ವೃದ್ಧೆ ಅಮ್ಮನನ್ನು ಹಸಿವೆಯಿಂದ ಬಳಲುವಂತೆ ಮಾಡಿ ಮನೆಯಲ್ಲಿ ಕೂಡಿ ಹಾಕಿ ಹೋದ ಮಹಾಶಯನ ಕಥೆ ಇದು. ಪತ್ನಿ ಮತ್ತು ಮಕ್ಕಳ ಸಮೇತ ಮಾಡಿದ ಪಾಪವನ್ನು ತೊಳೆದುಕೊಳ್ಳಲು ತ್ರಿವೇಣಿ ಸಂಗಮಕ್ಕೆ ಹೋಗಿದ್ದಾರೆ ಈ ಪಾಪಿ ಮಗ!
ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಿಸಿಎಲ್ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿ ಅಖಿಲೇಶ್ ಪ್ರಜಾಪತಿ ತಮ್ಮ 65 ವರ್ಷದ ಅನಾರೋಗ್ಯ ಪೀಡಿತ ತಾಯಿಯನ್ನು ಮನೆಗೆ ಕೂಡಿಹಾಕಿ, ಪತ್ನಿ ಮತ್ತು ಮಕ್ಕಳೊಂದಿಗೆ ಕುಂಭ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ತೆರಳಿದ್ದಾನೆ.
"ಒಳಗಿನಿಂದ ಯಾರೋ ಗೇಟ್ ಬಡಿಯುತ್ತಿರುವುದನ್ನು ನಾನು ಕೇಳಿದೆ ಮತ್ತು ನಾನು ಗೇಟ್‌ನ ರಂಧ್ರದ ಮೂಲಕ ಇಣುಕಿ ನೋಡಿದಾಗ ಸಂಜು ದೇವಿ ಒಳಗೆ ಸಹಾಯಕ್ಕಾಗಿ ಅಳುತ್ತಿರುವುದು ಕಂಡುಬಂತು" ಎಂದು ಹೆಸರು ಹೇಳಲು ಬಯಸದ ನೆರೆಹೊರೆಯವರು ಹೇಳಿದ್ದಾರೆ.
ನೆರೆಹೊರೆಯವರಿಗೂ ಈ ವಿಷಯ ಹೇಳಿರಲಿಲ್ಲ. ಸಾಲದು ಎನ್ನುವುದಕ್ಕೆ ಹೆತ್ತ ಅಮ್ಮನಿಗೆ ಬೇಕಾದಷ್ಟು ಆಹಾರದ ವ್ಯವಸ್ಥೆಯನ್ನೂ ಈ ಪುತ್ರಮಹಾಶಯ ಮಾಡಿರಲಿಲ್ಲ. ಆದ್ದರಿಂದ ಹಸಿವಿನಿಂದ ಬಳಲುತ್ತಿದ್ದ ವೃದ್ಧ ತಾಯಿ ಸಹಾಯಕ್ಕಾಗಿ ಕೂಗಿಕೊಂಡಾಗ ನೆರೆಹೊರೆಯವರು ಬೀಗ ಒಡೆದು ಒಳಗೆ ಪ್ರವೇಶಿಸಿದರು. ಪರಿಸ್ಥಿತಿ ಎಷ್ಟು ಭೀಕರವಾಗಿತ್ತೆಂದರೆ, ಹಸಿವಿನಿಂದ ಆ ವೃದ್ಧೆ ಪ್ಲಾಸ್ಟಿಕ್ ತಿನ್ನಲು ಪ್ರಯತ್ನಿಸುತ್ತಿದ್ದಳು.
ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ನೆರೆಹೊರೆಯವರು ಮಗಳು ಮತ್ತು ಮಹಿಳೆಯ ಸಹೋದರನಿಗೆ ಈ ಬಗ್ಗೆ ಮಾಹಿತಿ ನೀಡಿದರು. ನಂತರ, ತನ್ನ ಮಾವನೊಂದಿಗೆ ಸ್ಥಳಕ್ಕೆ ಆಗಮಿಸಿದ ಸಂಜು ದೇವಿಯ ಮಗಳು ಚಾಂದನಿ ಕುಮಾರಿ ಕೂಡ ಆಘಾತ ಮತ್ತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
"ನನ್ನ ಸಹೋದರ ಯಾವಾಗಲೂ ಸ್ವಾರ್ಥಿ, ಆದರೆ ಅವನು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ" ಎಂದು ಚಾಂದನಿ ಕುಮಾರಿ ಹೇಳಿದ್ದಾರೆ. ಅಲ್ಲದೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅವರು ಈ ವಿಷಯದ ಬಗ್ಗೆ ರಾಮಗಢ ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರ ಸಹಾಯದಿಂದ ವೃದ್ಧೆಯನ್ನು ಹೊರತೆಗೆದು ಚಿಕಿತ್ಸೆಗಾಗಿ ರಾಮಗಢ ಸದರ್ ಆಸ್ಪತ್ರೆಗೆ ಕಳುಹಿಸಿದರು.
ತಾಯಿಯ ಆರೋಗ್ಯ ಹದಗೆಟ್ಟ ಕಾರಣ, ಅವರನ್ನು ಪ್ರಯಾಗ್‌ರಾಜ್‌ಗೆ ಕರೆದುಕೊಂಡು ಹೋಗಲಿಲ್ಲ ಎಂದು ಮಗ ಹೇಳಿದ್ದಾನೆ! ಈ ವಿಷಯದ ಬಗ್ಗೆ, ರಾಮಗಢ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಕೃಷ್ಣ ಕುಮಾರ್, ಮಾಹಿತಿ ಪಡೆದ ನಂತರ, ವಿವಾಹಿತ ಮಗಳಿಗೆ ಕರೆ ಮಾಡಿ ಮನೆಯ ಮುಖ್ಯ ದ್ವಾರವನ್ನು ಒಡೆದು ವೃದ್ಧೆಯನ್ನು ಹೊರಗೆ ಕರೆದು ರಾಮಗಢ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ವಿಷಯದಲ್ಲಿ ಯಾವುದೇ ದೂರು ದಾಖಲಾಗಿದ್ದರೆ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಆತನ ವಿರುದ್ಧ ಕ್ರಮ ಕೈಗೊಂಡು ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
Log in to write reviews