ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್‌ಗೆ ರೀಲ್ಸ್ ಕಂಟಕ ಸದ್ಯಕ್ಕೆ ಅಂತ್ಯವಾಗುವಂತೆ ಕಾಣುತ್ತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಲಾಂಗ್ ಹಿಡಿದು ರೀಲ್ಸ್ ಮಾಡಿದ ವಿನಯ್ ಗೌಡ ಮತ್ತು ರಜತ್ ಕಿಶನ್ ಸದ್ಯ ಜೈಲು ಪಾಲಾಗಿದ್ದಾರೆ. ಪೊಲೀಸರ ತನಿಖೆ ವೇಳೆ ಲಾಂಗ್ ಬದಲಿಸಿದ ಆರೋಪದ ಅಂದರೆ ಸಾಕ್ಷಿ ನಾಶ ಮಾಡಿದ ಆರೋಪದಡಿ ಇಬ್ಬರನ್ನು ಮತ್ತೆ ಬಂಧಿಸಲಾಗಿದೆ.
ರೀಲ್ಸ್ಗಾಗಿ ಮಚ್ಚು ಹಿಡಿದು ವಿಡಿಯೋ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ವಿನಯ್ ಗೌಡ ಮತ್ತು ರಜತ್ ಕಿಶನ್ ಸದ್ಯ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಂದು (ಮಾರ್ಚ್ 26)ಬುಧವಾರ ಇಬ್ಬರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ನ್ಯಾಯಾಲಯ ಇಬ್ಬರಿಗೂ ಜಾಮೀನು ನೀಡುತ್ತಾ ಅಥವಾ ಇನ್ನಷ್ಟು ದಿನಗಳ ಕಾಲ ಪೊಲೀಸರ ಕಸ್ಟಡಿಗೆ ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ರಿಯಾಲಿಟಿ ಶೋನ ಒಂದು ಸಂಚಿಕೆಗಾಗಿ ರಜತ್ ಕಿಶನ್ ನಟ ದರ್ಶನ್ ಪಾತ್ರ ಹಾಗೂ ವಿನಯ್ ಗೌಡ ಪುಷ್ಪಾ ಪಾತ್ರವನ್ನು ನಿರ್ವಹಿಸಿದ್ದರು. ಈ ಗೆಟಪ್‌ನಲ್ಲಿದ್ದ ಇಬ್ಬರು ಸ್ಟಾರ್ಸ್‌ಗಳು ವಿಡಿಯೋ ಮಾಡಿದ್ದರು.
ವಿನಯ್ ಗೌಡ ಹಾಗೂ ರಜತ್ ಕಿಶನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹಾಡಿಗೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ವಿಡಿಯೋದಲ್ಲಿ ಇಬ್ಬರು ಕೈಯಲ್ಲಿ ಲಾಂಗ್ ಹಿಡಿದು ಪೋಸ್ ಕೊಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಲಾಂಗ್ ಹಿಡಿದುಕೊಂಡು ವಿಡಿಯೋ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ವಿನಯ್ ಗೌಡ ಹಾಗೂ ರಜತ್ ಕಿಶನ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಾದ ಕಾರಣ ಪೊಲೀಸರು ಇಬ್ಬರಿಗೂ ನೋಟಿಸ್ ನೀಡಿ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಮೊದಲು ವಿನಯ್ ಗೌಡ ಸ್ವತಃ ವಿಚಾರಣೆಗೆ ಹಾಜರಾಗಿ ಸ್ಪಷ್ಟನೆ ನೀಡಿದ್ದರು. ಅಲ್ಲದೇ ಕ್ಷಮೆ ಕೋರಿ ಪತ್ರ ಬರೆದಿದ್ದರು. ಆದರೆ ರಜತ್ ಕಿಶನ್ ಬೇರೆ ಚಿತ್ರೀಕರಣದಲ್ಲಿ ಇದ್ದ ಕಾರಣ ಪತ್ನಿ ಅಕ್ಷಿತಾ ಪೊಲೀಸರ ಮುಂದೆ ಹಾಜರಾಗಿ ಪತಿ ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ್ದರಂತೆ. ಕೊನೆಗೆ ಇಬ್ಬರೂ ಜೊತೆಯಲ್ಲಿ ವಿಚಾರಣೆಗೆ ಹಾಜರಾಗಿದ್ದು, ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಕೊನೆಗೆ ಬಂಧಿಸಿದ್ದರು.
