿದ್ದರು.

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ಬೆಳೆದ ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ ಅನ್ನೋದು ಕಾಂಗ್ರೆಸ್ ಶಾಸಕ ರವಿ ಗಣಿಗ ಅವರ ಆಕ್ಷೇಪ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಶಾಸಕ ರವಿ ಗಣಿಗ ಅವರ ಈ ನೇರ ನುಡಿ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನಟ್ಟು, ಬೋಲ್ಟ್ ಟೈಟ್ ಮಾಡುವ ಹೇಳಿಕೆಗಳು ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.

 ಚಲನಚಿತ್ರ ಕಲಾವಿದರ ಮೇಲೆ ನೀಡಿದ ಈ ಹೇಳಿಕೆಗಳು ಸಂಚಲನ ಸೃಷ್ಟಿಸಿದ್ದು, ನಟಿ ರಶ್ಮಿಕಾ ಮಂದಣ್ಣಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಸಿಟ್ಟಿಗೆದ್ದಿರುವ ಕೊಡವ ಸಮುದಾಯದ ಮುಖಂಡರು ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಖಂಡಿಸಿದ್ದಾರೆ. ಅಷ್ಟೇ ಅಲ್ಲ ನಮ್ಮ ಸಮುದಾಯದ ಹೆಣ್ಣುಮಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್‌ ಅವರಿಗೂ ಪತ್ರ ಬರೆದಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಕೊಡವ ಸಮುದಾಯ ಆಗ್ರಹಿಸಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner