ಹಣದಾಸೆಗಾಗಿ 30 ಲಕ್ಷ ರೂ.ಗಳ ವಿಮೆ ಮಾಡಿಸಿ ತನ್ನ ತಂದೆಯನ್ನೇ ಅಪಘಾತದ ರೂಪದಲ್ಲಿ ಪುತ್ರನೊಬ್ಬ ಕೊಲೆ ಮಾಡಿದ ಘಟನೆ ಸಣ್ಣೂರ್- ಶಹಾಬಾದ್ ಮುಖ್ಯ ರಸ್ತೆಯ ಬೆಣ್ಣೂರ್(ಬಿ) ಕ್ರಶ್ ಕಮಾನ್ ಹತ್ತಿರ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಬೂಳ್ ಠಾಣೆಯ ಪೋಲಿಸರು ಆರೋಪಿ ಪುತ್ರ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ನಗರದ ಆದರ್ಶನಗರದ ನಿವಾಸಿ ಸತೀಶ್ ತಂದೆ ಕಾಳಿಂಗರಾವ್ ಖಮೀತಕರ್ ಎಂಬಾತನೇ ತಂದೆಯನ್ನು ವಿಮೆಯ ಹಣದಾಸೆಗಾಗಿ ಹತ್ಯೆ ಮಾಡಿದ ಪುತ್ರನಾಗಿದ್ದು, ಆತನಿಗೂ ಸೇರಿ ನಾಲ್ವರನ್ನು ಪೋಲಿಸರು ಬಂಧಿಸಿದ್ದಾರೆ. ಜೊತೆಗೆ ಕೊಲೆ ಸಂಚಿನ ರೂವಾರಿ ಅರುಣಕುಮಾರ್ ಹಾಗೂ ಆತನ ಸಹಚರರಾದ ತರಿ ತಾಂಡಾದ ರಾಕೇಶ್ ಮತ್ತು ಯುವರಾಜ್ ಅವರನ್ನೂ ಪೋಲಿಸರು ಬಂಧಿಸಿದ್ದಾರೆ.
ಕಳೆದ 2024ರ ಜುಲೈ 9ರಂದು ಸತೀಶ್ ತಂದೆ ಕಾಳಿಂಗರಾವ್ ಖಮೀತಕರ್ ಮಾಡಬೂಳ್ ಪೋಲಿಸ್ ಠಾಣೆಗೆ ದೂರು ಸಲ್ಲಿಸಿ, 2024ರ ಜುಲೈ 8ರಂದು ಸಂಜೆ 7-30ರ ಸುಮಾರಿಗೆ ಸಣ್ಣೂರ್-ಶಹಾಬಾದ್ ಮುಖ್ಯ ರಸ್ತೆಯ ಬೆಣ್ಣೂರ್(ಬಿ) ಕ್ರಾಸ್ ಕಮಾನ್ ಹತ್ತಿರ ರಸ್ತೆ ಮೇಲೆ ತಾನು ಮತ್ತು ತನ್ನ ತಂದೆ ಕಾಳಿಂಗರಾವ್ ಇಬ್ಬರೂ ಸ್ಕೂಟಿ ನಂಬರ್ ಕೆಎ-32 ಹೆಚ್.ಹೆಚ್-3039ರ ಮೇಲೆ ಬೆಣ್ಣೂರ್(ಬಿ) ಗ್ರಾಮಕ್ಕೆ ಸಾಲದ ಹಣ ತರಲು ಹೊಗುತ್ತಿರುವಾಗ ಹಿಂದಿನಿಂದ ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಡಿಕ್ಕಿಪಡಿಸಿದ್ದರಿಂದ ತನ್ನ ತಂದೆಗೆ ಭಾರಿ ರಕ್ತಗಾಯಗಳಾಗಿ ಮೃತಪಟ್ಟ ಮತ್ತು ತನಗೆ ರಕ್ತ ಗಾಯಗಳಾಗಿವೆ ಎಂದು ತಿಳಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಕೈಗೊಂಡಾಗ ತಂದೆಯನ್ನು ಅಪಘಾತದ ರೂಪದಲ್ಲಿ ಪುತ್ರನೇ ಕೊಲೆ ಮಾಡಿರುವ ದುಷ್ಕøತ್ಯ ಬಯಲಿಗೆ ಬಂದಿತು.
