ನಿವೃತ್ತ ರೈಲ್ವೆ ಉದ್ಯೋಗಿಗೆ ವಿಡಿಯೋ ಕಾಲ್ ಮಾಡಿದ ಸೈಬರ್ ವಂಚಕರು ನಗ್ನ ಚಿತ್ರಗಳಿದ್ದು ಲೀಕ್ ಮಾಡೋದಾಗಿ ಬೆದರಿಕೆಹಾಕಿದ್ದು, ಹೆದರಿದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ. ನಿವೃತ್ತ ರೈಲ್ವೆ ಉದ್ಯೋಗಿ ಡಿಯಾಗೋ ನಜರತ್ (83), ಪಾವಿಯಾ ನಜರತ್ (79) ಆತ್ಮಹತ್ಯೆ ಮಾಡಿಕೊಂಡ ದಂಪತಿ.
ಸೈಬರ್ ವಂಚಕರ ಬೆದರಿಕೆಯಿಂದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.
ಕಳೆದ ಒಂದು ತಿಂಗಳಿಂದ ಸೈಬರ್ ಖದೀಮರು ವೃದ್ಧ ದಂಪತಿ ಬೆನ್ನು ಬಿದ್ದಿದ್ದರು. ಪೊಲೀಸರೆಂದು ಹೇಳಿಕೊಂಡು ನಿಮ್ಮ ನಗ್ನ ಚಿತ್ರಗಳಿವೆ ಎಂದು ವಿಡಿಯೋ ಕಾಲ್ ಮಾಡಿದ್ದರು. ಕೇಳಿದಷ್ಟು ಹಣ ಕೊಡದಿದ್ದರೆ ನಗ್ನ ಚಿತ್ರಗಳನ್ನು ವೈರಲ್ ಮಾಡುವ ಬೆದರಿಕೆ ಹಾಕಿದ್ದರು. ಇದರಿಂದ ಈಗಾಗಲೇ ಅವರ ಖಾತೆಗೆ ವೃದ್ಧ ದಂಪತಿ ಆರು ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದರು. ಹೀಗಿದ್ದರೂ ಮತ್ತಷ್ಟು ಹಣ ನೀಡುವಂತೆ ಪೀಡಿಸಲು ಶುರು ಮಾಡಿದ್ದರಂತೆ.
ಖದೀಮರ ಕಿರಿಕಿರಿಗೆ ಬೇಸತ್ತು ಮೊದಲು ಪಾವಿಯಾ ಅವರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಪತ್ನಿ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಮನನೊಂದು ಪತಿ ಡಿಯಾಗೋ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಕುವಿನಿಂದ ಕತ್ತು, ಕೈ ಕೊಯ್ದುಕೊಂಡು ಡಿಯಾಗೋ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ವಸಹಾಯ ಸಂಘದ ಮಹಿಳೆ ವೃದ್ಧ ದಂಪತಿ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರ ಭೇಟಿ ನೀಡಿ, ಬೀಮ್ಸ್‌ನಲ್ಲಿ ಮರಣೋತ್ತರ ಪರೀಕ್ಷೆಗೆ ಸಿದ್ದತೆ ನಡೆಸಿದ್ದಾರೆ.
Log in to write reviews