No Ads

ಪತ್ನಿ ಕೊಂದು ಕಾರಿನಲ್ಲಿ ಹೊರಟವ ವಿಷ ಕುಡಿದಿದ್ದ, ಕೊಲೆ ಕಾರಣ ಬಾಯ್ಬಿಡದ ಟೆಕ್ಕಿ

ಜಿಲ್ಲೆ 2025-03-31 12:19:25 662
post

ಬೆಂಗಳೂರು: ಹೆಂಡತಿಯನ್ನು ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿಟ್ಟು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಟೆಕ್ಕಿಯನ್ನ ಪೊಲೀಸರು ಬೆಂಗಳೂರಿಗೆ  ಕರೆತಂದಿದ್ದಾರೆ. ಸ್ವಂತ ಅತ್ತೆ ಮಗಳನ್ನ ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದ ಟೆಕ್ಕಿ, ಇದೀಗ ಕೊಲೆ ಮಾಡಿ ಪಶ್ಚಾತ್ತಾಪದಲ್ಲಿದ್ದಾನೆ.

ಪತ್ನಿ ಗೌರಿಯನ್ನು ಕೊಂದು ಸೂಟ್‌ಕೇಸ್‌ಗೆ ತುಂಬಿದ್ದ ಆರೋಪಿ ಟೆಕ್ಕಿ ರಾಕೇಶ್ ಮಹಾರಾಷ್ಟ್ರಕ್ಕೆ ಎಸ್ಕೇಪ್ ಆಗಿದ್ದ. ಶನಿವಾರ ರಾತ್ರಿಯೇ ಪೊಲೀಸರು ಆತನನ್ನ ಕೋರಮಂಗಲದ ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಹಾಜರು ಪಡಿಸಿದ್ದಾರೆ. ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ಏ. 1ರಂದು ಓಪನ್ ಕೋರ್ಟ್‌ನಲ್ಲಿ ಬಾಡಿ ವಾರಂಟ್ ಮೇಲೆ ಅರ್ಜಿ ಸಲ್ಲಿಸಿ ಕಸ್ಟಡಿಗೆ ಪಡೆಯಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ಆರೋಪಿ ರಾಕೇಶ್, ಪತ್ನಿಯನ್ನು ಕೊಲೆ ಮಾಡಿ ಕಾರಿನಲ್ಲಿ ಮಹಾರಾಷ್ಟ್ರ ಕಡೆ ಹೊರಟಿದ್ದ. ಕರ್ನಾಟಕ-ಮಹಾರಾಷ್ಟ್ರ ಗಡಿಯ ಕಾಗಲ್ ಎಂಬಲ್ಲಿ ವಿಷ ಖರೀದಿಸಿದ್ದ. ಫಿನಾಯಿಲ್, ಜಿರಲೆ ಔಷಧಿಯನ್ನ ಖರೀದಿಸಿ ಮುಂದೆ ಶಿರವಾಲ್‌ಗೆ ಹೋಗುವ ದಾರಿಯಲ್ಲಿ ಖಂಬಟ್ಕಿ ಎಂಬಲ್ಲಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದ. ವಿಷ ಸೇವಿಸಿದ ಕೂಡಲೇ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು.

ಈತನನ್ನ ನೋಡಿದ ಬೈಕ್ ಸವಾರರೊಬ್ಬರು ವಿಚಾರಿಸಿದ್ದಾರೆ. ಆಗ ಟೆಕ್ಕಿ, ಪತ್ನಿ ಕೊಲೆ ಮಾಡಿದ ಕಥೆ ಹೇಳಿದ್ದಾನೆ. ತಾನು ವಿಷ ಸೇವಿಸಿರೋದಾಗಿ ಹೇಳಿದ್ದ. ಬೈಕ್ ಸವಾರರು ಕೂಡಲೇ ರಾಕೇಶ್‌ನನ್ನ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಘಟನೆ ಬಗ್ಗೆ ಆರೋಪಿ ರಾಕೇಶ್ ತಂದೆ ರಾಜೇಂದ್ರ ಕೇಡೆಕರ್ ಹೇಳಿಕೆ ನೀಡಿದ್ದು, ಮೃತ ಗೌರಿ ನನ್ನ ಸಹೋದರಿಯ ಮಗಳು. ರಾಕೇಶ್ ಗೌರಿ ಮದುವೆಗೆ ನಮ್ಮ ಕುಟುಂಬದ ಒಪ್ಪಿಗೆ ಇರಲಿಲ್ಲ. ಮದುವೆ ವಿಚಾರಕ್ಕೆ ಕುಟುಂಬದ ಜೊತೆ ಗೌರಿ ಜಗಳ ಮಾಡಿಕೊಂಡಿದ್ದಳು. 2 ವರ್ಷದ ಹಿಂದೆ ವಿರೋಧದ ನಡುವೆಯೂ ಮದುವೆ ಆಗಿದ್ದರು. ಗೌರಿ ಯಾವಾಗಲೂ ನಮ್ಮ ಜೊತೆ ಜಗಳ ಆಡುತ್ತಿದ್ದಳು. ಪೊಲೀಸ್ ಠಾಣೆವರೆಗೂ ಹೋಗಿತ್ತು. ಗುರುವಾರ ಕರೆ ಮಾಡಿ ಕೊಲೆ ಬಗ್ಗೆ ಮಾಹಿತಿ ನೀಡಿದ್ದ ಎಂದು ಹೇಳಿದ್ದಾರೆ.

ಪತ್ನಿ ಕೊಲೆಗೆ ಕಾರಣ ಏನು ಎನ್ನುವುದನ್ನು ಆರೋಪಿ ಇನ್ನೂ ಬಾಯ್ಬಿಟ್ಟಿಲ್ಲ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಬಳಿಕ ಕೊಲೆಗೆ ನಿಖರ ಕಾರಣ ಗೊತ್ತಾಗಲಿದೆ.

 

No Ads
No Reviews
No Ads

Popular News

No Post Categories
Sidebar Banner
Sidebar Banner