No Ads

ಇದು ಕರ್ನಾಟಕದ ಸ್ವಾಭಿಮಾನದ ಚುನಾವಣೆ, ದೆಹಲಿಯಲ್ಲಿ ನಿಮ್ಮ ಧ್ವನಿಯಾಗುವೆ

ಜಿಲ್ಲೆ 2024-04-11 15:26:03 138
post

ಸತತ ಎರಡು ವರ್ಷ ಬರಗಾಲ ಎದುರಿಸಿದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬಿಡಿಗಾಸು ಬರಪರಿಹಾರ ನೀಡದೆ ವಂಚನೆ ಮಾಡಿದೆ. ಇದು ಕರ್ನಾಟಕದ ಸ್ವಾಭಿಮಾನದ ಚುನಾವಣೆ. ನಮ್ಮ ಹಕ್ಕಿಗಾಗಿ ಹೋರಾಡಬೇಕಾದ ಚುನಾವಣೆ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಅವರು ಹೇಳಿದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ನರಗುಂದ ವಿಧಾನಸಭಾ ಮತಕ್ಷೇತ್ರದ ನರಗುಂದ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಹಾಗೂ ಹೊಳೆ ಆಲೂರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.   ಸಿದ್ದರಾಮಯ್ಯ ಅವರ ಸರ್ಕಾರ ಬರ ಪರಿಹಾರ ಕೊಡಿ ಎಂದು ಕೇಂದ್ರ ಸರ್ಕಾರದ ಮುಂದೆ ಕೈ ಚಾಚಿದರೂ ನಯಾಪೈಸೆ ನೀಡದೆ ಕೇಂದ್ರ ಸರ್ಕಾರ ದ್ರೋಹ ಮಾಡಿದೆ. ನಮ್ಮ ಹಕ್ಕನ್ನು ಕೇಳಿದರೆ ಸ್ಪಂದಿಸಲೇ ಇಲ್ಲ. ಆದರೆ ಖ್ಯಾತ ಉದ್ಯಮಿಗಳ ಕೋಟ್ಯಂತರ ಹಣವನ್ನು ಮನ್ನಾ ಮಾಡಲು ಕೇಂದ್ರ ಸರ್ಕಾರದ ಬಳಿ ಹಣ ಇದೆ. ಜನರು ಕಷ್ಟದಲ್ಲಿದ್ದಾರೆ. ಹಣ ಕೊಡಿ ಎಂದು ಅಂಗಲಾಚಿದರೆ ಹಣ ನೀಡಲಿಲ್ಲ. ಇದು ಸ್ವಾಭಿಮಾನ ಚುನಾವಣೆ ಎಂದು ಅವರು ವಿವರಿಸಿದರು. ಬರಪರಿಹಾರದ ಹಣ ನೀಡಿ ಎಂದರೆ ಕರ್ನಾಟಕ ಸರ್ಕಾರ ಗ್ಯಾರಂಟಿ ನೀಡಿ ದಿವಾಳಿ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೇಳುತ್ತಾರೆ. ಆದ್ದರಿಂದ ಇದು ಭಾರತದ ಭವಿಷ್ಯದ ಚುನಾವಣೆ. ಕರ್ನಾಟಕ ಸರ್ಕಾರ ರೈತರಿಗೆ ಹಣ ನೀಡಿ ಅವರ ಕಷ್ಟಕ್ಕೆ ನೆರವಾಗುತ್ತಿದೆ. ಗ್ಯಾರಂಟಿಗಳು ಸಾಮಾನ್ಯ ಜನರ ಬದುಕಿಗೆ ಆಸರೆಯಾಗಿವೆ ಎಂದರು. ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಇಂಧನ, ಗೊಬ್ಬರ, ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಬದುಕು ಕಷ್ಟವಾಗಿದೆ. ಇದಕ್ಕೆಲ್ಲ ಪರಿಹಾರ ನೀಡಲು ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು. ಈ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವಾನಂದ ಪಾಟೀಲ್, ಶ್ರೀ ಆರ್‌ ಬಿ ತಿಮ್ಮಾಪುರ, ಮಾಜಿ ಸಚಿವರಾದ ಎಸ್‌ ಆರ್‌ ಪಾಟೀಲ, ಶಾಸಕರಾದ ಜಿ ಟಿ ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ನಂಜಯ್ಯಮಠ, ಮಾಜಿ ಸಚಿವರಾದ ಅಜಯಕುಮಾರ್ ಸರನಾಯಕ, ಪಕ್ಷದ ಮುಖಂಡರಾದ ಡಿ ಆರ್ ಪಾಟೀಲ, ಬಿ ಆರ್ ಯಾವಗಲ್‌, ಆನಂದ್ ನ್ಯಾಮಗೌಡ, ಬಿ ಬಿ ಚಿಮ್ಮನಕಟ್ಟಿ, ಹಾಗೂ ರಕ್ಷಿತಾ ಈಟಿ ಸ್ಥಳೀಯ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು. ನಾನು ಜಿಲ್ಲೆಯ ಮಗಳು: ನಾನು ಹೊರಗಿನವಳಲ್ಲ. ಜಿಲ್ಲೆಯ ಮಗಳು.  ಎಲ್ಲಾ ಕಡೆ ನನ್ನನ್ನು ಜನರು ಜಿಲ್ಲೆಯ ಮಗಳಂತೆ ಸ್ವೀಕರಿಸಿದ್ದಾರೆ. ಕುಟುಂಬದ ಸದಸ್ಯೆಯಂತೆ ಕಂಡಿದ್ದಾರೆ. ಐದು ವರ್ಷದ ಕ್ಷೇತ್ರ ಜನರಿಗಾಗಿ ಜೀತದಾಳಾಗಿ ದುಡಿಯುತ್ತೇನೆ. ನಾವೆಲ್ಲ ಹೆಗಲಿಗೆ ಹೆಗಲು ಕೊಟ್ಟು ದುಡಿಯೋಣ, ಹೊಸ ಅಧ್ಯಾಯ ಬರೆಯೋಣ. ಜನರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

No Ads
No Reviews
No Ads

Popular News

No Post Categories
Sidebar Banner
Sidebar Banner