ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terror Attack) ನಂತರ ಭಾರತ-ಪಾಕಿಸ್ತಾನ ಉದ್ವಿಗ್ನತೆ ಹೆಚ್ಚುತ್ತಿದೆ. ಎರಡೂ ದೇಶಗಳ ನಡುವೆ ಯುದ್ಧ ಉಂಟಾಗಬಹುದೆಂಬ ಭೀತಿ ಎದುರಾಗಿದೆ. ಈ ನಡುವೆ ಕೇಂದ್ರ ಗೃಹ ಸಚಿವಾಲಯ ನಾಳೆ ( ಮೇ 7) ಮಾಕ್ ಡ್ರಿಲ್ (Mock Drill) ನಡೆಸುವಂತೆ ರಾಜ್ಯಗಳಿಗೆ ಸೂಚಿಸಿತ್ತು. ನಾಳೆ ಭಾರತದ 259 ಸ್ಥಳಗಳಲ್ಲಿ ನಾಗರಿಕ ರಕ್ಷಣಾ ಡ್ರಿಲ್ ನಡೆಯಲಿದೆ. ಈ ಅಣಕು ಡ್ರಿಲ್‌ನಲ್ಲಿ ವಾಯುದಾಳಿ ಸೈರನ್‌ಗಳು, ಬ್ಲ್ಯಾಕ್‌ಔಟ್ ಪ್ರೋಟೋಕಾಲ್‌ಗಳು ಮತ್ತು ಸಾರ್ವಜನಿಕ ತರಬೇತಿ ನಡೆಯಲಿದ್ದು, ಅಧಿಕಾರಿಗಳು ಟಾರ್ಚ್‌ಗಳು, ಮೇಣದಬತ್ತಿಗಳು ಮತ್ತು ಹಣವನ್ನು ಸಿದ್ಧವಾಗಿಟ್ಟುಕೊಳ್ಳಲು ನಾಗರಿಕರಿಗೆ ಸೂಚಿಸಿದ್ದಾರೆ.
ಆಪತ್ಕಾಲದಲ್ಲಿ ಅಥವಾ ಯುದ್ಧದ ಸಮಯದಲ್ಲಿ ಮಾಡಿಕೊಳ್ಳಬೇಕಾದ ಸಿದ್ಧತೆಯನ್ನು ಪರಿಶೀಲಿಸಲು ಗೃಹ ಸಚಿವಾಲಯ ಸೋಮವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಣಕು ಕವಾಯತುಗಳನ್ನು ನಡೆಸುವಂತೆ ನಿರ್ದೇಶನ ನೀಡಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ಮಧ್ಯೆ ಈ ನಿರ್ದೇಶನ ಬಂದಿದೆ. ಮೇ 7 ರಂದು ದೇಶಾದ್ಯಂತ ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ಈ ಕವಾಯತುಗಳನ್ನು ನಡೆಸಲಾಗುವುದು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. “ಪ್ರತಿಕೂಲ ದಾಳಿ”ಯ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ವಾಯುದಾಳಿ ಎಚ್ಚರಿಕೆ ಸೈರನ್‌ಗಳ ಕಾರ್ಯಾಚರಣೆಗೆ ಸಿದ್ಧತೆಯನ್ನು ಪರಿಶೀಲಿಸುವುದು ಮತ್ತು ಜನರಿಗೆ ರಕ್ಷಣಾ ಅಂಶಗಳ ಕುರಿತು ತರಬೇತಿ ನೀಡುವುದು ತರಬೇತಿ ಈ ಮಾಕ್ ಡ್ರಿಲ್‌ನಲ್ಲಿ ಇರಲಿದೆ.
ಈ ಮಾಕ್ ಡ್ರಿಲ್ ಕ್ರ್ಯಾಶ್-ಬ್ಲಾಕ್ಔಟ್ ಕ್ರಮಗಳು, ಪ್ರಮುಖ ಸ್ಥಾವರಗಳು ಮತ್ತು ಕಟ್ಟಡಗಳ ಆರಂಭಿಕ ಮರೆಮಾಚುವಿಕೆ, ಜನರನ್ನು ಸ್ಥಳಾಂತರಿಸುವ ಯೋಜನೆಗಳನ್ನು ನವೀಕರಿಸುವುದನ್ನು ಒಳಗೊಂಡಿರುತ್ತವೆ. ಭಾರತೀಯ ವಾಯುಪಡೆ (IAF)ಯೊಂದಿಗೆ ಹಾಟ್‌ಲೈನ್ ಮತ್ತು ರೇಡಿಯೋ-ಸಂವಹನ ಸಂಪರ್ಕಗಳ ಕಾರ್ಯಾಚರಣೆ, ನಿಯಂತ್ರಣ ಕೊಠಡಿಗಳು ಮತ್ತು ನೆರಳು ನಿಯಂತ್ರಣ ಕೊಠಡಿಗಳ ಕಾರ್ಯವನ್ನು ಪರೀಕ್ಷಿಸುವುದನ್ನು ಮಾಕ್ ಡ್ರಿಲ್ ಒಳಗೊಂಡಿರುತ್ತವೆ. ನಾಳೆ ಯಾವೆಲ್ಲ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ ಎಂಬ ಪಟ್ಟಿ ಇಲ್ಲಿದೆ.
ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಬುಧವಾರ ನಡೆಯಲಿರುವ ರಾಷ್ಟ್ರವ್ಯಾಪಿ ಅಣಕು ಡ್ರಿಲ್‌ನಲ್ಲಿ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 259 ಜಿಲ್ಲೆಗಳು ಭಾಗವಹಿಸಲಿವೆ. ಅವುಗಳಲ್ಲಿ ಕರ್ನಾಟಕದ ಬೆಂಗಳೂರು ನಗರ, ಮಲ್ಲೇಶ್ವರ, ರಾಯಚೂರು ಕೂಡ ಸೇರಿವೆ. ಹಾಗೇ, ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಂತಹ ಗಡಿ ರಾಜ್ಯಗಳಲ್ಲಿ ನೆಲೆಗೊಂಡಿರುವ ಜಿಲ್ಲೆಗಳಿಗೆ ಬಹು-ಅಪಾಯದ ಸನ್ನಿವೇಶಗಳನ್ನು ಅನುಕರಿಸುವ ಡ್ರಿಲ್ ಅನ್ನು ನಡೆಸಲು ಸೂಚನೆ ನೀಡಲಾಗಿದೆ. ದೆಹಲಿ, ಚೆನ್ನೈ, ಮುಂಬೈ, ಬೆಂಗಳೂರು, ಅಹಮದಾಬಾದ್ ಮುಂತಾದ ಮೆಟ್ರೋ ಸಿಟಿಗಳಲ್ಲೂ ಮಾಕ್ ಡ್ರಿಲ್ ನಡೆಯಲಿದೆ.
Log in to write reviews