ಪೋಲಿಸರು ದೂರುದಾರ ಸತೀಶ್ ಈತನಿಗೆ ಯಾರ ಹತ್ತಿರ ಸಾಲ ಪಡೆದುಕೊಳ್ಳಲು ಬೆಣ್ಣುರ್(ಬಿ) ಗ್ರಾಮಕ್ಕೆ ಹೊಗುತ್ತಿರುವ ಬಗ್ಗೆ ಮತ್ತು ಪ್ರಕರಣದ ಬಗ್ಗೆ ಮಾಹಿತಿ ಕೇಳಿದಾಗ, ತನಿಖೆಗೆ ಯಾವುದೇ ಸರಿಯಾದ ಸ್ಪಂದನೆಯನ್ನು ಆತ ಕೊಡಲಿಲ್ಲ ಮತ್ತು ಘಟನೆಯ ಬಗ್ಗೆ ಹೆಚ್ಚಿನ ವಿವರಣೆ ಪಡೆಯುವಗೋಸ್ಕರ ಕೇಳಲಾಗಿ ಯಾವುದಾದರೊಂದು ನೆಪ ಹೇಳುತ್ತಿದ್ದ. ನಂತರ ತನಿಖೆ ಕಾಲಕ್ಕೆ ಫಿರ್ಯಾದಿ ಮೇಲೆ ಸಂಶಯ ಬಂದು ಒಂದು ವಾರದ ಹಿಂದೆ ಫಿರ್ಯಾದಿ ಸತೀಶ್ ಈತನಿಗೆ ಪೊಲೀಸ್ ನೋಟಿಸ್ ಮುಖಾಂತರ ತನಿಖೆಗೆ ಹಾಜರಾಗಲು ಸಿಬ್ಬಂದಿಯನ್ನು ನೇಮಿಸಿ ಕಳುಹಿಸಿದಾಗ, ಸದರಿ ಫಿರ್ಯಾದಿ ಮನೆ ಮಾರಾಟ ಮಾಡಿ ಕುಟುಂಬ ಸಮೇತ ತೆಲಂಗಾಣ ರಾಜ್ಯಕ್ಕೆ ಹೋಗಿರುವುದಾಗಿ ಪೋಲಿಸರಿಗೆ ತಿಳಿದುಬಂದಿತು.
ಇದರಿಂದ ಪೋಲಿಸರಿಗೆ ಇನ್ನೂ ಸಂಶಯ ಬಲವಾಗಿ ಅವನ ಕುಟುಂಬದ ಹಿನ್ನೆಲೆ, ಪ್ರತಿಯೊಬ್ಬರ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಮೃತ ಕಾಳಿಂಗರಾವ್ ಈತನ ಸಾವಿನಲ್ಲಿ ಬಲವಾದ ಸಂಶಯಗಳು ಮೂಡಲಾರಂಭಿಸಿದ್ದು, ಹೆಚ್ಚಿನ ವಿಚಾರಣೆ ಅವಶ್ಯಕತೆ ಕಂಡು ಬಂದಿದ್ದರಿಂದ, ಸದರಿ ಪ್ರಕರಣವನ್ನು ಬೇಧಿಸಲು ಅಪರ ಪೋಲಿಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ್ ಹಾಗೂ ಶಹಾಬಾದ್ ಉಪ ವಿಭಾಗದ ಡಿವೈಎಸ್‍ಪಿ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಕಾಳಗಿ ವೃತ್ತದ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‍ಐಗಳಾದ ಚೇತನ್, ಶ್ರೀಮತಿ ಶೀಲಾದೇವಿ ಹಾಗೂ ಸಿಬ್ಬಂದಿಗಳಾದ ಆನಂದ್, ವೀರಶೆಟ್ಟಿ, ಪರಶುರಾಮ್, ಪ್ರೇಮಕುಮಾರ್, ನವಾಜ್ ಅಲಿ, ಕಮಲಾಕರ್, ಮಾಳಗೊಂಡ್, ರಮೇಶ್, ಪ್ರಶಾಂತ್, ಶಾಂತಮಲ್ಲಪ್ಪ, ಗಫೂರ್, ಜಾವೀದ್, ಅರುಣ್, ಹಣಮಂತ್, ಕೊಟ್ರೇಶ್, ಕೃಷ್ಣಾ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಯಿತು.
