No Ads

ಡಿ. 31ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ : ಸಂಧಾನ ಯಶಸ್ವಿ, ನೋ ಸ್ಟ್ರೈಕ್

ಜಿಲ್ಲೆ 2024-12-30 17:25:38 62
post

ಬೆಂಗಳೂರು : ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಡಿಸೆಂಬರ್ 31ರಿಂದ ಅನಿರ್ದಿಷ್ಟಾವಧಿಗೆ ಮುಷ್ಕರ ಹೂಡಲು ಮುಂದಾಗಿದ್ದ ಸಾರಿಗೆ ಸಂಸ್ಥೆಯ ನೌಕರರು, ಸಿಎಂ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರ ಮಧ್ಯಪ್ರವೇಶದಿಂದ ಹಿಂದಕ್ಕೆ ಪಡೆದಿದ್ದಾರೆ.

ವೇತನ ಹೆಚ್ಚಳ, ಹಿಂಬಾಕಿ ಪಾವತಿ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಎಲ್ಲಾ ಸಾರಿಗೆ ನಿಗಮಗಳ ನೌಕರರು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ, ಮುಖ್ಯಮಂತ್ರಿಗಳು, ಸಾರಿಗೆ ಸಚಿವರು, ಸಾರಿಗೆ ನಿಗಮದ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಲಾಗಿತ್ತು. ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡಿದ ಹಿನ್ನಲೆಯಲ್ಲಿ, ಮುಷ್ಕರ ಕೈಬಿಡಲು ನೌಕರರು, ಒಪ್ಪಿಕೊಂಡಿರುವುದಾಗಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

 

" ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಭಾನುವಾರ ಸಾರಿಗೆ ಸಚಿವರು ಹಾಗೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಭೆ ನಡೆಸಿ ಚರ್ಚಿಸಿದೆ. ಸಾರಿಗೆ ನೌಕರರು ತಮ್ಮ ವಿವಿಧ 13 ಬೇಡಿಕೆಗಳನ್ನು ಮುಂದಿಟ್ಟು, ಮುಷ್ಕರಕ್ಕೆ ಕರೆ ನೀಡಿದ್ದರು. ಈ ಎಲ್ಲಾ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಸಮಾಲೋಚಿಸಿ, ಪರಿಹರಿಸುವ ನಿರ್ಧಾರಕ್ಕೆ ನಮ್ಮ ಸರ್ಕಾರ ಬಂದಿದ್ದು, ಇದರಿಂದ ನೌಕರರು ಮುಷ್ಕರ ಕೈಬಿಡುವುದಾಗಿ ತಿಳಿಸಿದ್ದಾರೆ".

ಈ ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ನಿಗಮಗಳಿಗೆ ನೀಡಬೇಕಿರುವ ಹಣದಲ್ಲಿ ರೂ.5,900 ಕೋಟಿಯನ್ನು ಬಾಕಿ ಉಳಿಸಿದ್ದರಿಂದ ಸಮಸ್ಯೆ ಉದ್ಭವವಾಗಿದೆ. ನೌಕರರ ಕಷ್ಟವನ್ನು ಮನಗಂಡು ನಮ್ಮ ಸರ್ಕಾರ ರೂ.2,000 ಕೋಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಮುಂಬರುವ ಬಜೆಟ್‌ನಲ್ಲಿ ಬಾಕಿ ಉಳಿದಿರುವ ಹಣವನ್ನು ಬಿಡುಗಡೆಗೊಳಿಸಿ ನೌಕರರ ಹಿತ ಕಾಪಾಡಲು ನಿರ್ಧರಿಸಿದೆ".

 ಮುಷ್ಕರ ನಿರ್ಧಾರದಿಂದ ಹಿಂದೆ ಸರಿದಿರುವ ಸಾರಿಗೆ ನೌಕರರಿಗೆ ಧನ್ಯವಾದಗಳು. ನಿಮ್ಮ ಅಹವಾಲುಗಳನ್ನು ಸಮಚಿತ್ತದಿಂದ ಆಲಿಸಿ ಪರಿಹರಿಸಲು ನಮ್ಮ ಸರ್ಕಾರ ಮುಕ್ತವಾಗಿದೆ " ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

 

" ಶಕ್ತಿ ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರವು ಕೆಎಸ್ಆರ್ಟಿಸಿಗೆ - ರೂ‌‌. 2,481 ಕೋಟಿ, ಬಿಎಂಟಿಸಿಗೆ - ರೂ. 1,126 ಕೋಟಿ, ವಾಯುವ್ಯ ಸಾರಿಗೆಗೆ - ರೂ 1,613 ಕೋಟಿ . ಕಲ್ಯಾಣ ಕರ್ನಾಟಕ ಸಾರಿಗೆಗೆ- ರೂ 1,321 ಕೋಟಿ ರೂ. ಅನುದಾನ, ಒಟ್ಟು ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ರೂ 6,543 ಕೋಟಿ ಅನುದಾನವನ್ನು ಸರ್ಕಾರ 2023ರ ಜೂನ್ನಿಂದ 2024ರ ನವೆಂಬರ್ವರೆಗೆ ಬಿಡುಗಡೆ ಮಾಡಿದೆ " ಎಂದು ಸಚಿವ ರಾಮಲಿಂಗಾ ರೆಡ್ಡಿ, ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿದ್ದರು.


ಸಾರಿಗೆ ಸಂಸ್ಥೆಗಳಲ್ಲಿ ಬಿಟ್ಟುಹೋಗಿರುವ ರೂ. 5,900 ಕೋಟಿ ಸಾಲ, ಭವಿಷ್ಯ ನಿಧಿ ಹಣ ಪಾವತಿ ಬಾಕಿ, ಗ್ರಾಜ್ಯುಟಿ ಹಣ ಬಾಕಿ, ಶೂನ್ಯ ನೇಮಕಾತಿ, ಶೂನ್ಯ ಹೊಸ ಬಸ್ಸುಗಳ ಸೇರ್ಪಡೆ, ಶೂನ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಾವು ಮತ್ತೊಂದು ಪತ್ರಿಕಾಗೋಷ್ಠಿ ಮಾಡಿ ಚರ್ಚೆಗೆ ಆಹ್ವಾನಿಸಿದರೆ ಮುಖಾಮುಖಿಯಾಗಿ ಮಾತನಾಡೋಣ ಎಂದು ರಾಮಲಿಂಗಾ ರೆಡ್ಡಿ, ಬಿಜೆಪಿಗೆ ಸವಾಲು ಹಾಕಿದ್ದರು.

No Ads
No Reviews
No Ads

Popular News

No Post Categories
Sidebar Banner
Sidebar Banner