No Ads

ರೇವ್ ಪಾರ್ಟಿ ಮೇಲೆ ರೈಡ್ - ಓರ್ವ ಚೀನೀ ಮಹಿಳೆ ಸೇರಿ 31 ಮಂದಿ ಬಂಧನ

ಕರ್ನಾಟಕ 2025-05-26 17:17:36 312
post

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಕನ್ನಮಂಗಲ ಗೇಟ್ ಬಳಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಪಾರ್ಟಿಯಲ್ಲಿ ಭಾಗಿಯಾಗಿದ್ದ ಓರ್ವ ಚೀನೀ ಮಹಿಳೆ ಸೇರಿ 31 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಯ ವೇಳೆ ಮಾದಕ ವಸ್ತುಗಳು ಪತ್ತೆಯಾಗಿದ್ದು ಅವುಗಳನ್ನು ಪಾರ್ಟಿಯಲ್ಲಿ ಬಳಸಲಾಗಿರುವ ಅನುಮಾನಗಳು ಮೂಡಿವೆ.

ಫಾರ್ಮ್ ಹೌಸ್ ನಲ್ಲಿ ಶನಿವಾರ (ಮೇ 23) ರಾತ್ರಿ ಬರ್ತ್ ಡೇ ಪಾರ್ಟಿಯೊಂದರ ಹೆಸರಿನಲ್ಲಿ ಈ ಪಾರ್ಟಿಯನ್ನು ಆಯೋಜಿಸಲಾಗಿತ್ತು. ರಾತ್ರಿ ಆರಂಭವಾದ ಈ ಪಾರ್ಟಿಯು ಭಾನುವಾರ ಬೆಳಗಿನ ಜಾವವೂ ಮುಂದುವರಿದಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಪಾರ್ಟಿಯಲ್ಲಿ ತೊಡಗಿಸಿಕೊಂಡಿದ್ದ 31 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅವರಲ್ಲಿ ಏಳು ಮಂದಿ ಮಹಿಳೆಯರು ಎಂದು ಹೇಳಲಾಗಿದೆ.

ಫಾರ್ಮ್ ಹೌಸ್ ನಲ್ಲಿ ವ್ಯಕ್ತಿಯೊಬ್ಬರ ಹುಟ್ಟುಹಬ್ಬದ ಆಚರಣೆಗೆ ರಾತ್ರಿಯಿಡೀ ಮಾದಕವಸ್ತುಗಳನ್ನು ಬಳಸಿ ಪಾರ್ಟಿ ಮಾಡಿರುವುದು ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿಐಟಿ ಉದ್ಯೋಗಿಗಳಾದ 24 ಯುವಕರು ಮತ್ತು 7 ಯುವತಿಯರು ಸೇರಿ 31 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಎಲ್ಲರ ರಕ್ತ ಹಾಗೂ ಮೂತ್ರ ಸಂಗ್ರಹಿಸಿ ವೈದ್ಯಕೀಯ ತಪಾಸಣೆಗೆ ಕಳಿಸಲಾಗಿದೆ. ಕೆಲವರ ಬಳಿ ಅಲ್ಪಪ್ರಮಾಣದ ಕೊಕೇನ್‌, ಆಶಿಸ್‌ ಮಾದಕ ವಸ್ತುಗಳು ದೊರೆತಿವೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಮಾದಕ ವಸ್ತುಗಳ ಹಾವಳಿ

2024ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯಿಂದ ಆತಂಕಕಾರಿ ವಿಚಾರವೊಂದು ಬಹಿರಂಗವಾಗಿತ್ತು. ಕರ್ನಾಟಕದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗುತ್ತಿದ್ದು, 2021ರಿಂದ ಮೂರು ವರ್ಷಗಳಲ್ಲಿ, ಮಾದಕ ವಸ್ತುಗಳ ನಿಗ್ರಹ ಕಾಯ್ದೆಯಡಿ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 20 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

No Ads
No Reviews
No Ads

Popular News

No Post Categories
Sidebar Banner
Sidebar Banner