ತನಿಖೆ ಕಾಲಕ್ಕೆ ಸದರಿ ಪ್ರಕರಣದ ಫಿರ್ಯಾದಿ ಸತೀಶ್‍ನಿಗೆ ಪೋಲಿಸರು ವಶಕ್ಕೆ ಪಡೆದುಕೊಂಡು ಕೂಲಂಕಷವಾಗಿ ವಿಚಾರಣೆ ಕೈಗೊಂಡಾಗ, ವಿಚಾರಣೆ ಕಾಲಕ್ಕೆ ಸಾಲ ಆಗಿದ್ದನ್ನು ತೀರಿಸಲು ತಂದೆಯನ್ನೆ ಸಾಯಿಸಿ ಅಪಘಾತಪಡಿಸಿದ ವಿಮೆ ಹಣ ಮತ್ತು ಪ್ರತ್ಯೇಕವಾಗಿ ಕಡಿಮೆ ಅವಧಿಯ ಆರೋಗ್ಯ ವಿಮೆ ಮಾಡಿಸಿ 2 ವಿಮೆಯ ಹಣವನ್ನು ಕ್ಲೇಮ್ ಮಾಡಿದ್ದು, ಸಾಲವು ತೀರುತ್ತದೆ ಮತ್ತು ನಿನಗೂ ಕೂಡಾ ಹಣ ಸಿಗುತ್ತದೆ ಅಂತ ಪ್ರಕರಣದ ರೂವಾರಿ (ಮಾಸ್ಟರ್ ಮೈಂಡ್) ಅರುಣಕುಮಾರ್ ದುಷ್ಕ್ರತ್ಯದ ಯೋಜನೆಯನ್ನು ಹೆಣೆದಿದ್ದು, ಅದರ ಪ್ರಕಾರ ಜನೇವರಿ-2024ರಲ್ಲಿ ಒಂದು ಶ್ರೀರಾಮ್ ಪೇನ್‍ಷೇನ್ ಇನ್ಸೂರೆನ್ಸ್ ಮತ್ತು ಮಾರ್ಚ್-2024ರಲ್ಲಿ ಒಂದು ನೀವಾ ಭೂಪಾ ಹೇಲ್ತ್ ಇನ್ಸೂರೆನ್ಸ್ ಪಾಲಿಸಿ ಮಾಡಿಸಿ 22,000ರೂ.ಗಳ ಪ್ರೀಮಿಯಮ್ ತುಂಬಿರುವುದಾಗಿ ಬಾಯಿಬಿಟ್ಟ.
ತದ ನಂತರ ಫಿರ್ಯಾದಿ ಸತೀಶ್ ಮತ್ತು ಅರುಣಕುಮಾರ್ ಅವರು ಅಪಘಾತ ಯಾವಾಗ, ಎಲ್ಲಿ, ಹೇಗೆ ಮಾಡಬೇಕೆಂದು ಸಂಚು ರೂಪಿಸಿದರು. ಅರುಣಕುಮಾರ್ ಈತನು ಅಪಘಾತ ಮಾಡಿಸಿ ಕೊಲೆ ಮಾಡಿ ಪೊಲೀಸ್‍ರಿಗೆ ಯಾವ ರೀತಿ ಸುಳ್ಳು ಹೇಳಿ ಎಫ್‍ಐಆರ್ ಮಾಡಿಸಿ ಅದನ್ನು ದಾಖಲು ಮಾಡುವವರೆಗಿನ ಜವಾಬ್ದಾರಿ ನನ್ನದು, ಪಾಲಿಸಿ ಹಣ ಕ್ಲೇಮ್ ಆದ ನಂತರ ನೀನು ನನಗೆ 7 ಲಕ್ಷ ಹಣ ಸುಪಾರಿ ರೂಪದಲ್ಲಿ ಕೊಡಬೇಕು ಎಂದು ಹೇಳಿದಾಗ, ಸತೀಶನು 5 ಲಕ್ಷ ಸುಪಾರಿಗೆ ಒಪ್ಪಿದ. ನಂತರ ಎಲ್ಲರೂ ಒಳ ಸಂಚು ಮಾಡಿ ಕೃತ್ಯ ಎಸಗಲು ಅರುಣಕುಮಾರ್‍ನು ತನ್ನ ಸಹಚರರಾದ ತರಿ ತಾಂಡಾದ ರಾಕೇಶ್ ಮತ್ತು ಯುವರಾಜ್ ಅವರನ್ನು ಸಂಪರ್ಕ ಮಾಡಿ ಅವರಿಬ್ಬರಿಗೂ ತಲಾ 30 ಸಾವಿರಕ್ಕೆ ಕೃತ್ಯ ಎಸಗಲು ಹೇಳಿದಾಗ ಅವರುಗಳು ತಲಾ 01 ಲಕ್ಷ ರೂ.ಗಳನ್ನು ಕೊಟ್ಟರೆ ಮಾಡುವುದಾಗಿ ತಿಳಿಸಿದರು. ಅದಕ್ಕೆ ಅರುಣಕುಮಾರ್‍ನು ಟ್ರಾಕ್ಟರ್ ನಮ್ಮದೇ ಇರುತ್ತದೆ ನೀವು ಕೇವಲ ಟ್ರಾಕ್ಟರ್ ಚಲಾಯಿಸಿ ಅಪಘಾತ ಮಾಡಿ ಸಾಯಿಸಿದರೆ ಸಾಕು ಮುಂದಿನದೆಲ್ಲ ನಾನೇ ನೋಡಿಕೊಳ್ಳುತ್ತೇನೆ ಎಂದು ಹೇಳಿ ತಲಾ 50 ಸಾವಿರ ರೂ.ಗಳಿಗೆ ಒಪ್ಪಿಸಿರುವ ಕುರಿತು ಆರೋಪಿ ವಿಚಾರಣೆಯ ವೇಳೆ ವಿವರಿಸಿದ.
