ರಾಜ್ಯ ರಾಜಧಾನಿಯಲ್ಲಿ ನಿನ್ನೆ ಅಮಾನವೀಯ ಕೃತ್ಯ ನಡೆದಿದೆ. ಹಸುವಿನ ಕೆಚ್ಚಲು ಕೊಯ್ದು ಅಟ್ಟಹಾಸ ಮೆರೆಯಲಾಗಿತ್ತು. ಮೂಕ ಪ್ರಾಣಿಗಳು ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿದ್ದವು. ಈ ಘಟನೆ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ನಡೆದಿತ್ತು. ಇದೀಗ ಆರೋಪಿ ಅರೆಸ್ಟ್ ಆಗಿದ್ದಾನೆ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಕೃತ್ಯದ ಹಿಂದೆ ಯಾರಿದ್ದಾರೆ? ಎಷ್ಟು ಜನರಿಂದ ಈ ಕೃತ್ಯ ನಡೆದಿದೆ? ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಂತಾಗಿದೆ. ಹೌದು ಬಿಹಾರ ಮೂಲದ ಆರೋಪಿ ಶೇಕ್ ನಸ್ರು (30 ವರ್ಷದ) ಯುವಕನನ್ನು ಬಂಧಿಸಲಾಗಿದೆ. ಮದ್ಯ ಕುಡಿದ ಆಮಲಿನಲ್ಲಿ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಬಿಹಾರದ ಚಂಪಾರಣ್ ಜಿಲ್ಲೆಯ ಆರೋಪಿ ಶೇಕ್ ನಸ್ರು ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬ್ಯಾಗ್ ಹಾಗೂ ಬಟ್ಟೆ ಬ್ಯಾಗ್ ತಯಾರಿಸೋ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದನು. ಘಟನೆ ನಡೆದ ಸ್ವಲ್ಪ ದೂರದಲ್ಲೇ ಇದ್ದ ಬ್ಯಾಗ್ ತಯಾರಿಕೆ ಫ್ಯಾಕ್ಟರಿಯಲ್ಲಿ ಹೆಲ್ಫರ್ ಆಗಿ ಕೆಲಸ ಮಾಡುತ್ತಿದ್ದನು. ಈ ಕೃತ್ಯದ ಹಿಂದೆ ಹಲವು ಜನರು ಇರಬಹುದು ಎಂದು ಊಹಿಸಲಾಗಿತ್ತು ಆದರೆ ಈ ಹೀನ ಕೃತ್ಯ ಎಸಗಿರೋದು ಒಬ್ಬನೇ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿಯೇ ಪೊಲೀಸರು ಶೇಕ್ ನಸ್ರುನನ್ನ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಜನವರಿ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಆರೋಪಿಯ ವಿರುದ್ಧ ಪ್ರಾಣಿಗಳ ಮೇಲೆ ಹಿಂಸಾಚಾರ ಹಾಗೂ ಬಿಎನ್ಎಸ್ 325 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮತ್ತೊಂದೆಡೆ ಗಾಯಗೊಂಡಿದ್ದ ಹಸುಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಸಧ್ಯ ಹಸುಗಳ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ತಿಳಿದುಬಂದಿದೆ.‘ ಹಸುಗಳ ಕೆಚ್ಚಲು ಕೊಯ್ದ ಆರೋಪಿ ಬಂಧನದ ಕುರಿತು ಮಾತನಾಡಿರುವ ಹಸುಗಳ ಮಾಲೀಕ ಕರ್ಣ ಅವರು, ಆರೋಪಿಯನ್ನ ಮೆಂಟಲ್ ಅಂತಾ ಈಗ ಹೇಳ್ತಿದ್ದಾರೆ. ಎಷ್ಟು ವರ್ಷದಿಂದ ಕೆಲಸ ಮಾಡ್ತಿದ್ದ ಎಂದು ಆ ಫ್ಯಾಕ್ಟರಿಯ ಓನರ್ ನ ಕೇಳಿ. ಮೊದಲು ಆ ಮಾಲೀಕನನ್ನ ಅರೆಸ್ಟ್ ಮಾಡಬೇಕು. ಮೆಂಟಲ್ ವ್ಯಕ್ತಿಯಾದ್ರೆ, ಹೇಗೆ ಕೆಲಸಕ್ಕೆ ಇಟ್ಕೊಂಡಿದ್ದ? ಕೃತ್ಯ ಎಸಗಿದ ಆ ವ್ಯಕ್ತಿಯನ್ನು ನಾನು ನೋಡಿದ್ದೇನೆ. ಮೆಂಟಲ್ ಈ ರೀತಿ ಮಾಡೋದಕ್ಕೆ ಸಾಧ್ಯನಾ.? ಎಂದು ಆಕ್ರೋಶ ವ್ಯಕ್ತಪಡಿಸಿದರು
ಹಸುವಿನ ಕೆಚ್ಚಲು ಕೊಯ್ದು ಅಟ್ಟಹಾಸ ಮೆರೆದ ಪಾಪಿ ಶೇಕ್ ನಸ್ರು ಖಾಕಿ ಬಲೆಗೆ

No Ads
Log in to write reviews