ಸೋಮವಾರ ರಾತ್ರಿ ವಿಚಾರಣೆ ಬಳಿಕ ಇಬ್ಬರನ್ನೂ ಬಿಡುಗಡೆಗೊಳಿಸಿದ್ದು, ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಈ ವೇಳೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ರೀಲ್ಸ್ ಮಾಡುವಾಗ ಬಳಸಿದ ಲಾಂಗ್ ನೀಡುವಂತೆ ತಿಳಿಸಲಾಗಿದ್ದು, ಇಲ್ಲಿ ಅಸಲಿ ಯಡವಟ್ಟು ಆಗಿದೆ. ವಿಡಿಯೋದಲ್ಲಿ ಬಳಸಲಾದ ಲಾಂಗ್ ಎಂದು ಬದಲಿ ಲಾಂಗ್‌ವೊಂದನ್ನು ಕೊಡಲಾಗಿತ್ತು. ಪೊಲೀಸರ ತನಿಖೆಯಲ್ಲಿ ರೀಲ್ಸ್ನಲ್ಲಿ ಬಳಸಿರುವ ಲಾಂಗ್ಗೂ ಫೈಬರ್ ಲಾಂಗ್ಗೂ ವ್ಯತ್ಯಾಸ ಇರುವುದು ಸ್ಪಷ್ಟವಾಗಿ ಗೊತ್ತಾಗಿತ್ತು. ಇಲ್ಲಿಂದ ತನಿಖೆ ಚುರುಕುಗೊಂಡಿದ್ದು, ಸಾಕ್ಷಿ ನಾಶ ಮಾಡಿದ ಆರೋಪದಡಿ ಇಬ್ಬರನ್ನು ಮತ್ತೆ ಬಂಧಿಸಲಾಗಿದೆ. ಮಂಗಳವಾರ ಇಡೀ ದಿನ ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದ ಪೊಲೀಸರು ರೀಲ್ಸ್ ಮಾಡಿದ ಸ್ಟುಡಿಯೊದಲ್ಲಿ ಸ್ಥಳ ಮಹಜರು ಕೂಡ ನಡೆಸಿದರು. ಈ ವೇಳೆ ಎಲ್ಲಿಯೂ ರೀಲ್ಸ್‌ನಲ್ಲಿ ಕಂಡುಬಂದ ಲಾಂಗ್ ಪತ್ತೆಯಾಗಿಲ್ಲ. ಶೂಟಿಂಗ್‌ಗಾಗಿ ತಂದ ಲಾಂಗ್ ಆದ ಕಾರಣ ಸೆಟ್‌ನವರು ತೆಗೆದುಕೊಂಡು ಹೋಗಿರಬಹುದು ಎನ್ನಲಾಗಿತ್ತು. ಗಂಟೆಗಟ್ಟಲೆ ಹುಡುಕಾಡಿದರೂ ಕೂಡ ಲಾಂಗ್ ಪತ್ತೆಯಾಗದ ಕಾರಣ, ಪೊಲೀಸ್ ತಂಡ ಅಲ್ಲಿಂದ ವಾಪಸ್ ಆದರು.
ಬಳಿಕ ರಜತ್ ಕಿಶನ್ ಹಾಗೂ ವಿನಯ್ ಗೌಡ ಇಬ್ಬರನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಿದ ಪೊಲೀಸರು, ನಿನ್ನೆ ಅಂದರೆ ಮಂಗಳವಾರ ರಾತ್ರಿಯೇ ಇಬ್ಬರನ್ನೂ ಕೂಡ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ವಿಡಿಯೋದಲ್ಲಿ ಬಳಸಲಾದ ಅಸಲಿ ಲಾಂಗ್ ಪತ್ತೆಯಾದ ಕಾರಣ ಇಬ್ಬರನ್ನೂ ಕಸ್ಟಡಿಗೆ ಕೊಡುವಂತೆ ಪೊಲೀಸರು ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡರು. ವಿಚಾರಣೆ ಬಳಿಕ ಕೋರ್ಟ್ ಇಬ್ಬರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ಇಬ್ಬರು ಸ್ಪರ್ಧಿಗಳನ್ನು ಪರಪ್ಪನ ಆಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ.
ಮೊದಲಿನಿಂದಲೂ ರಜತ್‌ಗೆ ಬೆನ್ನೆಲುಬಾಗಿ ನಿಂತಿದ್ದ ಪತ್ನಿ ಅಕ್ಷಿತಾ ಬುಜ್ಜಿ ಈ ಪ್ರಕರಣದಲ್ಲಿ ಪತಿ ಲಾಕ್ ಆಗುತ್ತಿದ್ದಂತೆ ಅವರ ಜೊತೆಗೆ ಇದ್ದು ಕಾನೂನು ಹೋರಾಟ ನಡೆಸಿದ್ದಾರೆ. ಪೊಲೀಸರು ವಿಚಾರಣೆಗೆ ಕರೆದಾಗಲೂ ಪತಿಯ ಬದಲು ತಾನೇ ಮೊದಲು ವಿಚಾರಣೆ ಎದುರಿಸಿ ಪತಿ ಬಂದು ವಿಚಾರಣೆ ಎದುರಿಸುವ ಭರವಸೆ ನೀಡಿದ್ದರು. ಬಳಿಕ ಪ್ರಕರಣದ ಗಂಭೀರತೆ ಅರಿತ ರಜತ್ ಸ್ವತಃ ಬಂದು ವಿಚಾರಣೆ ಎದುರಿಸಿದರು. ಎರಡನೇ ದಿನವು ಪತಿಯೊಂದಿಗೆ ಬಂದಿದ್ದ ಅಕ್ಷಿತಾ ಬುಜ್ಜಿ ಪತಿಯನ್ನು ಈ ಸಂಕಷ್ಟದಿಂದ ಪಾರು ಮಾಡಲು ಒದ್ದಾಡುತ್ತಿದ್ದರು.
ಸಾಕ್ಷಿ ನಾಶ ಮಾಡಿದ ಆರೋಪ ರಜತ್, ವಿನಯ್ ಲಾಕ್: ರಾತ್ರಿಯೇ ಜೈಲಿಗೆ ಶಿಫ್ಟ್

No Ads
Log in to write reviews