ಒಳ ಸಂಚು ಮಾಡಿಕೊಂಡು 20204ರ ಜುಲೈ 8ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ಸತೀಶ್‍ನು ತನ್ನ ತಂದೆ ಕಾಳಿಂಗರಾವ್‍ನಿಗೆ ಬೆಣ್ಣೂರ್(ಬಿ) ಗ್ರಾಮದಲ್ಲಿ ಸಾಲ ತರುವುದಿದೆ. ಬಾ ಹೋಗಿ ಬರೋಣಾ ಎಂದು ಹೇಳಿ ತಮ್ಮ ಸ್ಕೂಟಿಯ ಮೇಲೆ ಪಾಳಾ ಗ್ರಾಮದ ಮಾರ್ಗವಾಗಿ ಬೆಣ್ಣೂರ್(ಬಿ) ಕ್ರಾಸ್ ಕಮಾನ್ ಹತ್ತಿರ ಬಂದು ಮೂತ್ರ ವಿಸರ್ಜನೆ ಮಾಡುವವನಂತೆ ನೆಪ ಮಾಡಿ ತನ್ನ ತಂದೆಗೆ ಸ್ಕೂಟಿಯಿಂದ ಇಳಿಸಿ, ನೀನು ಸ್ಕೂಟಿಯ ಹತ್ತಿರವೇ ನಿಲ್ಲು ನಾನು ಮೂತ್ರ ವಿಸರ್ಜನೆ ಮಾಡಿ ಬರುತ್ತೇನೆ ಎಂದು ಹೇಳಿ ಸ್ವಲ್ಪ ದೂರ ಹೋಗಿ, ಮೊದಲೇ ಸಂಚಿನ ಪ್ರಕಾರ ಸಜ್ಜಾಗಿದ್ದ ಅರುಣಕುಮಾರ್‍ನಿಗೆ ಮೊಬೈಲ್ ಕರೆ ಮಾಡಿ ತನ್ನ ತಂದೆಗೆ ಕರೆದುಕೊಂಡು ಬಂದ ವಿಷಯ ತಿಳಿಸಿದ. ಅರುಣಕುಮಾರ್‍ನ ಸೂಚನೆಯಂತೆ ರಾಕೇಶ್ ಮತ್ತು ಯುವರಾಜ್ ಅವರು ಅರುಣಕುಮಾರ್‍ನ ಟ್ರಾಕ್ಟರ್ ನಂಬರ ಕೆಎ-32, ಟಿಬಿ-2413ನೇದ್ದನ್ನು ಚಲಾಯಿಸಿಕೊಂಡು ಹೋಗಿ ರಸ್ತೆ ಮೇಲೆ ನಿಂತಿದ್ದ ಕಾಳಿಂಗರಾವ್‍ನಿಗೆ ಕೊಲೆ ಮಾಡುವ ಉದ್ದೇಶದಿಂದ ಎದುರುಗಡೆಯಿಂದ ಬಲವಾಗಿ ಗುದ್ದಿ ಅಪಘಾತ ಮಾಡಿ ಸಾಯಿಸಿದರು. ಸತೀಶ್‍ನು ತನಗೂ ಅಪಘಾತದಲ್ಲಿ ಗಾಯ ಆಗಿದೆ ಎಂದು ಬಿಂಬಿಸಲು ರಾಕೇಶ್‍ನ ಕಡೆಯಿಂದ ಕಲ್ಲಿನಿಂದ ತಲೆಗೆ ಹೊಡೆಸಿಕೊಂಡು ರಕ್ತಗಾಯ ಪಡಿಸಿಕೊಂಡಿದ್ದು, ಅಲ್ಲದೆ ಸ್ಕೂಟಿ ವಾಹನಕ್ಕೂ ಕೂಡ ಹಾನಿ ಮಾಡಿಸಿದ್ದಾಗಿ ಕೊಲೆಯ ಸಂಚನ್ನು ಆರೋಪಿ ವಿವರಿಸಿದ.
ಮುಂದೆ ಕಾಳಿಂಗರಾವ್ ಸಾವಿನಿಂದ ಶ್ರೀರಾಮ್ ಇನ್ಸೂರೆನ್ಸ ವತಿಯಿಂದ 5 ಲಕ್ಷ ರೂ.ಗಳ ಪಾಲಿಸಿ ಹಣ ಕ್ಲೇಮ್ ಆಗಿದ್ದು, ಒಪ್ಪಂದದಂತೆ ಸತೀಶನು ಅರುಣಕುಮಾರ್‍ನಿಗೆ 3 ಲಕ್ಷ ರೂ.ಗಳಣ್ನು ಪೋನ್ ಪೇ ಮಾಡಿದ. ನಂತರ ಇನ್ನೂ ಕೊಡಬೇಕಾದ ಹಣದಲ್ಲಿ 50 ಸಾವಿರ ರೂ.ಗಳ ನಗದು ಹಣ ಕೊಟ್ಟ. ತಾನು ಮಾಡಿರುವ ಕೃತ್ಯ ಪೊಲೀಸರಿಗೆ ಗೊತ್ತಾಗಬಾರದೆಂದು ಮತ್ತು ಸಾಲಗಾರರ ಕಾಟ ತಾಳದೆ ಆದರ್ಶ ನಗರದಲ್ಲಿರುವ ಮನೆ ಮಾರಾಟ ಮಾಡಿ, ಕುಟುಂಬ ಸಮೇತ ತೆಲಂಗಾಣ ರಾಜ್ಯದ ವಿಕಾರಾಬಾದ್ ಜಿಲ್ಲೆಯ ಮೋಮಿನಪೇಠ್ ಗ್ರಾಮಕ್ಕೆ ಹೋಗಿ ವಾಸವಾಗಿದ್ದು, ಸತೀಶ್‍ನು ಹಣದ ದುರಾಸೆಗೆ ಮತ್ತು ತಾವು ಮಾಡಿದ ಸಾಲ ತೀರಿಸಲು ತನ್ನ ಸ್ವಂತ ತಂದೆಯನ್ನೆ ಕೊಲೆ ಮಾಡಿಸಲು ಸುಫಾರಿ ನೀಡಿ, ಸುಳ್ಳು ಪ್ರಕರಣದ ಘಟನೆಯನ್ನು ಸೃಷ್ಟಿಸಿ ವಿಮೇ ಮೊತ್ತವನ್ನು ಪಡೆಯಲು ಕಡಿಮೆ ಅವಧಿಯ 2 ಆರೋಗ್ಯ ವಿಮೆ ಮಾಡಿಸಿ ಅಲ್ಲದೆ ಅಪಘಾತ ಆಗಿ ಸತ್ತರೆ ವಾಹನ ವಿಮೆ ಕೂಡಾ ಬರುತ್ತದೆಂಬ ದುರಾಸೆಯಿಂದ ತನ್ನ ತಂದೆಯ ಹೆಸರಿನಿಂದ ವಿಮೆ ಪಾಲಿಸಿಗಳನ್ನು ಮಾಡಿಸಿ ತನಗೆ ದುಡ್ಡು ಬರಬೇಕೆಂಬ ಉಪಾಯದಿಂದ ತಾನೆ ನಾಮಿನಿ ಮಾಡಿಸಿಕೊಂಡು ಕೊಲೆ ಮಾಡಿ ಹಣವನ್ನು ಪಡೆದು ವಿಮಾ ಕಂಪೆನಿಗೆ ಕೂಡಾ ಮೋಸ ಮಾಡಿದ ಬಗ್ಗೆ ಪ್ರಕರಣದ ತನಿಖೆಯಿಂದ ದೃಢಪಟ್ಟಿತು.
ಅಪಘಾತ ಪ್ರಕರಣವನ್ನು ಕೊಲೆ ಪ್ರಕರಣವೆಂದು ಬಯಲಿಗೆಳೆದ ಮಾಡಬೂಳ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಪ್ರಶಂಶಿಸಿದ್ದಾರೆ.